ತಿರುವನಂತಪುರ
ರೈತರ ಆತ್ಮಹತ್ಯೆ ವಿಷಯಕ್ಕೆ ಸಂಬಂಧಿಸಿ, ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಸೋಮವಾರ ವಿರೋಧ ಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕೇರಳ ವಿಧಾನಸಭೆಯ ಕಲಾಪವನ್ನು ಬಹಿಷ್ಕರಿಸಿತು.
ರಾಜ್ಯದಲ್ಲಿ ಸಾಲದಿಂದ ತತ್ತರಿಸಿರುವ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರ ರೈತರನ್ನು ಕಡೆಗಣಿಸಿದೆ. ಈ ಬಗ್ಗೆ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶ ಕಲ್ಪಿಸಬೇಕು ಎಂದು ಕಾಂಗ್ರೆಸ್ ಸದಸ್ಯ ಬಾಲಕೃಷ್ಣನ್ ಆಗ್ರಹಿಸಿದರು.
ಕಾಂಗ್ರೆಸ್ ಅಧಿಕಾರದಲ್ಲಿರುವ ಮಧ್ಯಪ್ರದೇಶ, ಛತ್ತೀಸ್‌ಗಡದ ಮಾದರಿಯಲ್ಲಿ ರೈತರ ಕೃಷಿ ಸಾಲವನ್ನು ಮನ್ನಾ ಮಾಡಬೇಕು ಎಂದು ವಿರೋಧ ಪಕ್ಷದ ಸದಸ್ಯರು ಒತ್ತಾಯಿಸಿದರು
ಇದಕ್ಕೆ ಉತ್ತರಿಸಿದ ಕೃಷಿ ಸಚಿವ ವಿ ಎಸ್ ಸುನಿಲ್ ಕುಮಾರ್, ಕೇರಳ ರಾಜ್ಯ ರೈತರ ಸಾಲ ಪರಿಹಾರ ಆಯೋಗದ ಮೂಲಕ 2 ಲಕ್ಷ ರೂಪಾಯಿವರೆಗಿನ ಕೃಷಿ ಸಾಲ ಮನ್ನಾ ಮಾಡಲು ಇಲಾಖೆ ಯೋಜನೆ ರೂಪಿಸಿದೆ ಎಂದು ಹೇಳಿದರು.
ಸಾಲ ಮರುಪಾವತಿಗಾಗಿ ಮನೆಗಳು, ವಾಣಿಜ್ಯ ಆಸ್ತಿಗಳ ಹರಾಜಿಗೆ ಹಣಕಾಸು ಸಂಸ್ಥೆಗಳಿಗೆ ಮತ್ತು ಬ್ಯಾಂಕುಗಳಿಗೆ ಅವಕಾಶ ಕಲ್ಪಿಸುವ ಸರ್ಫಾಸಿ ಕಾಯ್ದೆಯಿಂದ ಸಹಕಾರಿ ಬ್ಯಾಂಕುಗಳನ್ನು ಹೊರಗಿಡಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯ್ ವಿಜಯನ್ ತಿಳಿಸಿದರು.
ರಾಜ್ಯದಲ್ಲಿ ಎಡಪಕ್ಷ ಅಧಿಕಾರಕ್ಕೆ ಬಂದ ಬಳಿಕ 18 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನಿತ್ತಿಲ್ಲ ಹೇಳಿದರು.
ಪಾಕೃತಿಕ ವಿಪತ್ತು, ಓಖಿ ಚಂಡಮಾರುತ, ಪ್ರವಾಹ, ಬರ ಮುಂತಾದವುಗಳಿಂದಾಗಿ ರಾಜ್ಯದ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ರೈತರ ನೆರವಿಗೆ ಸರ್ಕಾರ ಧಾವಿಸಿದೆ. ಹಲವು ಪ್ಯಾಕೇಜ್‌ಗಳನ್ನು ಒದಗಿಸಲಾಗಿದೆ. 204.99 ಕೋಟಿ ರೂ ಹಣಕಾಸು ನೆರವು, ಬೆಳೆ ವಿಮೆಯ 51 ಕೋಟಿ ರೂ. ವಿತರಿಸಲಾಗಿದೆ ಎಂದು ಕೃಷಿ ಸಚಿವರು ತಿಳಿಸಿದರು
ಸಚಿವರ ಉತ್ತರದ ಬಳಿಕ ಸ್ಪೀಕರ್ ಪಿ ಶ್ರೀರಾಮಕೃಷ್ಣನ್ ಅವರು ಅವಿಶ್ವಾಸ ನಿರ್ಣಯ ಮಂಡಿಸಲು ಅನುಮತಿ ನಿರಾಕರಿಸಿದರು. ಇದನ್ನು ಪ್ರತಿಭಟಿಸಿ ವಿರೋಧ ಪಕ್ಷದ ಸದಸ್ಯರು ಕಲಾಪ ಬಹಿಷ್ಕರಿಸಿ ಹೊರನಡೆದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








