ದಾವಣಗೆರೆ:
ಇಲ್ಲಿನ ದೇವರಾಜ್ ಅರಸ್ ಬಡಾವಣೆಯ ‘ಎ’ ಬ್ಲಾಕ್‍ನಲ್ಲಿರುವ ಶ್ರೀಮಾತಾ ಅನ್ನಪೂಣೇಶ್ವರಿ ದೇವಸ್ಥಾನದ ಮಹಾದ್ವಾರ ರಾಜಗೋಪುರದ ಕಳಶ ಪ್ರತಿಷ್ಟಾಪನಾ ಮಹೋತ್ಸವ ಹಾಗೂ ಶ್ರೀಆಂಜನೇಸ್ವಾಮಿ ಹಾಗೂ ನವಗ್ರಹ ದೇವತೆಗಳ ಪ್ರತಿಷ್ಟಾಪನೆ ಕಾರ್ಯಕ್ರಮ ಜೂನ್ 12 ರಂದು ನಡೆಯಲಿದೆ.
ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವಸ್ಥಾನ ಸಮಿತಿಯ ಅಧ್ಯಕ್ಷ ಆರ್.ಜಿ.ನಾಗೇಂದ್ರ ಪ್ರಸಾದ್, ಈ ಕಾರ್ಯಕ್ರಮದ ಪ್ರಯುಕ್ತ ಜೂ.8ರಂದು ಬೆಳಿಗ್ಗೆ 8 ಗಂಟೆಯಿಂದ ಪ್ರಾರ್ಥನೆ, ಮಹಾಗಣಪತಿ ಪೂಜೆ, ರಕ್ಷಾ ಬಂಧನ, ಪುಣ್ಯಾಹಃ ವಾಚನೆ, ‘ಅಷ್ಟದ್ರವ್ಯ ಮಹಾಗಣಪತಿ ಹೋಮ’ ಹಾಗೂ ಶ್ರೀಮಾತಾ ಅನ್ನಪೂರ್ಣೇಶ್ವರಿ ಅಮ್ಮನವರಿಗೆ ಪಂಚಾಮೃತಾಭಿಷೇಕ, ಕುಂಕುಮಾರ್ಚನೆ, ಪೂರ್ಣಾಹುತಿ, ಮಂತ್ರಪುಷ್ಪ ಮಹಾಮಂಗಳಾರತಿ ನಡೆಯಲಿದೆ. ಸಂಜೆ 6 ಗಂಟೆಯಿಂದ ನೂತನ ವಿಗ್ರಹಗಳ ಮತ್ತು ಕಳಸಗಳ ಜಲಾಧಿವಾಸ, ಕ್ಷೀರಾಧಿವಾಸ, ಶ್ರೀವಾಸ್ತುಹೋಮ, ಅಘೋರಾಸ್ತ್ರ ಹೋಮ, ಪೂರ್ಣಾಹುತಿ, ವಾಸ್ತು ಬಲಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ತಿಳಿಸಿದರು.
ಜೂ.9ರಂದು ಬೆಳಿಗ್ಗೆ 8 ಗಂಟೆಯಿಂದ ಹೊರನಾಡು ಶ್ರೀಮಾತಾ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಶ್ರೀಡಾ.ಭೀಮೇಶ್ವರ ಜೋಶಿ ಅವರ ಉಪಸ್ಥಿತಿಯಲ್ಲಿ ಕಳಶ ಸ್ಥಾಪನೆ, ರಕ್ಷಾ ಬಂಧನ, ಶ್ರೀನವಗ್ರಹ ಪುರಸ್ಸರ, ಶ್ರೀಸುದರ್ಶನ ಹೋಮ, ಪೂರ್ಣಾಹುತಿ, ಶ್ರೀಮಾತಾ ಅನ್ನಪೂರ್ಣೇಶ್ವರಿ ಅಮ್ಮನವರ ಮಹಾಪೂಜೆ ಹಾಗೂ ಶ್ರೀಗಳಿಂದ ದೇವಸ್ಥಾನದ ಮೊದಲ ಮಹಡಿಯಲ್ಲಿ ನಿರ್ಮಿಸಿರುವ ಭಜಸ್ಥಳ ಉದ್ಘಾಟನೆ, ಆಶೀರ್ವಚನ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ. ಸಂಜೆ ರಕ್ಷಾಬಂಧನ ಭಕ್ತಾದಿಗಳಿಂದ ದಾನ್ಯಾದಿವಾಸ, ದೀಪಾರಧನೆ ಮತ್ತು ಮಹಾ ಮಂಗಳಾರತಿ ನೆರವೇರಲಿದೆ ಎಂದು ಹೇಳಿದರು.
ಜೂ.10ರಂದು ಬೆಳಿಗ್ಗೆ ಕಳಸ ಸ್ಥಾಪನೆ, ಶ್ರೀರುದ್ರ ಹೋಮ, ಶ್ರೀದತ್ತಾತ್ರೇಯ ಹೋಮ, ಶ್ರೀವಿಷ್ಣು ಹೋಮ, ಶ್ರೀಪವಮಾನ ಹೋಮ, ಪುರುಷಸೂಕ್ತ ಹೋಮ, ಮಹಾಮಂಗಳಾರತಿ ನಡೆಯಲಿದೆ. ಸಂಜೆ 6 ಗಂಟೆಗೆ ವಸ್ತಾದಿವಾಸ, ದೀಪಾರಾಧನೆ ಮತ್ತು ಮಹಾಪೂಜೆ ನಡೆಯಲಿದೆ ಎಂದರು.
ಜೂ.11ರಂದು ಬೆಳಿಗ್ಗೆ 8 ಗಂಟೆಯಿಂದ ಶ್ರೀಮಾತಾ ಅನ್ನಪೂರ್ಣೇಶ್ವರಿ ಅಮ್ಮನವರಿಗೆ ಕ್ಷೀರಾಭಿಷೇಕ, ಅಲಂಕಾರ, ಕುಂಕುಮಾರ್ಚನೆ ಶ್ರೀನವಗ್ರಹ ಪುರಸ್ಸರ, ಪ್ರಧಾನ ದೇವತೆ ಶ್ರೀಮಾತಾ ಅನ್ನಪೂಣೇಶ್ವರಿ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ ನಡೆಯಲಿದ್ದು, ಸಂಜೆ 6 ಗಂಟೆಯಿಂದ ಪುಷ್ಪಾದಿವಾಸ, ಶಯ್ಯಾದಿವಾಸ, ಮಹಾಪೂಜೆ ಜರುಗಲಿದೆ ಎಂದು ಹೇಳಿದರು.
ಜೂ.12ರಂದು ಬೆಳಿಗ್ಗೆ 7.30ರಿಂದ 9 ಗಂಟೆಯ ವರೆಗೆ ಸಲ್ಲುವ ಮಿಥುನ ಲಗ್ನದ ಶುಭಾಂಶದಲ್ಲಿ ಶ್ರೀಆಂಜನೇಯಸ್ವಾಮಿ ಮತ್ತು ಶ್ರೀನವಗ್ರಹ ದೇವರುಗಳ ಪ್ರಾಣಪ್ರತಿಷ್ಠಾಪನೆ, ಕಲಾಹೋಮ, ಪ್ರತಿಷ್ಠಾಪನೆ ಹೋಮಾದಿಗಳು, ಕೂಷ್ಮಾಂಡ ಬಲಿ, ನೇತ್ರೀನ್ಮಿಲಿನ ಪಂಚಾಮೃತಾಭಿಷೇಕ ನೆಯಲಿದ್ದು, ಬೆಳಿಗ್ಗೆ 10.30ರಿಂದ 11.30ರ ವರೆಗೆ ಸಲ್ಲುವ ಸಿಂಹ ಲಗ್ನದಲ್ಲಿ ನೂತನ ಗೋಪುರಗಳ ಕಳಶ ಪ್ರತಿಷ್ಠಾಪನೆ, ಪೂರ್ಣಾಹುತಿ, ಕುಂಭಾಭಿಷೇಕ, ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ. ಮಧ್ಯಾಹ್ನ 12.30ರಿಂದ ಶ್ರೀಕ್ಷೇತ್ರ ರಾಂಪುರದ ಶ್ರೀವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಹಾಗೂ ಶ್ರೀತ್ಯಾಗೇಶ್ವರನಂದ ಸ್ವಾಮೀಜಿ ಅವರಿಂದ ಆಶೀರ್ವಚನ ನೆರವೇರಲಿದೆ. ಆದ್ದರಿಂದ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕಲ ಭಕ್ತಾದಿಗಳು ಭಾಗವಹಿಸಿ, ಅಮ್ಮನವರ ಕೃಪೆಗೆ ಪಾತ್ರರಾಗಬೇಕೆಂದು ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಕಾ.ಕಾ.ವೆಂಕಟಚಲಪತಿ, ನಾಗಭೂಷಣ ಕಡೇಕೊಪ್ಪ, ವೈ.ಬಿ.ಸತೀಶ್, ನಟರಾಜ್, ಬಿ.ಕೆ.ಮಂಜುನಾಥ್, ಸತೀಶ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
