ಮಧುಗಿರಿ
ಮಾಜಿ ಪ್ರಧಾನಿ ಮತ್ತು ಮಕ್ಕಳು ಜಿಲ್ಲೆಯ ಕೆರೆಗಳಿಗೆ ಹೇಮಾವತಿ ನೀರು ಹರಿಸಲು ಅಡ್ಡಿಪಡಿಸಿದರೆ ಅವರ ವಿರುದ್ಧ ಕಾನೂನಾತ್ಮಕವಾಗಿ ಹೋರಾಟ ನಡೆಸಲಾಗುವುದು ಎಂದು ನೂತನ ಸಂಸದ ಜಿ.ಎಸ್.ಬಸವರಾಜು ತಿಳಿಸಿದರು.
ಪಟ್ಟಣದ ಎಂ.ಎನ್.ಕೆ. ಸಮುದಾಯ ಭವನದಲ್ಲಿ ತಾಲ್ಲೂಕಿನ ಮತ ಬಾಂಧವರಿಂದ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು 50 ವರ್ಷಗಳಿಂದ ನೀರಾವರಿ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಜಿಲ್ಲೆಗೆ ಹರಿಯಬೇಕಾದ 25 ಟಿ.ಎಂ.ಸಿ ನೀರು ಹರಿಸಲೇಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯ. ಪ್ರಧಾನಿ ಮೋದಿಯವರು ನದಿ ಜೋಡಣೆಯ ಮಹತ್ತರ ಕಾರ್ಯಕ್ಕೆ ಕೈಹಾಕಿದ್ದಾರೆ.
ದೇಶದಲ್ಲಿನ ಹಲವಾರು ನದಿಗಳ ಸಾವಿರಾರು ಟಿಎಂಸಿ ನೀರು ಸಮುದ್ರದ ಪಾಲಾಗುತ್ತಿದೆ ಎಂದರು.ಇಂತಹ ನೀರನ್ನು ಬರಗಾಲ ಆವರಿಸಿರುವ ತಾಲ್ಲೂಕುಗಳಿಗೆ ಹರಿಸಲಾಗುವುದು. ಮುಂದಿನ ದಿನಗಳಲ್ಲಿ ನದಿ ಜೋಡಣೆಯ ಕಾಮಗಾರಿಗಳನ್ನು ಮೋದಿಯವರ ಆಡಳಿತದಲ್ಲಿ ಆದಷ್ಟು ಬೇಗ ಜಾರಿಗೆ ತರಲಾಗುವುದು. ಈ ಯೋಜನೆಗಳಿಂದಾಗಿ ರಾಜ್ಯದಲ್ಲೂ ನೀರಿನ ಬವಣೆ ನೀಗಲಿದೆ. ನೇತ್ರಾವತಿ ತಿರುವಿನ ಎತ್ತಿನಹೊಳೆ ಯೋಜನೆಗೂ ಸಹ ಇದರಿಂದ ಹೆಚ್ಚು ನೀರು ಲಭ್ಯವಾಗುವ್ಯದರಿಂದ ಈ ಭಾಗವು ಹಸಿರಾಗಲಿದ್ದು, ರೈತರೂ ಸಹ ಅಭಿವೃದ್ಧಿಯಾಗಿ ಕೃಷಿಗೆ ಪೂರಕವಾಗಿರಲಿದೆ.
ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡುವ ಬದಲು ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡಬೇಕಿದೆ. ತಾಲ್ಲೂಕಿನ ಎಲ್ಲ ಮತದಾರರು ಪಕ್ಷಭೇದ ಮರೆತು ನನ್ನ ಗೆಲುವಿಗೆ ಶ್ರಮಿಸಿದ್ದು, ಎಲ್ಲರ ಸಹಕಾರದಿಂದ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
ಮಾಜಿ ಶಾಸಕ ಗಂಗಹನುಮಯ್ಯ, ಜಿ.ಪಂ.ಸದಸ್ಯ ಜಿ.ಜೆ.ರಾಜಣ್ಣ, ಕಾಂಗ್ರೆಸ್ ಮಾಜಿ ಜಿ.ಪಂ ಉಪಾಧ್ಯಕ್ಷ ಮಲ್ಲಿಕಾರ್ಜುನಯ್ಯ, ಎಪಿಎಂಸಿ ಮಾಜಿ ಅಧ್ಯಕ್ಷ ಡಾ.ಎಂ.ಜಿ.ಶ್ರೀನಿವಾಸಮೂರ್ತಿ, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಶಿವ ಪ್ರಸಾದ್, ಬಾಲೇನಹಳ್ಳಿ ಶಿವಣ್ಣ, ಎಸ್.ಇ ರಮೇಶ್ ರೆಡ್ಡಿ ಮಾತನಾಡಿದರು.
ಸಭೆಯಲ್ಲಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅಭಿಮಾನಿ ಬಳಗ, ತಾಲ್ಲೂಕು ಮತದಾರರ ವೇದಿಕೆ ಹಾಗೂ ಗೆಳೆಯರ ಬಳಗದ ವತಿಯಿಂದ ತಾಲ್ಲೂಕಿನ ಜನತೆಯ ಒತ್ತಾಸೆಯಂತೆ ಮಧುಗಿರಿ ಪಟ್ಟಣವನ್ನು ಜಿಲ್ಲಾ ಕೇಂದ್ರ, ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ಎತ್ತಿನ ಹೊಳೆ ನೀರನ್ನು ಹರಿಸಬೇಕು. ಏಕಶಿಲಾ ಬೆಟ್ಟಕ್ಕೆ ಕೇಬಲ್ ಕಾರ್ ಹಾಗೂ ಪ್ರವಾಸೋದ್ಯಮಕ್ಕೆ ಕೇಂದ್ರದಿಂದ ಹೆಚ್ಚಿನ ಅನುದಾನ ಬಿಡುಗಡೆ, ತುಮಕೂರು-ರಾಯದುರ್ಗ ರೈಲ್ವೆ ಸೇವೆಯನ್ನು ಶೀಘ್ರವಾಗಿ ದೊರೆಯುವಂತೆ ಮಾಡಬೇಕು. ತಾಲ್ಲೂಕಿನಲ್ಲಿನ ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಗಾರ್ಮೆಂಟ್ಸ್ ಸ್ಥಾಪನೆ ಮಾಡುವಂತೆ ಸಂಸದರಿಗೆ ಮನವಿ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಜಗೋಪಾಲ್, ಪುರಸಭಾ ಸದಸ್ಯರಾದ ಎಂ.ಕೆ.ನಂಜುಂಡರಾಜು, ತಿಮ್ಮರಾಯಪ್ಪ, ಶ್ರೀನಿವಾಸ್, ಗೋವಿಂದರಾಜು, ಮಾಜಿ ಜಿ.ಪಂ.ಸದಸ್ಯ ಚಿನ್ನಪ್ಪ, ಜಿ.ಪಂ. ಮಾಜಿ ಅಧ್ಯಕ್ಷೆ ಕಮಲ ಗಂಗಹನುಮಯ್ಯ, ವೈ.ಎಚ್.ಹುಚ್ಚಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಬ್ಬಾಕ ರವಿ, ಜಿಲ್ಲಾ ಕಾರ್ಯದರ್ಶಿ ರುದ್ರೇಶ್, ತಿಮ್ಮಜ್ಜ, ಶಿರಾ ಮುಖಂಡ ಬಿ.ಕೆ.ಮಂಜುನಾಥ್, ರಕ್ಷಿತ್, ಶ್ರೀನಿವಾಸ್, ಬಿಜೆಪಿ ತಾಲ್ಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಕೆಂಚಮ್ಮ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ನಾಗೇಂದ್ರ, ಜಯಣ್ಣ, ಸುರೇಶ್, ಶ್ರೀನಿವಾಸ್, ಸಿದ್ದಾಪುರ ಈರಣ್ಣ ಇತರರು ಉಪಸ್ಥಿತರಿದ್ದರು.