ದಾವಣಗೆರೆ
ಗ್ರಾಮೀಣ ಪ್ರದೇಶದ ಮಹಿಳೆಯರು ಇಂದಿಗೂ ಬಹಿರ್ದೆಸೆಗೆ ತಿಪ್ಪೆ, ಗಿಡಗಳ ತಾಕುಗಳನ್ನು ಹುಡುಕುವ ಸ್ಥಿತಿ ಇರುವುದು ನಿಜಕ್ಕೂ ಶೋಚನೀಯವಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಕಳವಳ ವ್ಯಕ್ತಪಡಿಸಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಮಂಗಳವಾರ ಜಿಲ್ಲಾ ಪಂಚಾಯತ್ನ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಏರ್ಪಡಿಸಿದ್ದ ಸ್ಚಚ್ಛ ಮೇವ ಜಯತೆ ಆಂದೋಲನವನ್ನು ಗಿಡಗಳಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಸಿಂಧೂ ನಾಗರೀಕತೆಯೂ ಎಲ್ಲ ನಾಗರೀಕತೆಗಿಂತ ಪುರಾತನವಾದ ನಾಗರೀಕತೆಯಾಗಿದ್ದು, ಸಿಂಧೂ ನಾಗರೀಕತೆಯ ಉತ್ಖನನದಲ್ಲಿ ದೊರೆತ ಹರಪ ಮತ್ತು ಮೇಹೆಂಜೋಧಾರೋ ಪಟ್ಟಣಗಳಲ್ಲಿ ಒಳ ಚರಂಡಿ, ಶೌಚ ಗೃಹ, ಅಡುಗೆ ಮನೆ, ಶಯನ ಗೃಹಗಳನ್ನು ಹೊಂದಿದ್ದ ಮನೆಗಳು ಕಂಡು ಬಂದಿದ್ದು, ಇಂತಹ ಪರಂಪರೆಯಿಂದ ಬಂದಿರುವ ಭಾರತೀಯರು ಗ್ರಾಮೀಣ ಪ್ರದೇಶದಲ್ಲಿ ಬಹಿರ್ದೆಸೆಗೆ ತಿಪ್ಪೆ, ಗಿಡಗಳ ತಾಕು ಹುಡುಕುವ ಸ್ಥಿತಿ ಇರುವುದು, ಸ್ವಚ್ಛತೆಗಾಗಿ ಪ್ರತಿಜ್ಞಾವಿಧಿ ಸ್ವೀಕರಿಸುವ ಸ್ಥಿತಿಯಲ್ಲಿರುವುದು ನಿಜಕ್ಕೂ ದುರ್ದೈವವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಿಂಧೂ ನಾಗರೀಕತೆಯ ಕಾಲದಲ್ಲಿಯೇ ಶುಚಿತ್ವಕ್ಕೆ ಮಹತ್ವ ಕೊಟ್ಟಿರುವ ನಾವು, ಈಗ ಸ್ಚಚ್ಛತೆಯ ವಿಷಯದಲ್ಲಿ ಶೈಶಾವಸ್ಥೆಯಲ್ಲಿದ್ದೇವೆ. ಹಾಗದರೆ, ನಮ್ಮ ಪರಂಪರೆಯ ಲಿಂಕೇಜ್ ಎಲ್ಲಿ ತಪ್ಪಿ ಹೋಯಿತು ಎಂಬುದರ ಬಗ್ಗೆ ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ ಎಂದ ಅವರು, ಅವನತಿ ಹೊಂದಿದ ಕಾಲಘಟ್ಟದಲ್ಲಿ ನಮ್ಮ ನಾಗರೀಕತೆ, ಸಂಸ್ಕøತಿಯ ಮೇಲೆ ನಡೆದ ಹತ್ತು, ಹಲವು ನೈಸರ್ಗಿಕ ದಾಳಿಯಲ್ಲಿ ವಿಕೃತಿಯ ಪ್ರಕೋಪಕ್ಕೆ ಸಿಲುಕಿ ಲಿಂಕೇಜ್ ತಪ್ಪಿರಬಹುದೇ ಎಂಬುದರ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ದ್ವಾರಕ ನಗರವು ಸಮುದ್ರದಲ್ಲಿ ಮುಳುಗಿರುವ ಬಗ್ಗೆ ಹಲವು ಸಂಶೋಧನೆಗಳು ದೃಢ ಪಡಿಸಿದ್ದು, ಇದು ನೈಸರ್ಗಿಕ ದಾಳಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ವಿಶ್ಲೇಷಿಸಿದರು.
ನಮ್ಮ ಪರಂಪರೆ ನಾಶವಾಗಿರುವ ವಿಚಾರಗಳನ್ನು ಕೆದುಕುವ ಮೂಲಕ ಇಂದಿನ ಮಕ್ಕಳಲ್ಲಿ ಹುಡುಕಾಟದ ಬೀಜ ಬಿತ್ತಿದರೇ, ಸಂಶೋಧನೆಗೆ ಕಾರಣವಾಗಿ, ಮುಂದಿನ ಪೀಳಿಗೆಗೆ ಮಾರ್ಗದರ್ಶಕರಾಗ ಬಲ್ಲರು ಎಂದು ಹೇಳಿದರು.
ವೈಭವಯುತವಾಗಿ ಬದುಕಿದ ಜನ, ಇಂದು ಸ್ವಚ್ಛತೆಗಾಗಿ ಪರದಾಡುತ್ತಿರುವುದು ನಿಜಕ್ಕೂ ಮನಸ್ಸಿಗೆ ಖೇದ ಉಂಟು ಮಾಡುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಬೇಕಾದ ಪರಿಸ್ಥಿತಿ ಇದೆ. ಇದಕ್ಕೆ ನಾವು ಇಲ್ಲಿಗೆ ಬಂದು ಭಾಷಣ ಮಾಡಿ, ಕೇಳಿ ಹೋಗಿ ಬಿಡುವುದೇ ಪ್ರಮುಖ ಕಾರಣವಾಗಿದೆ. ನುಡಿದಂತೆ ನಡೆಯಬೇಕೆಂಬ ಯಾರಲ್ಲೂ ಇಲ್ಲವಾಗಿದೆ. ನಡೆ-ನುಡಿ ಒಂದಾದರೆ, ಸ್ವಚ್ಛ ಹಾಗೂ ಪ್ರಬುದ್ಧ ಸಮಾಜ ನಿರ್ಮಾಣ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ಮಕ್ಕಳಿಗೆ ಬರೀ ಅಂಕಗಳಿಕೆಗೆ ಮಾತ್ರ ಸೀಮಿತ ಮಾಡದೇ, ಅವರಲ್ಲಿ ಸೇವಾ ಮನೋಭಾವ ಬೆಳೆಸಬೇಕು. ಅಲ್ಲದೇ, ಸ್ವಚ್ಛತೆ ಹಾಗೂ ಪರಿಸರದ ಬಗ್ಗೆ ಅರಿವು ಮೂಡಿಸಬೇಕು. ಇತಿಹಾಸ ಪ್ರಜ್ಞೆಯನ್ನು ಕಟ್ಟಿಕೊಡಬೇಕು. ಭಾವನಾತ್ಮಕ ಸಂಬಂಧ ಇರುವ ವಾತಾವರಣದಲ್ಲಿ ಮಕ್ಕಳನ್ನು ಬೆಳೆಸಬೇಕು. ಇಲ್ಲದಿದ್ದೆ, ಮುಂದಿನ ದಿನಗಳಲ್ಲಿ ಇಡೀ ಪ್ರಕೃತಿ, ಜೀವ ಸಂಕುಲವೇ ನಾಶವಾಗಿ, ಮನುಷ್ಯ ಮನುಷ್ಯನನ್ನೇ ತಿಂದು ಬದುಕುವ ಕಾಲ ಬಂದರೂ ಆಶ್ಚರ್ಯಪಡಬೇಕಿಲ್ಲ ಎಂದು ಸೂಚ್ಯವಾಗಿ ಎಚ್ಚರಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯ ತೇಜಸ್ವಿ ಪಟೇಲ್ ಮಾತನಾಡಿ, ಮಹಾತ್ಮ ಗಾಂಧೀಜಿಯವರು ಸ್ವಚ್ಛತೆ ಇರುವ ಕಡೆ ದೇವರು ಇರುತ್ತಾನೆಂದು ಪ್ರತಿಪಾದಿಸಿದ್ದರು. ಆದರೆ, ನನ್ನ ಪ್ರಕಾರ ಎಲ್ಲಿ ನಾಗರಿಕರು ಇರುತ್ತಾರೋ, ಅಲ್ಲಿ ಸ್ವಚ್ಛತೆ ಇರುತ್ತದೆ ಎಂದರು.
ತರಳಬಾಳು ಕೃಷಿ ವಿಜ್ಞಾನ ಕೇಂದ್ರದವರು ಉತ್ಪಾದಿಸಿರುವ ಜೈವಿಕ ಇಂಧನವನ್ನು ಬರೀ ಸರ್ಕಾರಿ ಅಧಿಕಾರಿಗಳ ವಾಹನಕ್ಕೆ ಹಾಕುವ ಬದಲು, ಆಟೋಮೊಬೈಲ್ ಅವರನ್ನು ಅಧಿಕಾರಿಗಳು ಸಂಪರ್ಕಿಸಿ, ಜೈವಿಕ ಇಂಧನಕ್ಕೆ ವಾಹನಗಳು ಓಡುವಹಾಗೆ, ಎಂಜಿನ್ಗಳನ್ನು ಅಭಿವೃದ್ಧಿ ಪಡಿಸುವಂತೆ ಮನವೋಲಿಸಬೇಕು. ಅಲ್ಲದೇ, ಮೆಕ್ಕೆಜೋಳಕ್ಕೆ ಹೆಚ್ಚು ಭಾದೆ ನೀಡುತ್ತಿರುವ ಹುಳು ಒಂದಕ್ಕೆ ನಮ್ಮ ದೇಶವನ್ನು ಕಾಯುವ ಸೈನಿಕರ ಹೆಸರಿನೊಂದಿಗೆ ಸೈನಿಕ ಹುಳು ಎಂಬುದಾಗಿ ಹೆಸರಿಟ್ಟಿರುವುದನ್ನು ಕೇಳುವುದಕ್ಕೆ ನಿಜಕ್ಕೂ ಮನಸ್ಸಿಗೆ ನೋವಾಗುತ್ತೆ. ಆದ್ದರಿಂದ ಆ ಹುಳುಗಳಿಗೆ ರಾಕ್ಷಸ ಹುಳು ಎಂಬ ಹೆಸರಿಡಿ ಎಂದು ಸಲಹೆ ನೀಡಿದರು.
ಜಿ.ಪಂ. ಅಧ್ಯಕ್ಷೆ ಶೈಲಜಾ ಬಸವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಜಿ.ಪಂ. ಉಪಾಧ್ಯಕ್ಷ ಸುರೇಂದ್ರ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಆರ್.ಮಹೇಶ್, ಸದಸ್ಯರಾದ ಉಮಾ ವೆಂಕಟೇಶ್, ಸಾಕಮ್ಮ ಗಂಗಾಧರ ನಾಯ್ಕ, ಶಾಂತಕುಮಾರಿ ಶ್ರೀಧರ್, ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್, ಕೃಷಿ ವಿಜ್ಞಾನಿ ಟಿ.ಎನ್.ದೇವರಾಜ್, ಡಾ.ಶಾಂತಾ ಭಟ್ ಮತ್ತಿತರರು ಹಾಜರಿದ್ದರು. ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಸ್ವಚ್ಛತೆ ಪ್ರತಿಜ್ಞಾವಿಧಿ ಬೋಧಿಸಿದರು. ಜಿ.ಪಂ. ಉಪ ಕಾರ್ಯದರ್ಶಿ ಭೀಮಾ ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸಿದ್ದಗಂಗಾ ಶಾಲೆ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.