ಆಮಿಷಕ್ಕೆ ಒಳಗಾಗಿ ಭ್ರಷ್ಟಾಚಾರದ ಸುಳಿಗೆ ಸಿಲುಕಬೇಡಿ

ಚಿತ್ರದುರ್ಗ:

      ತರಬೇತಿ ಪೂರ್ಣಗೊಳಿಸಿ, ಪೊಲೀಸ್ ಸೇವೆಗೆ ಅಣಿಯಾಗುತ್ತಿರುವ ನೂತನ ಪೊಲೀಸರು ಯಾವುದೇ ಆಸೆ, ಆಮಿಷಕ್ಕೆ ಒಳಗಾಗಿ ಭ್ರಷ್ಟಾಚಾರದ ಸುಳಿಗೆ ಸಿಲುಕದೆ, ಕರ್ತವ್ಯದಲ್ಲಿ ಪ್ರಾಮಾಣಿಕತೆ, ನಿಷ್ಠೆ ಪಾಲಿಸಬೇಕು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಕರೆ ನೀಡಿದರು.

      ಐಮಂಗಲದ ಪೊಲೀಸ್ ತರಬೇತಿ ಶಾಲೆಯಲ್ಲಿ ಪೊಲೀಸ್ ತರಬೇತಿ ಪೂರ್ಣಗೊಳಿಸಿದ 352 ಪ್ರಶಿಕ್ಷಣಾರ್ಥಿಗಳಿಗೆ ಶುಕ್ರವಾರ ಏರ್ಪಡಿಸಿದ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

     ಪೊಲೀಸ್ ಇಲಾಖೆ ಶಿಸ್ತಿಗೆ ಹೆಸರಾಗಿದೆ. ಪೊಲೀಸ್ ಕರ್ತವ್ಯವೆಂದರೆ ಹಗಲು, ರಾತ್ರಿಯ ಪರಿವಿಲ್ಲದೆ ಜನರ ಪ್ರಾಣ, ಸಾರ್ವಜನಿಕ ಆಸ್ತಿ-ಪಾಸ್ತಿ ರಕ್ಷಣೆಗೆ ಪಣತೊಡುವ ಅತಿ ದೊಡ್ಡ ಕರ್ತವ್ಯವಾಗಿದೆ. ಎಂಟು ತಿಂಗಳುಗಳ ಕಾಲ ಪೊಲೀಸ್ ತರಬೇತಿ ಪೂರ್ಣಗೊಳಿಸಿ, ನಾಡಿನ ಸೇವೆಗೆ ಅಣಿಯಾಗುತ್ತಿರುವ ಪ್ರಶಿಕ್ಷಣಾರ್ಥಿಗಳು ಶಿಸ್ತು, ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಳ್ಳಬೇಕು. ಧರ್ಮೋ ರಕ್ಷತಿ, ರಕ್ಷಿತಃ ಎಂಬಂತೆ ಪೊಲೀಸ್ ಕರ್ತವ್ಯ ಎಂಬುದು ಒಂದು ಧರ್ಮ.

       ಈ ಧರ್ಮ ಕಾಪಾಡಲು ನಿಷ್ಠೆಯಿಂದ ಸದಾ ಸನ್ನದ್ಧರಾಗಿರಬೇಕಾಗುತ್ತದೆ. ಸಮಾಜದಲ್ಲಿ ಪೊಲೀಸ್ ಸಮವಸ್ತ್ರಕ್ಕೆ ತನ್ನದೇ ಆದ ಗೌರವ ಇದೆ. ಈ ಗೌರವವನ್ನು ಪೊಲೀಸ್ ಕರ್ತವ್ಯನಿರತರಾದವರು ಕಾಪಾಡುವುದು ಅವರ ಕರ್ತವ್ಯವಾಗಿದೆ. ಕರ್ತವ್ಯದ ಸಮಯದಲ್ಲಿ ಹಲವು ಪ್ರಭಾವ, ಒತ್ತಡಗಳ ಕಾರಣದಿಂದ ಆಸೆ, ಆಮಿಷಗಳಿಗೆ ಒಳಗಾಗಿ ಭ್ರಷ್ಟಾಚಾರದ ಕೂಪಕ್ಕೆ ಸಿಲುಕಬೇಡಿ. ಕೆಟ್ಟ ನಡವಳಿಕೆ, ಕೆಟ್ಟ ಚಟುವಟಿಕೆಗಳಿಗೆ ಭಾಗಿದಾರರಾಗಬೇಡಿ.

      ಪೊಲೀಸ್ ಕರ್ತವ್ಯಕ್ಕೆ ನೇಮಕಗೊಂಡವರು ತಮ್ಮ ಕುಟುಂಬದೊಂದಿಗೆ ಹಬ್ಬ, ಹರಿದಿನಗಳಲ್ಲಿ ಭಾಗಿಯಾಗಿ ಆಚರಿಸುವ ಆಸೆ ಇಟ್ಟುಕೊಳ್ಳಬೇಡಿ. ಈ ನಾಡು ನಿರ್ಭಯವಾಗಿ ಹಬ್ಬ ಹರಿದಿನಗಳನ್ನು ಆಚರಿಸಲು ಪೊಲೀಸರು ಕಟ್ಟೆಚ್ಚರದಿಂದ ಕರ್ತವ್ಯ ನಿರ್ವಹಿಸುವುದು ಅನಿವಾರ್ಯ, ಸಾರ್ವಜನಿಕ ಹಿತ ರಕ್ಷಣೆಯೇ ಪೊಲೀಸರ ಪ್ರಮುಖ ಗುರಿಯಾಗಿದೆ. ಇದಲ್ಲದೆ ತಮ್ಮ ಕುಟುಂಬ ಹಾಗೂ ಮಕ್ಕಳಿಗೂ ಸಮಯವನ್ನು ಮೀಸಲಿಡಿ. ನೂತನವಾಗಿ ಪೊಲೀಸ್ ಕರ್ತವ್ಯಕ್ಕೆ ಅಣಿಯಾಗುತ್ತಿರುವ ಅಭ್ಯರ್ಥಿಗಳು ತಮ್ಮ ದೇಹಧಾಡ್ರ್ಯತೆ ಹಾಗೂ ಆರೋಗ್ಯವನ್ನು ತಮ್ಮ ನಿವೃತ್ತಿಯವರೆಗೂ ಕಾಯ್ದುಕೊಳ್ಳುವುದು ಅಗತ್ಯವಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಹೇಳಿದರು.

      ಐಮಂಗಲ ಪೊಲೀಸ್ ತರಬೇತಿ ಶಾಲೆ ಪ್ರಾಂಶುಪಾಲ ಪಿ. ಪಾಪಣ್ಣ ಅವರು ಪ್ರಶಿಕ್ಷಣಾರ್ಥಿಗಳು ಹಾಗೂ ತರಬೇತಿ ಶಾಲೆಯ ಕುರಿತು ವರದಿ ವಾಚನ ಮಾಡಿ, ಶಾಲೆಯಿಂದ ಸದ್ಯ 4 ನೇ ತಂಡದಲ್ಲಿ 352 ಪ್ರಶಿಕ್ಷಣಾರ್ಥಿಗಳ 8 ತಿಂಗಳ ತರಬೇತಿ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.

        ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಗೆ ಬೆಂಗಳೂರು ನಗರ ಮತ್ತು ಜಿಲ್ಲೆ ವಿಭಾಗ, ರಾಮನಗರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಆಯ್ಕೆಯಾದ ರಾಜ್ಯದ ವಿವಿಧ ಜಿಲ್ಲೆಗಳ ಅಭ್ಯರ್ಥಿಗಳಿಗೆ ಇಲ್ಲಿ ತರಬೇತಿ ನೀಡಲಾಗಿದ್ದು, ಈ ಪೈಕಿ 322 ಗ್ರಾಮೀಣ ಪ್ರದೇಶದವರಾದರೆ, 30 ಅಭ್ಯರ್ಥಿಗಳು ನಗರ ಪ್ರದೇಶದವರಾಗಿದ್ದಾರೆ.

        ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆ ತರಬೇತಿಗೆ ಬಂದವರ ಪೈಕಿ ಇಂಜಿನಿಯರಿಂಗ್ ಪದವಿ ಪಡೆದ 03 ಅಭ್ಯರ್ಥಿಗಳು, ಸ್ನಾತಕೋತ್ತರ ಪದವಿಯ 36, ಪದವಿ-248, ಬಿ.ಇಡಿ-17, ಐಟಿಐ/ಡಿಪ್ಲೋಮ-11, ಪಿಯುಸಿ ವಿದ್ಯಾರ್ಹತೆಯ 37 ಅಭ್ಯರ್ಥಿಗಳು ಆಯ್ಕೆಯಾಗಿ ತರಬೇತಿ ಪಡೆದಿದ್ದಾರೆ. ಪ್ರಶಿಕ್ಷಣಾರ್ಥಿಗಳಿಗೆ ರಸ್ತೆ ಸುರಕ್ಷತೆ, ಅಬಕಾರಿ, ಪ್ರಥಮ ಚಿಕಿತ್ಸೆ, ಭಯೋತ್ಪಾದಕರ ನಿಯಂತ್ರಣ, ಅಗ್ನಿಶಾಮಕ, ಕಾನೂನು ಅರಿವು, ಶಾಂತಿ ಸುವ್ಯವಸ್ಥೆ, ಸೈಬರ್ ಕ್ರೈಂ, ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ತಡೆ, ತಂಬಾಕು ನಿಯಂತ್ರಣ ಕಾಯ್ದೆ, ವ್ಯಕ್ತಿತ್ವ ವಿಕಸನ, ಒತ್ತಡ ನಿವಾರಣೆ, ಯೋಗ ಹೀಗೆ ಹಲವಾರು ವಿಷಯಗಳಲ್ಲಿ ತಜ್ಞರಿಂದ, ಒಳಾಂಗಣ ಮತ್ತು ಹೊರಾಂಗಣದ ತರಬೇತಿ ನೀಡಲಾಗಿದೆ. ಈವರೆಗೆ ಶಾಲೆಯಲ್ಲಿ 1317 ಪ್ರಶಿಕ್ಷಣಾರ್ಥಿಗಳು, 956 ಅಧಿಕಾರಿಗಳಿಗೆ ಇಲ್ಲಿ ತರಬೇತಿ ನೀಡಲಾಗಿದೆ ಎಂದರು. ಅಲ್ಲದೆ ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

        ಕಾರ್ಯಕ್ರಮದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಡಾ.ಅರುಣ್ ಭಾಗವಹಿಸಿದ್ದರು. ತರಬೇತಿ ಶಾಲೆಯ ಕಾನೂನು ಅಧಿಕಾರಿ ಕೆ.ಎಸ್. ಸತೀಶ್ ಸ್ವಾಗತಿಸಿದರೆ, ಪೊಲೀಸ್ ಉಪಾಧೀಕ್ಷಕ ಶ್ರೀನಿವಾಸ ವಿ. ಯಾದವ್ ವಂದಿಸಿದರು.

       ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದ ಪರೇಡ್ ಕಮಾಂಡರ್ ದರ್ಶನ್ ಎಸ್.ಎಸ್. ಅವರ ನೇತೃತ್ವದಲ್ಲಿ ನಿರ್ಗಮನ ಪಥಸಂಚಲನ ಆಕರ್ಷಕವಾಗಿ ಮೂಡಿಬಂದಿತು. ಪ್ರಶಿಕ್ಷಣಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಒಳಾಂಗಣ ವಿಭಾಗದ ಸ್ಪರ್ಧೆಯಲ್ಲಿ ಬಳ್ಳಾರಿ ಜಿಲ್ಲೆ ಕೋಗಳಿಯ ಕೆ. ಪ್ರದೀಪ್ ಕುಮಾರ್- ಪ್ರಥಮ, ಕೋಲಾರ ಜಿಲ್ಲೆ ಸಿಗ್ಗೆಹಳ್ಳಿಯ ವೇಣುಗೋಪಾಲ್- ದ್ವಿತೀಯ ಹಾಗೂ ರಾಯಚೂರು ಜಿಲ್ಲೆ ಹೊಸಳ್ಳಿ ಕ್ಯಾಂಪ್‍ನ ಮುತ್ತಪ್ಪ ತೃತೀಯ ಪ್ರಶಸ್ತಿ ಪಡೆದುಕೊಂಡರು.

       ಹೊರಾಂಗಣ ವಿಭಾಗದ ಸ್ಪರ್ಧೆಯಲ್ಲಿ ಮೈಸೂರು ಜಿಲ್ಲೆ ಸಾಲಿಗ್ರಾಮದ ದರ್ಶನ್ ಎಸ್.ಎಸ್. ಪ್ರಥಮ ಸ್ಥಾನ ಪಡೆದುಕೊಂಡರಲ್ಲದೆ, ಸರ್ವೋತ್ತಮ ಪ್ರಶಿಕ್ಷಣಾರ್ಥಿ ಪ್ರಶಸ್ತಿಗೂ ಭಾಜನರಾದರು. ಕೋಲಾರ ಜಿಲ್ಲೆ ಜೋಗಿಗುಡಿಸಲು ಗ್ರಾಮದ ಸುಧಾಕರ್- ದ್ವಿತೀಯ, ರಾಯಚೂರು ಜಿಲ್ಲೆ ಗೋನವಾರದ ದೊಡ್ಡರಾಮಣ್ಣ ತೃತೀಯ ಪ್ರಶಸ್ತಿ ಪಡೆದರು. ಫೈರಿಂಗ್ ವಿಭಾಗದ ಸ್ಪರ್ಧೆಯಲ್ಲಿ ಕೋಲಾರ ಜಿಲ್ಲೆ ಮಾರಿಕೊಪ್ಪದ ಕೆ.ಎಸ್. ಸುರೇಶ್ ಬಾಬು- ಪ್ರಥಮ, ಬೆಂಗಳೂರು ನಗರದ ಎಂ. ಶ್ರೀನಿವಾಸ್- ದ್ವಿತೀಯ ಹಾಗೂ ಬಳ್ಳಾರಿ ಜಿಲ್ಲೆ ಬಸವಹಳ್ಳಿತಾಂಡದ ಎಲ್. ಸುರೇಶ್ ತೃತೀಯ ಪ್ರಶಸ್ತಿ ಪಡೆದುಕೊಂಡರು.

      ಪ್ರಶಿಕ್ಷಣಾಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮಕ್ಕೆ, ಪ್ರಶಿಕ್ಷಣಾರ್ಥಿಗಳ ಕುಟುಂಬ ಸದಸ್ಯರು ಪಾಲ್ಗೊಂಡು, ತಮ್ಮ ಮಕ್ಕಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದರು. ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದರೂ, ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆ ಬಯಸಿ, ತರಬೇತಿ ಪೂರ್ಣಗೊಳಿಸಿದ ರವಿಚಂದ್ರ ಅವರು, ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಹಿರಿಯ ಪೊಲಿಸ್ ಅಧಿಕಾರಿಗಳಾದ ಅಣ್ಣಾಮಲೈ, ರವಿ ಚನ್ನಣ್ಣನವರ್ ಅವರು ತನಗೆ ಸ್ಫೂರ್ತಿದಾಯಕ ವ್ಯಕ್ತಿಗಳಾಗಿದ್ದು, ಅವರ ಪ್ರೇರಣೆಯಿಂದಲೇ, ಇಂಜಿನಿಯರಿಂಗ್ ಪದವಿ ಪಡೆದಿದ್ದರೂ, ಪೊಲೀಸ್ ಇಲಾಖೆ ಸೇವೆಗೆ ಸೇರಿದ್ದೇನೆ. ಮುಂದಿನ ದಿನಗಳಲ್ಲಿ ಐಪಿಎಸ್ ಪರೀಕ್ಷೆ ಬರೆದು ಪೊಲೀಸ್ ಉನ್ನತ ದರ್ಜೆಯ ಹುದ್ದೆ ಪಡೆಯುವ ಹೆಬ್ಬಯಕೆ ಹೊಂದಿದ್ದೇನೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link