ತುರುವೇಕೆರೆ:
ಸಹಕಾರಿ ಧುರೀಣ ಕೆ.ಎನ್.ರಾಜಣ್ಣನವರ ಬೆಂಬಲಕ್ಕೆ ತಾಲೂಕಿನ ವಿ ಎಸ್ ಎಸ್ ಎನ್ ನ ಅಧ್ಯಕ್ಷರು ಹಾಗೂ ಪದಾದಿಕಾರಿಗಳು ನಿಂತಿದ್ದಾರೆ ಎಂದು ಜಿಲ್ಲಾ ಡಿಸಿಸಿ ಬ್ಯಾಂಕ್ ನ ನಿರ್ದೇಶಕ ಬಿ.ಎಸ್.ದೇವರಾಜು ಹೇಳಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು ಸಹಕಾರ ಕ್ಷೇತ್ರದಲ್ಲಿ ಅತ್ಯಂತ ಉತ್ತಮ ಸೇವೆ ಸಲ್ಲಿರುವ ಕೆ.ಎನ್.ರಾಜಣ್ಣನವರ ಏಳ್ಗೆಯನ್ನು ಸಹಿಸದ ಕೆಲವು ಮಂದಿ ಅವರ ವಿರುಧ್ಧ ಪಿತೂರಿ ನಡೆಸುತ್ತಿದ್ದಾರೆ. ಕೆಲವು ಸಮುದಾಯದವರನ್ನು ಎತ್ತಿಕಟ್ಟಿ ಅವರಿಗೆ ಕೆಟ್ಟ ಹೆಸರು ತರಲು ಮುಂದಾಗಿದ್ದಾರೆ. ಕೆ.ಎನ್.ರಾಜಣ್ಣ ನವರು ರೈತ ಪರ ಹಾಗೂ ಬಡವರ ಪರ ನಿಲುವು ತೆಗೆದುಕೊಂಡಿರುವ ಉದಾರಿ. ಅವರನ್ನು ಪಕ್ಷಾತೀತವಾಗಿ ಜನರು ಪ್ರೀತಿಸುತ್ತಾರೆ.
ಎಲ್ಲಾ ಕೋಮಿನ ಜನರೂ ಕೆ.ಎನ್.ರಾಜಣ್ಣನವರನ್ನು ಪ್ರೀತಿಸುತ್ತಾರೆ. ಗೌರವಿಸುತ್ತಾರೆ. ಯಾವುದೋ ಕ್ಷುಲ್ಲಕ ಕಾರಣಕ್ಕೆ ರಾಜಣ್ಣನವರನ್ನು ತೇಜೋವಧೆ ಮಾಡುವುದು ಸರಿಯಲ್ಲ ಎಂದು ಬಿ.ಎಸ್.ದೇವರಾಜು ಹೇಳಿದ್ದಾರೆ.
ರಾಜಣ್ಣನವರನ್ನು ವ್ಯಕ್ತಿಗತವಾಗಿ ಟೀಕಿಸಿ, ಅವರ ವಿರುದ್ಧ ಹೋರಾಟಕ್ಕೆ ಇಳಿದರೆ ತಾಲೂಕಿನ ಸಾವಿರಾರು ಸಹಕಾರಿ ಬಂಧುಗಳು ಕೆ.ಎನ್.ರಾಜಣ್ಣನವರ ಪರವಾಗಿ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ಅವರು ಹೇಳಿದರು.ವ್ಯಕ್ತಿ ಅಲ್ಲ, ಶಕ್ತಿ – ಕೆ.ಎನ್.ರಾಜಣ್ಣನವರು ರಾಜ್ಯದ ಜನರ ಪಾಲಿಗೆ ಆಶಾಕಿರಣರಾಗಿದ್ದಾರೆ. ಅವರು ಕೈಗೊಂಡಿರುವ ನಿರ್ಣಯಗಳಿಂದ ಅತ್ಯಂತ ಕಡು ಬಡವರೂ ಆರ್ಥಿಕವಾಗಿ ಮುಂದುವರೆದಿದ್ದಾರೆ. ಪಕ್ಷಾತೀತವಾಗಿ ಜನರ ಮನಸ್ಸನ್ನು ಗೆದ್ದಿರುವ ಕೆ.ಎನ್.ರಾಜಣ್ಣ ಕೇವಲ ವ್ಯಕ್ತಿಯಲ್ಲ, ಅವರು ರಾಜ್ಯದ ಶಕ್ತಿ ಎಂದು ಬಿಜೆಪಿ ಮುಖಂಡ ಕೊಂಡಜ್ಜಿ ವಿಶ್ವನಾಥ್ ಹೇಳಿದರು.
ಕಾಂಗ್ರೆಸ್ ನ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮತ್ತು ರಾಜಣ್ಣ ನವರ ಪಕ್ಷಕ್ಕೆ ಸಂಬಂಧಿಸಿದಂತೆ ಶೀತಲ ಸಮರ ನಡೆಯುತ್ತಿದೆ. ರಾಜಣ್ಣನವರನ್ನು ದುರುದ್ದೇಶವಾಗಿ ಟಾರ್ಗೆಟ್ ಮಾಡಿ ಅವರನ್ನು ಹಳಿಯುವ ಪ್ರಯತ್ನ ಮಾಡಲಾಗುತ್ತಿದೆ. ರಾಜಣ್ಣನವರ ವೈಯಕ್ತಿಕವಾಗಿ ನಿಂದನೆಯಾದಲ್ಲಿ ಪಕ್ಷಾತೀತವಾಗಿ ಜನರು ಹೋರಾಡುತ್ತಾರೆ ಎಂದು ವಿಶ್ವನಾಥ್ ಹೇಳಿದರು.
ಕೆ.ಎನ್.ರಾಜಣ್ಣ ಮತ್ತು ಹಾಲಿ ಸಂಸದ ಜಿ.ಎಸ್.ಬಸವರಾಜು ಜಿಲ್ಲೆಯಲ್ಲಿ ತಮ್ಮದೇ ಆದ ವರ್ಚಸ್ಸನ್ನು ಹೊಂದಿದ್ದಾರೆ. ಅವರಿಗೆ ಪಕ್ಷಾತೀತವಾಗಿ ಜನರು ಸಹಕಾರ ನೀಡುತ್ತಾರೆ. ಹಾಗಾಗಿ ಅವರ ವಿರುದ್ಧ ತೇಜೋವಧೆಗೆ ಮುಂದಾಗುವುದು ಸರಿಯಲ್ಲ ಎಂದು ಕೊಂಡಜ್ಜಿ ವಿಶ್ವನಾಥ್ ಹೇಳಿದರು.
ಯುವ ಕಾಂಗ್ರೆಸ್ ಬೆಂಬಲ – ತಾಲೂಕು ಯುವ ಕಾಂಗ್ರೆಸ್ ಕೆ.ಎನ್.ರಾಜಣ್ಣ ನವರ ಪರವಾಗಿದೆ ಎಂದು ಯುವ ಮುಖಂಡ ಗೋಣಿತುಮಕೂರು ನಂದೀಶ್ ಹೇಳಿದ್ದಾರೆ. ವಿನಾಕಾರಣ ರಾಜಣ್ಣನವರನ್ನು ಟೀಕಿಸಲು, ಅವರ ವಿರುದ್ಧ ಪಿತೂರಿ ಮಾಡಲು ಹೋದಲ್ಲಿ ಪರಿಸ್ಥಿತಿ ಸರಿಯಿರುವುದಿಲ್ಲ. ಯುವ ಕಾರ್ಯಕರ್ತರು ಬೀದಿಗಿಳಿದು ಹೋರಾಡುವುದು ಅನಿವಾರ್ಯವಾಗಲಿದೆ ಎಂದು ನಂದೀಶ್ ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಹುಲಿಕಲ್ ಜಗದೀಶ್, ಮಾಯಸಂದ್ರ ವಿಎಸ್ ಎಸ್ ಎನ್ ಅಧ್ಯಕ್ಷ ಪುಟ್ಟೇಗೌಡ, ಮಾವಿನಕೆರೆ ನಿಂಗಪ್ಪ, ಪಟ್ಟಣ ಪಂಚಾಯ್ತಿ ಸದಸ್ಯ ಅಂಜನ್ ಕುಮಾರ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ದೊಡ್ಡೇರಿ ರಾಜಣ್ಣ, ಮಾವಿನಹಳ್ಳಿ ಕುಮಾರ್, ಹುಲ್ಲೇಕೆರೆ ಬೋರೇಗೌಡ ಸೇರಿದಂತೆ ಹಲವಾರು ವಿಎಸ್ ಎಸ್ ಎನ್ ನ ಅಧ್ಯಕ್ಷರು ಮತ್ತು ಪದಾದಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ