ದಾವಣಗೆರೆ :
ತ್ಯಾಗ ಮತ್ತು ಸಹನೆಯ ಸಂಕೇತದ ಪವಿತ್ರ ರಂಜಾನ್ ಹಬ್ಬವನ್ನು ಮುಸ್ಲಿಂ ಬಾಂಧವರು ಬುಧವಾರ ಜಿಲ್ಲಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸುವ ಮೂಲಕ ಸಂಭ್ರಮಿಸಿದರು.
ರಂಜಾನ್ ಹಬ್ಬದ ಪ್ರಯುಕ್ತ ಮುಸಲ್ಮಾನ್ ಬಾಂಧವರು ನಗರದ ಪಿ.ಬಿ. ರಸ್ತೆಯ ಈದ್ಗಾ ಮೈದಾನದಲ್ಲಿ, ಮಾಗಾನಹಳ್ಳಿ ರಸ್ತೆ ರಜಾವುಲ್ ಮುಸ್ತಫಾ ನಗರದ ಈದ್ಗಾ ಮೈದಾನ, ಕೈಗಾರಿಕಾ ಪ್ರದೇಶದ ಖಲಂದರಿಯಾ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ನಂತರದಲ್ಲಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಎಲ್ಲೆಡೆಯೂ ಸಾಮಾನ್ಯವಾಗಿತ್ತು.
ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಜಾಗಕ್ಕೆ ಬಂದಿದ್ದ ಬಡವರಿಗೆ, ನಿರ್ಗತಿಕರಿಗೆ ತಮ್ಮ, ತಮ್ಮ ಶಕ್ತಾನುಸಾರ ಜಕಾತ್ (ದಾನ) ನೀಡುವ ಮೂಲಕ ಮಾನವೀಯತೆ ಮೆರೆದು, ತಮ್ಮ ಧಾರ್ಮಿಕ ಆಚರಣೆಯಲ್ಲಿನ ಕರ್ತವ್ಯವನ್ನು ನಿರ್ವಹಿಸಿದರು. ಈ ಮಾಸ ಸತ್ಯ ವಿಶ್ವಾಸಕರಿಗೆ ಪುಣ್ಯಗಳನ್ನು ಶೇಖರಿಸಲು ಸದಾವಕಾಶವಾಗಿದೆ. ಈ ಕಾಲದಲ್ಲಿ ಸತ್ಕರ್ಮಗಳಿಂದ ಅಧಿಕ ಪುಣ್ಯ ಪ್ರಾಪ್ತಿ ಆಗುತ್ತದೆ ಎಂಬ ನಂಬಿಕೆ ಇದೆ.
ಹೀಗಾಗಿ ರಂಜಾನ್ ಮಾಸದಲ್ಲಿ ನೀಡುವ ದಾನ ಎಲ್ಲಾ ದಾನಗಳಿಗಿಂತಲೂ ಶ್ರೇಷ್ಠವಾಗಿದೆ. ಈ ತಿಂಗಳಿನಲ್ಲಿ ಮಕ್ಕಳಾದಿಯಾಗಿ ಪ್ರತಿಯೊಬ್ಬ ಮುಸ್ಲಿಂ ಬಾಂಧವರು ಉಪವಾಸ ವ್ರತ ಕೈಗೊಳ್ಳಲಿದ್ದಾರೆ. ಹೀಗೆ ಕೈಗೊಳ್ಳುವ ಉಪವಾಸದಿಂದ ಬಡವರ ಕಷ್ಟಕಾರ್ಪಣ್ಯಗಳು ಬಲ್ಲಿದನಿಗೂ ಗೊತ್ತಾಗಲಿ ಎಂಬುದೇ ಇದರ ಸಾರವಾಗಿದೆ ಎನ್ನುತ್ತಾರೆ ಪ್ರಾರ್ಥನೆ ಸಲ್ಲಿಸಿದ ಮುಸಲ್ಮಾನ್ ಬಾಂಧವರು.
ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಚಿಣ್ಣರಾದಿಯಾಗಿ ವಯಸ್ಕರು, ವಯೋ ವೃದ್ಧರೂ ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು. ಅದರಲ್ಲೂ ಬಹುತೇಕರು ಶ್ವೇತ ವರ್ಣದ ಜುಬ್ಬಾ, ಪೈಜಾಮಾ ಹಾಕಿಕೊಂಡು ಮಿಂಚ್ಚಿದರೆ, ಇನ್ನೂ ಕೆಲವರು ಹೊಸ ಬಟ್ಟೆಯ ಜೊತೆಗೆ ಗಾಗಲ್ ಹಾಕಿಕೊಂಡು ಮೊಬೈಲ್ಗಳಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ದೃಶ್ಯ ಪಿ.ಬಿ. ರಸ್ತೆಯಲ್ಲಿ ಕಂಡುಬಂತು.
ಬೆಳಿಗ್ಗೆಯಿಂದ ಹಬ್ಬದ ತಯಾರಿಯಲ್ಲಿ ತೊಡಗಿದ್ದ ಮಹಿಳೆಯರು ಬಗೆ ಬಗೆಯ ಭಕ್ಷಗಳನ್ನು ಸಿದ್ದಪಡಿಸಿ ಬಂಧುಮಿತ್ರರಿಗೆ ಊಣಬಡಿಸಿದರು. ಇದೆಲ್ಲದರ ನಡುವೆ ಮುಸಲ್ಮಾನ್ ಬಾಂಧವರು ನೆಲೆಸಿರುವ ಪ್ರದೇಶಗಳ ರಸ್ತೆ ಬದಿಗಳಲ್ಲಿ ರಂಗುರಂಗಿನ ಮೆಹಂದಿ, ಮಿಂಚುಗಳ ಮಾರಾಟವೂ ಜೋರಾಗಿ ನಡೆದಿತ್ತು.
ಹಬ್ಬದ ಸಿಹಿ ಶುರಕುಂಬಾ ತಯಾರಿಕೆಗೆ ಅಗತ್ಯವಾದ ಶ್ಯಾವಿಗೆ, ದ್ರಾಕ್ಷಿ, ಗೋಡಂಬಿ, ಬಾದಾಮಿ, ಸಕ್ಕರೆ, ಹಾಲು, ಪಿಸ್ತ, ಗಸಗಸೆ ಇತ್ಯಾದಿಗಳ ಜೊತೆ ಮಸಾಲೆ ಸಾಮಾಗ್ರಿಗಳ ಪ್ರತ್ಯೇಕ ಅಂಗಡಿಗಳಲ್ಲೂ ಸಹ ಖರೀದಿಸುವವರ ಕಾರುಬಾರು ತುಸು ಹೆಚ್ಚಾಗಿಯೇ ಕಂಡು ಬಂದಿತು. ಹಬ್ಬದ ಹಿನ್ನೆಲೆಯಲ್ಲಿ ಬಗೆ, ಬಗೆಯ ಬಿರಿಯಾನಿ, ಶ್ಯಾವಿಗೆ ಖೀರ್, ಶುರಕುಂಬ ತಯಾರಿಸಿ ಸವಿದು ರಂಜಾನ್ ತಿಂಗಳ ಉಪವಾಸ ವ್ರತವನ್ನು ಮುಗಿಸಿದರು.
ವಿವಿಧೆಡೆಯಲ್ಲಿ ನಡೆಯುತ್ತಿದ್ದ ಸಾಮೂಹಿಕ ಪ್ರಾರ್ಥನೆಯಲ್ಲಿ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಸಮಾಜದ ಮುಖಂಡರಾದ ಸಾಧಿಕ್ ಪೈಲ್ವಾನ್, ಸೈಯದ್ ಸೈಫುಲ್ಲಾ, ಜೆ.ಅಮಾನುಲ್ಲಾ ಖಾನ್, ರಜ್ವಿ ಖಾನ್, ಕೆ.ಸಿರಾಜ್ ಅಹ್ಮದ್, ಟಾರ್ಗೇಟ್ ಅಸ್ಲಾಂ, ಅಯೂಬ್ ಪೈಲ್ವಾನ್, ಎಂ.ರಾಜಾಸಾಬ್ ಸೇರಿದಂತೆ ಅಸಂಖ್ಯಾತ ಜನರು ಪಾಲ್ಗೊಂಡಿದ್ದರು.