ಸಿದ್ದರಾಮಯ್ಯರಿಂದ ಸಮನ್ವಯ ಸಮಿತಿಯಲ್ಲಿ ತುಘಲಕ್ ದರ್ಬಾರ್: ವಿಶ್ವನಾಥ್

ಬೆಂಗಳೂರು

      ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಕೈಗೊಂಬೆಯಾಗಿರುವ ಕಾಂಗ್ರೆಸ್-ಜೆಡಿಎಸ್ ಸಮನ್ವಯ ಸಮಿತಿ ಉಭಯ ಪಕ್ಷಗಳಲ್ಲಿ ಸಮನ್ವಯ ಸಾಧಿಸುವಲ್ಲಿ ವಿಫಲವಾಗಿದ್ದರಿಂದ ಲೋಕಸಭಾ ಚುನಾವಣೆಯಲ್ಲೂ ಸೋಲಾಗಿದ್ದಷ್ಟೇ ಅಲ್ಲ,ಸರ್ಕಾರವೂ ಸರಿಯಾಗಿ ಕೆಲಸ ಮಾಡಲಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಜೆಡಿಎಸ್‍ನ ಹಿರಿಯ ನಾಯಕ ಹೆಚ್.ವಿಶ್ವನಾಥ್ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

      ಅವರ ರಾಜೀನಾಮೆಯ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರ್ಕಾರದ ನೆತ್ತಿಯ ಮೇಲೆ ತೂಗಾಡುತ್ತಿರುವ ತೂಗುಕತ್ತಿಯನ್ನು ಆಧರಿಸಿರುವ ಹಗ್ಗ ಮತ್ತಷ್ಟು ದುರ್ಬಲವಾಗಿದ್ದು ಇದೇ ಕಾಲದಲ್ಲಿ ಕಾಂಗ್ರೆಸ್‍ನ ಹಿರಿಯ ನಾಯಕರಿಬ್ಬರು ಪಕ್ಷದ ವಿರುದ್ಧ ಗುಡುಗು ಹಾಕಿರುವುದು ಸರ್ಕಾರಕ್ಕೆ ಮತ್ತಷ್ಟು ಆತಂಕ ತಂದಿದೆ.

     ಇಂದಿಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಹೆಚ್.ವಿಶ್ವನಾಥ್ ಅವರು ತಮ್ಮ ರಾಜೀನಾಮೆಯ ಕುರಿತು ಪ್ರಕಟಿಸಿದ್ದಲ್ಲದೆ ಸಿದ್ಧರಾಮಯ್ಯ ಅವರ ಅಧ್ಯಕ್ಷತೆಯ ಜೆಡಿಎಸ್-ಕಾಂಗ್ರೆಸ್ ಸಮನ್ವಯ ಸಮಿತಿ ತುಘಲಕ್ ದರ್ಬಾರ್‍ನ ಪ್ರತಿಬಿಂಬ ಎಂದು ಹೀಯಾಳಿಸಿದರು.

      ಸಿದ್ಧರಾಮಯ್ಯ ಅವರ ವ್ಯವಸ್ಥಿತ ಸಂಚಿನಿಂದಾಗಿ ಲೋಕಸಭಾ ಚುನಾವಣೆಯಲ್ಲಿ ಮೈಸೂರು,ಮಂಡ್ಯ,ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸೋಲು ಅನುಭವಿಸಬೇಕಾಯಿತು ಎಂದ ಅವರು,ಮೈಸೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಡಿ ಎಂದರೆ ಕೇಳದೆ ಹಾಲಿ ಎಂಪಿಯಾಗಿದ್ದ ಮುದ್ದಹನುಮೇಗೌಡರಿಗೆ ಟಿಕೆಟ್ ತಪ್ಪಿಸಿ ದೇವೇಗೌಡರಿಗೆ ಟಿಕೆಟ್ ನೀಡಲಾಯಿತು.

       ದೇವೇಗೌಡರು ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದರು.ಆದರೆ ಉದ್ದೇಶಪೂರ್ವಕವಾಗಿ ಮೈಸೂರಿನಲ್ಲಿ ಟಿಕೆಟ್ ತಪ್ಪಿಸಿ ಅವರು ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸಿದ್ಧರಾಮಯ್ಯ ನೋಡಿಕೊಂಡರು.ಪರಿಣಾಮವಾಗಿ ದೇವೇಗೌಡರು ಹೀನಾಯ ಸೋಲು ಅನುಭವಿಸುವಂತಾಯತು.

      ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅಹಿಂದ ವರ್ಗದ ಒಂದು ಮತ ಬೀಳದಂತೆ ಸಿದ್ಧರಾಮಯ್ಯ ನೋಡಿಕೊಂಡರು.ಸಮನ್ವಯ ಸಮಿತಿ ಅಧ್ಯಕ್ಷರಾಗಿ ಅವರು ಉಭಯ ಪಕ್ಷಗಳ ನಡುವೆ ಸಮನ್ವಯ ಸಾಧಿಸಲು ಕಾರಣರಾಗಿದ್ದರೆ ಮೈತ್ರಿಕೂಟ ಈ ಮಟ್ಟದ ಹೀನಾಯ ಸೋಲು ಅನುಭವಿಸುತ್ತಿರಲಿಲ್ಲ.ಹಾಗೆಯೇ ಬಿಜೆಪಿಗೆ ಇಂತಹ ಭಾರೀ ಗೆಲುವು ಸಾಧ್ಯವಾಗುತ್ತಿರಲಿಲ್ಲ ಎಂದರು.

      ಬಿಜೆಪಿಗೆ ಸೇರ್ಪಡೆಯಾಗುವ ಕಾರಣಕ್ಕಾಗಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೀರಾ?ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು,ಅಂತಹ ಯಾವ ಯೋಚನೆಯೂ ಇಲ್ಲ.ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅನುಭವಿಸಿದ ಸೋಲನ್ನು ನೋಡಿದ ಮೇಲೆಯೂ ಯಾವ ಕಾರಣಕ್ಕಾಗಿ ಅಲ್ಲಿಗೆ ಹೋಗಬೇಕು ಎಂದು ಮರು ಪ್ರಶ್ನಿಸಿದರು.

       ಸಮನ್ವಯ ಸಮಿತಿಯಲ್ಲಿ ನಿಮಗೆ ಸ್ಥಾನ ನೀಡದ್ದಕ್ಕೆ ಕೋಪಿಸಿಕೊಂಡು ರಾಜೀನಾಮೆ ನೀಡುತ್ತಿದ್ದೀರಾ?ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,ಸಮನ್ವಯ ಸಮಿತಿಯಲ್ಲಿ ಉಭಯ ಪಕ್ಷಗಳ ರಾಜ್ಯಾಧ್ಯಕ್ಷರೂ ಇರಬೇಕು.ಆದರೆ ಉಭಯ ಪಕ್ಷಗಳ ರಾಜ್ಯಾಧ್ಯಕ್ಷರು ಇಲ್ಲ.ಹೀಗಾಗಿ ಅದು ಸಿದ್ಧರಾಮಯ್ಯ ಅಧ್ಯಕ್ಷತೆಯ ತುಘಲಕ್ ದರ್ಬಾರ್‍ನಂತಾಗಿದೆ ಎಂದು ವ್ಯಂಗ್ಯವಾಡಿದರು.

       ಈ ಮಧ್ಯೆ ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿರುವ ಮಾಜಿ ಸಚಿವ,ಶಾಸಕ ರಾಮಲಿಂಗಾರೆಡ್ಡಿ:ಪಕ್ಷದಲ್ಲಿ ಹಿರಿಯರನ್ನು ಕಡೆಗಣಿಸಲಾಗುತ್ತಿದ್ದು ಇದರ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಹೇಳಿದ್ದಾರೆ.

         ಹಿರಿಯ ನಾಯಕರನ್ನು ಕಡೆಗಣಿಸಿದ ಪರಿಣಾಮವಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಹೀನಾಯ ಸೋಲಾಯಿತು.ಇದನ್ನು ತಕ್ಷಣವೇ ಸರಿಪಡಿಸಿಕೊಳ್ಳದಿದ್ದರೆ ಮುಂದಿನ ದಿನಗಳು ಕಷ್ಟಕರವಾಗಿರಲಿವೆ ಎಂದು ಎಚ್ಚರಿಕೆ ನೀಡಿದರು.ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು,ಸರ್ಕಾರ ಶಕ್ತವಾಗಬೇಕೆಂದರೆ ಹಿರಿಯರಿಗೆ ಮನ್ನಣೆ ನೀಡಬೇಕು.ಆದರೆ ಆ ಕೆಲಸವಾಗುತ್ತಿಲ್ಲ.ಏಳು ಬಾರಿ ಗೆದ್ದು ಬಂದಿರುವ ನನಗೆ ಮತ್ತೆ ಶಾಸಕನಾಗುವ ಆಕಾಂಕ್ಷೆಯೇನೂ ಇಲ್ಲ ಎಂದರು.

       ಹೀಗೆ ಅವರಾಡಿದ ಮಾತನ್ನು ಸಮರ್ಥಿಸಿಕೊಂಡ ಮತ್ತೊಬ್ಬ ನಾಯಕ ರೋಷನ್ ಬೇಗ್:ಪಕ್ಷದಲ್ಲಿ ಸಿದ್ದರಾಮಯ್ಯ ಅವರಾಡಿದ್ದೇ ಅಂತಿಮ ಮಾತಿನಂತಾಗಿದೆ.ಅವರ ದುರಹಂಕಾರವೇ ಪಕ್ಷದ ಸೋಲಿಗೆ ಕಾರಣ.ಹಿರಿಯರಿಗೆ ಮನ್ನಣೆ ನೀಡದ ಕಾರಣಕ್ಕಾಗಿ ಪಕ್ಷ ದುರ್ಬಲವಾಗಿದೆ.ಈ ದಿಸೆಯಲ್ಲಿ ರಾಮಲಿಂಗಾರೆಡ್ಡಿ ಅವರ ಮಾತಿಗೆ ನನ್ನ ಸಹಮತವಿದೆ ಎಂದರು.ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಯವರ ಕ್ಷಮೆ ಕೋರುತ್ತೇನೆ.ಆದರೆ ಸಿದ್ಧರಾಮಯ್ಯ ಅವರ ದುರಹಂಕಾರದ ವರ್ತನೆಯಿಂದ ಪಕ್ಷ ಹಾಳಾಗುತ್ತಿದೆ ಎಂಬುದನ್ನು ಎಲ್ಲರೂ ಗಮನಿಸಬೇಕು ಎಂದು ಅವರು ಹೇಳಿದರು.

ವಿಶ್ವನಾಥ್ ಪತ್ರ

      ಅಂದ ಹಾಗೆ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹೆಚ್.ವಿಶ್ವನಾಥ್ ತಮ್ಮ ರಾಜೀನಾಮೆ ಪತ್ರದಲ್ಲಿ ವಿವರವಾದ ಕಾರಣಗಳನ್ನು ನೀಡಿದ್ದು,ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ತಮ್ಮನ್ನು ಪಕ್ಷದ ಅಧ್ಯಕ್ಷ ಸ್ಥಾನದ ಸೇವೆಯಿಂದ ಬಿಡುಗಡೆ ಮಾಡಬೇಕು.ಹುಣಸೂರು ಕ್ಷೇತ್ರದ ಜನರ ಸೇವೆ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

      ಸ್ವಾಭಿಮಾನದ ಸಂಕೇತವಾಗಿ ನನ್ನ ಮಾತೃ ಪಕ್ಷವಾದ ಕಾಂಗ್ರೆಸ್‍ನಿಂದ ಹೊರಬರಬೇಕಾದ ಅನಿವಾರ್ಯತೆ ಎದುರಾದಾಗ,ಮತ್ತು ಹಾಗೆ ಹೊರಬಂದು ನಿಂತಾಗ ನನ್ನ ಅಭಿಲಾಷೆಯಂತೆ ಹುಣಸೂರು ಕ್ಷೇತ್ರದ ಟಿಕೆಟ್ ನೀಡಿ ಗೆಲ್ಲಿಸಿದ್ದೀರಿ.ರಾಜಕೀಯವಾಗಿ ಪುನರ್ಜನ್ಮ ನೀಡಿದ್ದೀರಿ.ಅದಕ್ಕಾಗಿ ನಾನು ನಿಮಗೆ ಕೃತಜ್ಞನಾಗಿದ್ದೇನೆ ಎಂದವರು ಪತ್ರದಲ್ಲಿ ಹೇಳಿದ್ದಾರೆ.

     ಅಸಂಗತ ಸಂದರ್ಭದಲ್ಲಿ ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬಂದು ವರ್ಷವಾಯಿತು.ಸಾಲಮನ್ನಾದಂತಹ ಬೃಹತ್ ಯೋಜನೆಯನ್ನು ಹೆಗಲ ಮೇಲೆ ಹೊತ್ತ ಮುಖ್ಯಮಂತ್ರಿಗಳು ಆಡಳಿತದ ಅಭದ್ರತೆಯ ಸಂಕಷ್ಟದಲ್ಲೂ ಜನರ ನಡುವೆ ನಮ್ಮ ಕುಮಾರಣ್ಣ ಎಂಬ ಬಾವನಾತ್ಮಕ ಸಂಪ್ರೀತಿಯಲ್ಲಿದ್ದರು.

      ಆದರೆ ಒಂದೆರಡು ಇಲಾಖೆಗಳನ್ನು ಹೊರತುಪಡಿಸಿದರೆ ಈ ಸರ್ಕಾರದಲ್ಲಿ ನಿರೀಕ್ಷಿಸಿದ ಸಾಧನೆಗಳು ಸಾಧ್ಯವಾಗಿಲ್ಲ.ಹೀಗಾಗಿ ಈ ವಿಚಾರದಲ್ಲಿ ನನಗೆ ಅಸಮಾಧಾನವಾಗಿದೆ ಎನ್ನಲು ಸಂಕಟವಾದರೂ ಹೇಳುವುದು ಅನಿವಾರ್ಯವಾಗಿದೆ.ಸಾಮಾನ್ಯವಾಗಿ ಸರ್ಕಾರ ಅಧಿಕಾರದಲ್ಲಿದ್ದಾಗ ಮಂತ್ರಿಗಳಾದವರು,ಶಾಸಕರು ಪಕ್ಷದ ಮಟ್ಟಿಗೆ ಅಷ್ಟೊಂದು ಆಸಕ್ತಿಯನ್ನು ಹೊಂದಿರುವುದಿಲ್ಲ.ಆದರೆ ಪ್ರಭುತ್ವ ಮತ್ತು ಪಕ್ಷ ಜೋಡೆತ್ತಿನಂತೆ ಇರಬೇಕು.ಆದರೆ ಅದು ಸಾಧ್ಯವಾಗುತ್ತಿಲ್ಲ.

      ಲೋಕಸಭಾ ಚುನಾವಣೆಯಲ್ಲಿ ತಾವು(ದೇವೇಗೌಡ)ಸೋಲಿನ ನೋವುಣ್ಣಬೇಕಾಗಿ ಬಂದಿದ್ದು ನನಗೆ ಹಾಗೂ ಪಕ್ಷಕ್ಕೆ ತೀವ್ರ ನೋವಿನ ಸಂಗತಿಯಾಗಿದೆ.ನೋವಿನ ಸಂಗತಿ ಎಂದರೆ ಮೈತೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಅವಕಾಶ ಕೊಡಿ ಎಂಬ ನಮ್ಮ ಕೂಗಿಗೆ ಕಾಂಗ್ರೆಸ್ಸಿಗರು ಓಗೊಡದೆ ಹಾಲಿ ಕಾಂಗ್ರೆಸ್ ಸದಸ್ಯರ ಸ್ಥಾನದಲ್ಲಿ ನಿಮ್ಮನ್ನು ಸ್ಪರ್ಧಿಸುವಂತಹ ತಂತ್ರ ಹೆಣೆದರು.ತುಮಕೂರು ಕ್ಷೇತ್ರದ ಖೆಡ್ಡಾಕ್ಕೆ ಕೆಡವಿ ಚುನಾವಣೆಯಲ್ಲಿ ಅವಮಾನಕರ ಸೋಲು ಅನುಭವಿಸುವಂತೆ ಮಾಡಲಾಯಿತು.ನಿಮ್ಮ ಸೋಲು ನಾಡಿನ ಸೋಲಾಯಿತು.ನಾಡಿನ ಹಿತಕ್ಕೆ ಮಾರಕವಾಯಿತು.

      ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿಯೂ ಸಹ ಕಾಂಗ್ರೆಸ್ ಪಕ್ಷದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು,ಮಾಜಿ ಶಾಸಕರುಗಳು ಜೆಡಿಎಸ್‍ನ ಹಿರಿಯ ಜನಪ್ರತಿನಿಧಿಗಳ ಜವಾಬ್ದಾರಿಯಿಲ್ಲದ ಕೊಂಕು ನುಡಿಗಳು ಮತ್ತು ವಿಚಲಿತವಾದ ಅಹಿಂದ ಮತಗಳು ನಮ್ಮ ಸ್ಪರ್ಧಿ ನಿಖಿಲ್ ಕುಮಾರಸ್ವಾಮಿಯವರ ಸೋಲಿಗೆ ಕಾರಣವಾಯಿತು.

       ಈ ಮಧ್ಯೆ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರದ ಸಮನ್ವಯ ಸಮಿತಿ ಕೇವಲ ನಾಮ್‍ಕೆವಾಸ್ಥೆ ಸಮನ್ವಯ ಸಮಿತಿ ಆಯಿತೇ ಹೊರತು ಎರಡು ಪಕ್ಷಗಳ ನಡುವೆ ಸಮನ್ವಯ ಸಾಧಿಸುವಲ್ಲಿ ಸಫಲವಾಗಲೇ ಇಲ್ಲ.ಸರ್ಕಾರ ಸುಗಮವಾಗಿ ಸಾಗಲು ಇವತ್ತಿನವರೆಗೂ ಸಾಮಾನ್ಯ ಕನಿಷ್ಟ ಕಾರ್ಯಕ್ರಮವನ್ನು ರೂಪಿಸಲು ಆಗಲಿಲ್ಲ.ಹೀಗಾಗಿ ಅದು ಸಿದ್ಧರಾಮಯ್ಯ ಅವರ ಕೈಗೊಂಬೆಯಾಗಿದೆಯೇ ಹೊರತು ಮತ್ತೇನಲ್ಲ.ಪಕ್ಷದ ಅಧ್ಯಕ್ಷನಾದ ನನಗಾಗಲೀ,ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಅವರಿಗಾಗಲಿ ಈ ಸಮನ್ವಯ ಸಮಿತಿಯಲ್ಲಿ ಭಾಗವಹಿಸಲು ಅವಕಾಶವೇ ಸಿಗಲಿಲ್ಲ.

       ಇಂತಹ ಸಂದರ್ಭದಲ್ಲಿ ಪಕ್ಷದ ಹೊಣೆಗಾರಿಕೆಯಿಂದ ನನ್ನನ್ನು ಬಿಡುಗಡೆ ಮಾಡಿ ಹುಣಸೂರು ಕ್ಷೇತ್ರದ ಜನರಿಗೆ ಸೇವೆ ಮಾಡಲು ಅನುಕೂಲ ಮಾಡಿಕೊಡಬೇಕು ಎಂದು ಅವರು ಮಾಜಿ ಪ್ರಧಾನಿಗೆ ಪತ್ರಮುಖೇನ ಕೋರಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link