ದಾವಣಗೆರೆ
ಜಿಲ್ಲೆಯಲ್ಲಿ ಜೂನ್ 8,9 ಮತ್ತು 16 ರಂದು ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ನಡೆಯುವ ಪ್ರಥಮ ದರ್ಜೆ ಸಹಾಯಕರು ಮತ್ತು ದ್ವಿತೀಯ ದರ್ಜೆ ಸಹಾಯಕರುಗಳ (ಎಸ್‍ಡಿಎ-ಎಫ್‍ಡಿಎ) ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಾವುದೇ ದೋಷಗಳು ಸಂಭವಿಸದಂತೆ ಮತ್ತು ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸಲು ಯಾವುದೇ ಗೊಂದಲಗಳಾಗಂದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಪ್ರಭಾರ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ತಿಳಿಸಿದರು.
ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜೂನ್ 08, 9 ಮತ್ತು 16 ರಂದು ಜಿಲ್ಲೆಯಲ್ಲಿ ನಡೆಯಲಿರುವ ಪ್ರ.ದ.ಸ ಮತ್ತು ದ್ವಿ.ದ.ಸ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಗಮವಾಗಿ ನಡೆಸುವ ಕುರಿತು ಚರ್ಚಿಸಲು ಸಂಬಂಧಪಟ್ಟ ಅಧಿಕಾರಿಗಳು/ವೀಕ್ಷಕರು/ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು/ಪ್ರಶ್ನೆ ಪತ್ರಿಕೆ ಪಾಲಕರಿಗೆ ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪರೀಕ್ಷೆಯನ್ನು ಎದುರಿಸಲಿರುವ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರದ ಒಳಗೆ ತಲುಪಲು ಬೇಕಾದ ಆಹ್ಲಾದಕರ ವಾತಾವರಣವನ್ನು ಸೃಷ್ಠಿಸಿ ಯಶಸ್ವಿಯಾಗಿ ಪರೀಕ್ಷೆಯನ್ನು ನಡೆಸುವಂತೆ ಹೇಳಿದರು.
ಅಭ್ಯರ್ಥಿಗಳು ಕೈಗಡಿಯಾರ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ಪರೀಕ್ಷಾ ಕೊಠಡಿಯೊಳಗೆ ತರುವಂತಿಲ್ಲ ಹಾಗೂ ಪ್ರವೇಶ ಪತ್ರದೊಂದಿಗೆ ಭಾವಚಿತ್ರವಿರುವ ಯಾವುದಾದರೂ ಗುರುತಿನ ಚೀಟಿ (ಆಧಾರ್, ಚುನಾವಣಾ ಗುರುತಿನ ಚೀಟಿ, ಡಿಎಲ್) ಯನ್ನು ಕಡ್ಡಾಯವಾಗಿ ತರಬೇಕು ಎಂದು ತಿಳಿಸಿದರು.
ಪರೀಕ್ಷೆ ವೇಳೆಯಲ್ಲಿ ಮಾರ್ಗ ಅಧಿಕಾರಿ, ವೀಕ್ಷಕರು ಸೇರಿದಂತೆ ಕೊಠಡಿ ಮೇಲ್ವಿಚಾರಕರು ತಮ್ಮ ಕರ್ತವ್ಯಗಳನ್ನು ನಿಯಮಾನುಸಾರ ಕೈಗೊಳ್ಳಬೇಕು ಕೊಠಡಿ ಮೇಲ್ವಿಚಾರಕರು ಕೂಡ ಯಾವುದೇ ಕಾರಣಕ್ಕೂ ಮೊಬೈಲ್‍ಗಳನ್ನು ಕೊಠಡಿಯೊಳಗೆ ತೆಗೆದುಕೊಂಡು ಹೋಗುವಂತಿಲ್ಲ ಎಂದರು.
ಪರೀಕ್ಷೆ ನಡೆಯುವ ವೇಳೆ ಬೆಲ್ಲಿಂಗ್ ಟೈಂಗಳನ್ನು ಪಾಲಿಸಿ, ಅಭ್ಯರ್ಥಿಗಳು ಯಾವುದೇ ಕಾರಣಕ್ಕೂ ಪರೀಕ್ಷಾ ನಿಯಮಗಳನ್ನು ಉಲ್ಲಂಘನೆ ಮಾಡದಂತೆ ಕ್ರಮವಹಿಸಿ ಎಂದು ಸಭೆಯಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಶಿಕ್ಷಣಾಧಿಕಾರಿ ನಿರಂಜನಮೂರ್ತಿ ಮಾತನಾಡಿ, ಜೂ. 8 ರಂದು ಎಸ್‍ಡಿಎ ಮತ್ತು ಎಫ್‍ಡಿಎ ಸಹಾಯಕರ ಹುದ್ದೆಗಳ ವಿವರಣಾತ್ಮಕ ಪತ್ರಿಕೆಯು ಬೆಳಿಗ್ಗೆ 10 ರಿಂದ 11.30 ರವರೆಗೆ ಜಿಲ್ಲೆಯ 3 ಕೇಂದ್ರಗಳಲ್ಲಿ ನಡೆಯಲಿದೆ.
ಜೂ.09 ರ ಭಾನುವಾರದಂದು ಜಿಲ್ಲೆಯ 23 ಕೇಂದ್ರಗಳಲ್ಲಿ ಎರಡು ಅವಧಿಯಲ್ಲಿ ಪರೀಕ್ಷೆ ನಡೆಯಲಿದೆ. ಸಾಮಾನ್ಯ ಜ್ಞಾನ, ವಸ್ತುನಿಷ್ಠ ಬಹು ಆಯ್ಕೆ ಪತ್ರಿಕೆಯು ಬೆಳಿಗ್ಗೆ 10 ರಿಂದ 11.30 ರವರೆಗೆ ಹಾಗೂ ಸಾಮಾನ್ಯ ಕನ್ನಡ/ ಸಾಮಾನ್ಯ ಇಂಗ್ಲೀಷ್ ವಸ್ತುನಿಷ್ಠ ಬಹು ಆಯ್ಕೆ ಪತ್ರಿಕೆಯು ಮಧ್ಯಾಹ್ನ 2 ರಿಂದ 3.30 ರವರೆಗೆ ನಡೆಯಲಿದೆ.
ಜೂನ್.16 ರಂದು ಜಿಲ್ಲೆಯ 37 ಕೇಂದ್ರಗಳಲ್ಲಿ ಎರಡು ಅವಧಿಯಲ್ಲಿ ಪರೀಕ್ಷೆ ನಡೆಯಲಿದೆ. ಸಾಮಾನ್ಯ ಜ್ಞಾನ, ವಸ್ತುನಿಷ್ಠ ಬಹು ಆಯ್ಕೆ ಪತ್ರಿಕೆಯು ಬೆಳಿಗ್ಗೆ 10 ರಂದು 11.30 ರವರೆಗೆ ಹಾಗೂ ಸಾಮಾನ್ಯ ಕನ್ನಡ/ ಸಾಮಾನ್ಯ ಇಂಗ್ಲಿಷ್ ವಸ್ತುನಿಷ್ಠ ಬಹು ಆಯ್ಕೆ ಪರೀಕ್ಷೆ ಮಧ್ಯಾಹ್ನ 2 ರಿಂದ 3.30 ರವರೆಗೆ ನಡೆಯಲಿದೆ. ಅಭ್ಯರ್ಥಿಗಳಿಗೆ ಉತ್ತಮ ಆಸನ ಸೇರಿದಂತೆ ಮೂಲಭೂತ ವ್ಯವಸ್ಥೆ ಮಾಡಬೇಕು. ಪರೀಕ್ಷೆ ಹಿಂದಿನ ದಿನ, ಪರೀಕ್ಷಾ ದಿನ ಮತ್ತು ಪರೀಕ್ಷಾ ನಂತರ ದಿನದಂದು ಪರೀಕ್ಷಾ ಮೇಲ್ವಿಚಾರಕರು, ಪರಿವೀಕ್ಷಕರು ಅನುಸರಿಸಬೇಕಾದ ಮಾರ್ಗಸೂಚಿಗಳ ವಿವರಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿಕೊಟ್ಟರು.
ಕರ್ನಾಟಕ ಲೋಕಸೇವಾ ಆಯೋಗದ ಅಧಿಕಾರಿ ಕೆ.ಎನ್ ತಮ್ಮಣ್ಣ ಮಾತನಾಡಿ, ಜೂನ್ 8 ರಂದು ಜಿಲ್ಲೆಯ ಮೂರು ಕೇಂದ್ರಗಳಲ್ಲಿ ಒಟ್ಟು 1,411 ಅಭ್ಯರ್ಥಿಗಳು, 09 ರಂದು ಜಿಲ್ಲೆಯ 27 ಕೇಂದ್ರಗಳಲ್ಲಿ ಒಟ್ಟು 16,456 ಅಭ್ಯರ್ಥಿಗಳು ಹಾಗೂ 16 ರಂದು ಜಿಲ್ಲೆಯ 37 ಕೇಂದ್ರಗಳಲ್ಲಿ ಒಟ್ಟು 15,814 ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ. ಜಿಲ್ಲೆಯಲ್ಲಿ ಈ ಹಿಂದೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳು ಯಶಸ್ವಿಯಾಗಿದ್ದು, ಅದೇ ರೀತಿ ಮುಂದೆ ನಡೆಯಲಿರುವ ಪರೀಕ್ಷೆಗಳನ್ನು ನಡೆಸುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ದೃಷ್ಟಿದೋಷವುಳ್ಳ ಅಭ್ಯರ್ಥಿಗಳಿಗೆ ಪರೀಕ್ಷೆಯನ್ನು ಜಿಲ್ಲೆಯ ಪರೀಕ್ಷಾ ಕೇಂದ್ರ ಸಂಖ್ಯೆ-01 (ಜಿ.ಎಂ.ಹಾಲಮ್ಮ ಪಿಯು ಕಾಲೇಜ್) ರಲ್ಲಿ ನಡೆಸಲಾಗುವುದು. ಜೂ.9 ಹಾಗೂ 16 ರಂದು ನಡೆಯಲಿರುವ ಪರೀಕ್ಷೆಗಳಲ್ಲಿ ಹೆಚ್ಚಿನ ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದು, ಅಂದು 2ನೇ ಅವಧಿಯಲ್ಲಿ ನಡೆಯುವ ಸಾಮಾನ್ಯ ಕನ್ನಡ/ಸಾಮಾನ್ಯ ಇಂಗ್ಲಿಷ್ ಪತ್ರಿಕೆಗಳ ಕೋಡ್ ಸಂಖ್ಯೆಯನ್ನು ಓ.ಎಂ.ಆರ್‍ನಲ್ಲಿ ಕಡ್ಡಾಯವಾಗಿ ನಮೂದಿಸಬೇಕು. ಇಲ್ಲದಿದ್ದಲ್ಲಿ ಅಂತಹ ಓ.ಎಂ.ಆರ್‍ಗಳನ್ನು ಪರಿಗಣಿಸಲಾಗುವುದಿಲ್ಲ ಎಂಬುದನ್ನು ಅಭ್ಯರ್ಥಿಗಳಿಗೆ ಮನದಟ್ಟು ಮಾಡುವಂತೆ ಕೊಠಡಿ ಮೇಲ್ವಿಚಾರಕರುಗಳಿಗೆ ತಿಳಿಸಿದರು.
ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ನಿಷೇಧ: ಪರೀಕ್ಷಾ ಕೇಂದ್ರದ ಮುಖ್ಯ ದ್ವಾರದಲ್ಲಿಯೇ ಮೊಬೈಲ್ ಫೋನ್, ಬ್ಲೂಟೂತ್ ಡಿವೈಸ್, ಡಿಜಿಟಲ್ ವಾಚ್, ಪೇಜರ್, ವೈರ್‍ಲೆಸ್ ಕ್ಯಾಲ್ಕ್ಯೂಲೇಟರ್ ಇಂತಹ ಮೊದಲಾದ ಎಲೆಕ್ಟ್ರಾನಿಕ್ ಸಂಬಂಧಿತ ಉಪಕರಣಗಳನ್ನು ಪರೀಕ್ಷಾ ಆವರಣದಲ್ಲಿ ತರುವುದನ್ನು ನಿಷೇಧಿಸಲಾಗಿದೆ. ಪರೀಕ್ಷಾ ಪ್ರವೇಶ ಕೇಂದ್ರದೊಳಗೆ ಆಯೋಗದಿಂದ ನೀಡಲಾಗುವ ಆನ್‍ಲೈನ್ ಪ್ರವೇಶಪತ್ರ ಮತ್ತು ಅಭ್ಯರ್ಥಿಗಳ ಭಾವಚಿತ್ರವಿರುವ ಒಂದು ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರತಕ್ಕದ್ದು, ತಪ್ಪಿದ್ದಲ್ಲಿ ಪರೀಕ್ಷಾ ಕೊಠಡಿಯೊಳಗೆ ಪ್ರವೇಶವನ್ನು ನೀಡಲಾಗುವುದಿಲ್ಲ ಎಂದು ಹೇಳಿದರು.ಸಭೆಯಲ್ಲಿ ಸಾರ್ವಜನಿಕ ಮತ್ತು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಆರ್.ಪರಮೆಶ್ವರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಅಧಿಕಾರಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ