ತುಮಕೂರು
ಸ್ಮಾರ್ಟ್ ಸಿಟಿ ಯೋಜನೆಯಡಿ ಈ ದಿನ ಒಟ್ಟಾರೆ 525 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಲಾಗಿದ್ದು, ಅಧಿಕಾರಿಗಳು ನಿಗಧಿತ ಅವಧಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವ ಕೆಲಸ ಮಾಡಬೇಕೆಂದು ಉಪಮುಖ್ಯಮಂತ್ರಿ ಡಾ.ಜಿ;.ಪರಮೇಶ್ವರ್ ಸೂಚನೆ ನೀಡಿದರು.
ನಗರದ ಕೇಂದ್ರೀಯ ಗ್ರಂಥಾಲಯದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ಕೇಂದ್ರದ ಶೇ.50 ಹಾಗೂ ರಾಜ್ಯ ಸರ್ಕಾರದ ಶೇ.50ರಷ್ಟು ಸೇರಿದಂತೆ ಒಟ್ಟು 1000 ಕೋಟಿ ರೂ.ಗಳ ಅನುದಾನ ವಿನಿಯೋಗಿಸಿಕೊಂಡು ತುಮಕೂರು ನಗರವನ್ನು ಸ್ಮಾರ್ಟ್ ಸಿಟಿಯನ್ನಾಗಿಸಲು ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ನಗರದ ಅಗತ್ಯತೆಗಳ ಆಧಾರದ ಮೇಲೆ ಸ್ಮಾರ್ಟ್ ಸಿಟಿ ಅಧ್ಯಕ್ಷೆ ಡಾ: ಶಾಲಿನಿ ರಜನೀಶ್, ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿ, ಮತ್ತಿತರ ಅಧಿಕಾರಿಗಳು ಕೂಲಂಕುಷವಾಗಿ ಚರ್ಚಿಸಿ ಕ್ರೀಡೆ, ರಸ್ತೆ, ಶಿಕ್ಷಣ, ಆರೋಗ್ಯ, ನೈರ್ಮಲ್ಯತೆ, ಕುಡಿಯುವ ನೀರಿನ ವ್ಯವಸ್ಥೆ ಕಾಮಗಾರಿಗಳಿಗೆ ಸಮನಾದ ಆದ್ಯತೆ ನೀಡಿ ಈ ಕಾಮಗಾರಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ನಮ್ಮಲ್ಲಿರುವಂತಹ ನೀರಿನ ಮೂಲವನ್ನು ಬಳಸಿಕೊಂಡು 24 ಗಂಟೆಗಳ ಕಾಲವೂ ಜನರಿಗೆ ಕುಡಿಯುವ ನೀರೊದಗಿಸಲು 500 ಎಕರೆ ವಿಸ್ತೀರ್ಣದ ಅಮಾನಿಕೆರೆಗೆ ಹೇಮಾವತಿ ನೀರನ್ನು ಹರಿಸುವುದು ಸ್ಮಾರ್ಟ್ ಸಿಟಿ ಕಾಮಗಾರಿಗಳ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದ ಅವರು ಶೀಘ್ರದಲ್ಲೇ ಬುಗುಡನಹಳ್ಳಿ ಕೆರೆಯಿಂದ ಅಮಾನಿಕೆರೆಗೆ ನೀರನ್ನು ತುಂಬಿಸಿ ಶುದ್ಧೀಕರಿಸಿ ಕುಡಿಯುವ ನೀರು ಸರಬರಾಜು ಮಾಡುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದರು.
ಬೆಂಗಳೂರಿನಿಂದ ತುಮಕೂರಿಗೆ ಪ್ರತಿ 10 ನಿಮಿಷಕ್ಕೊಂದರಂತೆ ರೈಲು ಸಂಪರ್ಕ ಸೌಲಭ್ಯ ಒದಗಿಸಲು ಪ್ರತ್ಯೇಕ ಸಬ್ ಅರ್ಬನ್ ರೈಲು ಮಾರ್ಗಕ್ಕೆ ಸರ್ಕಾರದಿಂದ ಒಪ್ಪಿಗೆ ದೊರೆತಿದೆ. ಅಲ್ಲದೆ ಕುಣಿಗಲ್ ರಸ್ತೆಯ ಬಿದರಕಟ್ಟೆಯ 400 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ತುಮಕೂರು ವಿಶ್ವವಿದ್ಯಾನಿಲಯ ಕಾಮಗಾರಿ ಪ್ರಗತಿಯಲ್ಲಿದ್ದು, ಕೆಲ ದಿನಗಳಲ್ಲಿ ವಿಶ್ವವಿದ್ಯಾನಿಲಯದ ಕ್ಯಾಂಪಸ್ ಸ್ಥಳಾಂತರಗೊಳ್ಳಲಿದೆ ಎಂದು ತಿಳಿಸಿದರು.
ಮೈಸೂರು, ಮಂಡ್ಯ, ಹಾಸನದಂತಹ ಜಿಲ್ಲೆಗಳನ್ನು ಹೋಲಿಸಿದಾಗ ನಮ್ಮ ಜಿಲ್ಲೆಗೆ ಇನ್ನಷ್ಟು ಸೌಲಭ್ಯಗಳ ಅಗತ್ಯತೆ ಇದೆ ಎಂಬುದನ್ನು ಮನಗಂಡು ಇಂತಹ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರಲ್ಲದೆ, ನಗರದ ಸ್ಮಾರ್ಟ್ ಸಿಟಿ ಯೋಜನೆಯಡಿ ಆಗಲಿ ನೀರಾವರಿ ಇಲಾಖೆಯಿಂದಾಗಲಿ ಅನುದಾನ ಬಳಸಿಕೊಂಡು ಮರಳೂರು ಕೆರೆ ಭರ್ತಿ ಮಾಡುವ ಪ್ರಯತ್ನವಾಗಬೇಕು.
ಪೂರ್ವಜರು ನಿರ್ಮಿಸಿದ ಅಮಾನಿಕೆರೆ ಹಾಗೂ ಮರಳೂರು ಕೆರೆಗಳನ್ನು ಆದಷ್ಟು ಬೇಗ ನೀರು ಭರ್ತಿಯಾದರೆ ನಗರ ಸಂಮೃದ್ಧವಾಗುವುದರಲ್ಲಿ ಸಂಶಯವಿಲ್ಲ. ಜೊತೆಗೆ ಬೆಂಗಳೂರಿನ ಲಾಲ್‍ಬಾಗ್, ಕಬ್ಬನ್ ಪಾರ್ಕ್‍ನಂತೆ ತುಮಕೂರಿನಲ್ಲಿಯೂ ಕುಟುಂಬದವರೆಲ್ಲ ವಿಹರಿಸಲು ಅನುವಾಗುವಂತೆ ಸುಮಾರು 200 ಎಕರೆ ಪ್ರದೇಶವನ್ನು ಗುರುತಿಸಿ ಪಾರ್ಕ್ ನಿರ್ಮಾಣಕ್ಕೆ ಅಧಿಕಾರಿಗಳು ಗಮನಹರಿಸಬೇಕೆಂದು ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ್ ಮಾತನಾಡಿ, ಜಿಲ್ಲಾಸ್ಪತ್ರೆಗೆ ಅತ್ಯಾವಶ್ಯಕವಿರುವ ವೈದ್ಯಕೀಯ ಸಿಬ್ಬಂದಿ, ಮಾನವ ಸಂಪನ್ಮೂಲಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜಿಲ್ಲಾಸ್ಪತ್ರೆಯಲ್ಲಿ ಸುಸಜ್ಜಿತ ಹಾಸ್ಟೆಲ್ ಸೌಲಭ್ಯ ಕಲ್ಪಿಸಬೇಕೆಂದು ವ್ಯಾಸಂಗ ಮಾಡುತ್ತಿರುವ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳ ಬೇಡಿಕೆಯಂತೆ ಸ್ಥಳೀಯ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಶೀಘ್ರವೇ ಮಂಜೂರಾತಿಗೆ ನಿರ್ಣಯ ಕೈಗೊಳ್ಳಲಾಗುವುದು. ತುಮಕೂರಿನ ಜಿಲ್ಲಾಸ್ಪತ್ರೆಯು ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಿಗಿಂತಲೂ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ರಾಜ್ಯದಲ್ಲಿಯೇ ಅತ್ಯಂತ ವೈಜ್ಞಾನಿಕವಾಗಿ ಚಿಕಿತ್ಸೆ ನೀಡುತ್ತಿರುವ ಏಕೈಕ ಆಸ್ಪತ್ರೆ ಇದಾಗಿದೆ. ಆಯುಷ್ಮಾನ್ ಭಾರತ್ ಹಾಗೂ ಆರೋಗ್ಯ ಕರ್ನಾಟಕ ಯೋಜನೆಯಡಿ ಸುಮಾರು 4 ಕೋಟಿ ರೂ.ಗಳ ಆದಾಯವನ್ನು ತಂದುಕೊಟ್ಟಿರುವ ಈ ಆಸ್ಪತ್ರೆಯ ಆದಾಯದಲ್ಲಿ ಶೇ. 30ರಷ್ಟು ಹಣವನ್ನು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ ಸಿಬ್ಬಂದಿಗೆ ಪ್ರೋತ್ಸಾಹಧನವಾಗಿ ನೀಡುವ ಯೋಜನೆಯೊಂದನ್ನು ಸರ್ಕಾರ ರೂಪಿಸಿದ್ದು, ತಕ್ಷಣದಿಂದಲೇ ಜಾರಿಗೆ ಬರುತ್ತದೆ ಎಂದು ತಿಳಿಸಿದರು.
ಅಪಘಾತ ಸಂಭವಿಸಿದಾಗ ತುರ್ತು ಸಂದರ್ಭಗಳಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನಂತಹ ಮಹಾನಗರಗಳಿಗೆ ಹೋಗುವುದನ್ನು ತಪ್ಪಿಸಲು ಜಿಲ್ಲಾಸ್ಪತ್ರೆ ಆವರಣದಲ್ಲಿ ಟ್ರಾಮಾಸೆಂಟರ್ (ಅಪಘಾತ ಚಿಕಿತ್ಸಾ ವಿಭಾಗ)ಅನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ಶಂಕುಸ್ಥಾಪನೆ ನೆರವೇರಿಸಲಾಗಿದೆ.
ಆದಷ್ಟು ಶೀಘ್ರದಲ್ಲಿಯೇ ಈ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಜ್ಯೋತಿಗಣೇಶ್ ಮಾತನಾಡಿ, ನಗರ ಸ್ಮಾರ್ಟ್ ಆಗಬೇಕಾದರೆ ಅಲ್ಲಿರುವ ಎಲ್ಲಾ ಸೌಲಭ್ಯಗಳಲ್ಲೂ ಸ್ಮಾರ್ಟ್ ಆಗಬೇಕು. ಸ್ಮಾರ್ಟ್ ಸಿಟಿ ಯೋಜನೆಯಡಿ ತುಮಕೂರಿನಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿರುವ ಎಲ್ಲಾ ಕಾಮಗಾರಿಗಳು ಜನೋಪಯೋಗಿಯಾಗಲಿವೆ.
ಯೋಜನೆ ಕೈಗೊಳ್ಳಲು ಸಹಕರಿಸಿದವರೆಲ್ಲರಿಗೂ ಅಭಿನಂದನೆ ಸಲ್ಲಿಸಿದರಲ್ಲದೆ ಎಂಪ್ರೆಸ್ ಶಾಲೆ ಹಾಗೂ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸುಮಾರು 25000 ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತೆ 35 ಕೋಟಿ ರೂ. ವೆಚ್ಚದ ಸ್ಮಾರ್ಟ್ ತರಗತಿ, ಕಂಪ್ಯೂಟರ್, ಸ್ಮಾರ್ಟ್ ಲ್ಯಾಬ್ ಮತ್ತಿತರ ಸೌಲಭ್ಯಗಳನ್ನು ಒದಗಿಸುತ್ತಿರುವುದು ಅಭಿನಂದನಾರ್ಹ ಎಂದು ತಿಳಿಸಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ 4.85 ಕೋಟಿ ವೆಚ್ಚದಲ್ಲಿ ಪುರ್ಣಗೊಂಡ ಕಾಮಗಾರಿಗಳ ಉದ್ಘಾಟನೆ ಹಾಗೂ 525 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ: ಶಾಲಿನಿ ರಜನೀಶ್ ಶಾಸಕ ಬಿ.ಸತ್ಯನಾರಾಯಣ, ಮೇಯರ್ ಲಲಿತಾ ರವೀಶ್, ಉಪ ಮೇಯರ್ ರೂಪಶ್ರೀ ಬಿ.ಎಸ್., ಪಾಲಿಕೆ ಸದಸ್ಯೆ ಗಿರಿಜಾ ಧನ್ಯಕುಮಾರ್, ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನವಂಶಿಕೃಷ್ಣ, ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ಬಿ.ಟಿ.ರಂಗಸ್ವಾಮಿ, ಡಿಹೆಚ್‍ಓ ಡಾ: ಬಿ.ಆರ್.ಚಂದ್ರಿಕಾ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ: ವೀರಭದ್ರಯ್ಯ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್, ಮತ್ತಿತರ ಅಧಿಕಾರಿಗಳು, ಶಾಲಾ ಮಕ್ಕಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸ್ಮಾರ್ಟ್ ಸಿಟಿಯ ರಂಗಸ್ವಾಮಿ ಸ್ವಾಗತಿಸಿದರೆ, ಅಜಯ್ ವಂದಿಸಿದರು. ಕಲಾದೇಗುಲ ಶ್ರೀನಿವಾಸ್ ನಿರೂಪಣೆ ಮಾಡಿದರು.
ಬೆಂಗಳೂರಿನ ಸಿರೆನಾ ಟೆಕ್ನಾಲಜೀಸ್ ಅಭಿವೃದ್ಧಿಪಡಿಸಿರುವ ಮೊದಲನೇ ಹ್ಯುಮನಾಯ್ಡ್ ರೋಬೊ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ವಿವರಗಳ ಮಾಹಿತಿ ನೀಡಿದ್ದು, ವಿಶೇಷವಾಗಿತ್ತು. ಮುಂದಿನ ದಿನದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಈ ರೋಬೊ ಅನ್ನು ಬಳಸಿಕೊಳ್ಳುವ ಸಲುವಾಗಿ ಪ್ರಪಂಚದಲ್ಲೇ ಪ್ರಥಮ ಬಾರಿಗೆ ನಿನೋ ಎಂಬ ಈ ರೋಬೋ ಅನ್ನು ಅಭಿವೃದ್ಧಿಪಡಿಸಲಾಗಿದೆ.
ಧನ್ಯಾಮುಕುಂದ್, ಸಿರೆನಾ ಟೆಕ್ನಾಲಜೀಸ್ ಅಧಿಕಾರಿ
ಪೊಲೀಸರ ಮೇಲೆ ಆಕ್ರೋಶಗೊಂಡ ಸಾರ್ವಜನಿಕರು
ನಗರದಲ್ಲಿ ನಡೆದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆಗೆ ಉಪಮುಖ್ಯಮಂತ್ರಿಗಳು ಸೇರಿ ಕುಟುಂಬ ಕಲ್ಯಾಣ ಮಂತ್ರಿ, ಹಾಗೂ ವಿವಿಧ ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು ಆಗಮಸಿದ್ದ ವೇಳೆ ಅವರು ಸಂಚರಿಸುವ ರಸ್ತೆಯ ಮಾರ್ಗಗಳಲ್ಲಿ ಸಾರ್ವಜನಿಕರಿಗೆ ಸಂಚಾರ ಬಂದ್ ಮಾಡಲಾಗಿದ್ದರಿಂದ ಕಾರ್ಯಕ್ರಮ ಮುಗಿಯುವವರಿಗೂ ಕಿರಿಕಿರಿ ಉಂಟಾಗಿತ್ತು.
ಬೆಳಗ್ಗೆ ಪ್ರತಿಭಟನೆ ವೇಳೆ ಎಂಜಿ ಕ್ರೀಡಾಂಗಣ ರಸ್ತೆಯಲ್ಲಿ ಸಂಚಾರ ಬಂದ್ ಮಾಡಲಾಗಿದ್ದರಿಂದ ಜನರು ವಿವಿಯ ಪಕ್ಕದಲ್ಲಿನ ರಸ್ತೆಯಲ್ಲಿ ಬಳಸಿಕೊಳ್ಳುವಂತಾಯಿತು. ಅದೇ ರೀತಿ ಜಿಲ್ಲಾಸ್ಪತ್ರೆ ಆವರಣದ ಮುಂಭಾಗ ಕೆಲ ಕಾಲ ಟ್ರಾಫಿಕ್ ಜಾಂ ಉಂಟಾಗಿತ್ತು. ಎಂಪ್ರೆಸ್ ಕಾಲೇಜಿನ ಮುಂಭಾಗದಲ್ಲಿ ಕೆಲ ಕಾಲ ರಸ್ತೆಎ ಬಂದ್ ಮಾಡಲಾಗಿದ್ದು, ಕೆಲವು ಪ್ರಯಾಣಿಕರು ಪೊಲೀಸರ ಮೇಲೆ ಸಿಡಿಮಿಡಿಗೊಂಡರು. ಮಂತ್ರಿಗಳು ಬಂದಿದ್ದಾರೆ ಎಂದು ನೀವು ರಸ್ತೆಯನ್ನು ಬಂದ್ ಮಾಡಿದರೆ ನಾವು ಹೇಗೆ ಮುಂದೆ ಹೋಗುವುದು. ಏನಾದರೂ ತುರ್ತು ಸಮಸ್ಯೆ ಇದ್ದವರು ಹೇಗೆ ನಿಭಾಯಿಸಿಕೊಳ್ಳುವುದು ಎಂದು ಆಕ್ರೋಶಗೊಂಡಿದ್ದರು.