ನಗರದ 8 ಕೆರೆಗಳ ಜೋಡಣೆಗೆ ಡಿಪಿಆರ್ ಸಿದ್ಧ : ಶಾಸಕ ಜ್ಯೋತಿ ಗಣೇಶ್

ತುಮಕೂರು:

      ಮಹಾನಗರ ಪಾಲಿಕೆ ವ್ಯಾಪ್ತಿಯ 8 ಕೆರೆಗಳ  ಜೋಡಣಾ ಕಾರ್ಯಕ್ಕೆ ಡಿಪಿಆರ್ ಸಿದ್ಧಪಡಿಸಲಾಗಿದೆ ಎಂದು ಶಾಸಕ ಜ್ಯೋತಿ ಗಣೇಶ್ ತಿಳಿಸಿದರು.

    ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಹಾನಗರಪಾಲಿಕೆ, ಮೈತ್ರಿ, ಕನ್ನಡ ಸಾಹಿತ್ಯ ಪರಿಷತ್, ಪತಂಜಲಿ ಶಿಬಿರ, ನಾಗರೀಕ ಹಿತರಕ್ಷಣಾ ವೇದಿಕೆ, ಕಲ್ಪತರು ನಾಗರೀಕ ವೇದಿಕೆ ಮತ್ತಿತರ ಸ್ವಯಂ ಸೇವಾ ಸಂಘ ಸಂಸ್ಥೆಗಳ ಸಹಯೋಗದಲ್ಲಿಂದು ಹಮ್ಮಿಕೊಂಡಿದ್ದ ನಗರದ 30ನೇ ವಾರ್ಡ್ ಗೆದ್ದಲಹಳ್ಳಿಯ ಗಾರೆನರಸಯ್ಯನಕಟ್ಟೆ ಕೆರೆಯನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಸ್ಮಾರ್ಟ್‍ಸಿಟಿ ಯೋಜನೆಯಡಿ ನಗರದ ಸುತ್ತಮುತ್ತ ಇರುವ 8 ಕೆರೆಗಳನ್ನು ಜೋಡಿಸುವ ಕಾರ್ಯಕ್ಕೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ತಿಳಿಸಿದ ಅವರು, ಪಾಲಿಕೆ ವತಿಯಿಂದ ಕೈಗೊಂಡಿರುವ ಗಾರೆನರಸಯ್ಯನಕಟ್ಟೆ ಕೆರೆಯ ಸ್ವಚ್ಛತೆಯನ್ನು ಪಾಲಿಕೆಯ ಪೌರ ಕಾರ್ಮಿಕರು, ಅಧಿಕಾರಿ-ಸಿಬ್ಬಂದಿಗಳ ಸಹಕಾರದಲ್ಲಿ ಇಂದಿನಿಂದ ಹತ್ತು ದಿನಗಳವರೆಗೆ ನಡೆಸಲಾಗುವುದು. ಕೆರೆಗಳ ಸುತ್ತ ಇರುವ ಮುಳ್ಳು ಬೇಲಿಗಳನ್ನು ತೆರವುಗೊಳಿಸಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಕೆರೆಯ ಅಂದವನ್ನು ಹೆಚ್ಚಿಸಲಾಗುವುದು ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ಭೂಬಾಲನ್, ಆರೋಗ್ಯಾಧಿಕಾರಿ ಡಾ|| ನಾಗೇಶ್, ಪಾಲಿಕೆ ಸದಸ್ಯ ವಿಷ್ಣುವರ್ಧನ ಮತ್ತಿತರರು ಉಪಸ್ಥಿತರಿದ್ದರು.

ಗಿಡಗಳನ್ನು ನೆಟ್ಟು ಸಂಭ್ರಮಿಸಿದ ಸದಸ್ಯರು:

     ಪಾಲಿಕೆ ವ್ಯಾಪ್ತಿಯ ಎಲ್ಲಾ 35 ವಾರ್ಡ್‍ಗಳಲ್ಲಿ ಇಂದು ಆಯಾ ಸದಸ್ಯರು ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಹೊಂಗೆ, ಬೇವು ಮತ್ತಿತರ ತಲಾ 10 ಸಸಿಗಳನ್ನು ನೆಟ್ಟು ವಿಶ್ವ ಪರಿಸರ ದಿನವನ್ನು ಆಚರಿಸಿ ಸಂಭ್ರಮಿಸಿದರು. ವಾರ್ಡ್ ಸಂಖ್ಯೆ 11ರ ರಾಜೀವ್‍ಗಾಂಧಿ ನಗರದ ಪಾರ್ಕ್‍ನಲ್ಲಿಂದು ಮೇಯರ್ ಲಲಿತಾ ರವೀಶ್ ಅವರು ಸಾಂಕೇತಿಕವಾಗಿ ಗಿಡ ನೆಟ್ಟು ಪರಿಸರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಗಿರಿಜಾ ಧನಿಯಾಕುಮಾರ್, ಮಂಜುಳ ಆದರ್ಶ್, ದೀಪಶ್ರೀ ಮಹೇಶ್ ಮತ್ತಿತರರು ಹಾಜರಿದ್ದರು.

 

Recent Articles

spot_img

Related Stories

Share via
Copy link