ಕಾರ್ನಾಡ್‍ರದು ಕನ್ನಡ ಸಾರಸ್ವತ ಲೋಕದ ಮೇರು ವ್ಯಕ್ತಿತ್ವ

ಚಿತ್ರದುರ್ಗ

     ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪರೂಪದ ಕೃತಿಗಳನ್ನು ಮತ್ತು ನಾಟಕಗಳನ್ನು ನೀಡುವ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಧೀಮಂತ ಸಾಹಿತಿ ಗಿರೀಶ್ ಕಾರ್ನಾಡ್‍ರವರ ವ್ಯಕ್ತಿತ್ವ ಅಪರೂಪವಾದದ್ದು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ನಿರ್ದೇಶಕ ನರೇನಹಳ್ಳಿ ಅರುಣ್ ಕುಮಾರ್ ಹೇಳಿದರು.

     ಪತ್ರಿಕಾ ಭವನದಲ್ಲಿ ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗಿರೀಶ್ ಕಾರ್ನಾಡರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಗಿರೀಶ್ ಕಾರ್ನಾಡರು ದೇಶದ ಅತ್ಯುತ್ತಮ ಪ್ರಶಸ್ತಿಗಳಾದ ಪದ್ಮಭೂಷಣ, ಪದ್ಮಶ್ರೀ ಪ್ರಶಸ್ತಿ ಸೇರಿ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯ ಲೋಕಕ್ಕೆ ತಂದುಕೊಟ್ಟ ಶ್ರೇಯಸ್ಸು ಕಾರ್ನಾಡರಿಗೆ ಸಲ್ಲುತ್ತದೆ ಎಂದರು.

      ತುಗಲಕ್, ಹಯವದನ, ನಾಗಮಂಡಲ, ಟಿಪ್ಪುವಿನ ಕನಸು, ತಲೆದಂಡ ಸೇರಿ ಹಲವು ನಾಟಕ ಪ್ರತಿಗಳನ್ನು ರಚನೆ ಮಾಡಿರುವ ಗಿರೀಶ್ ಕಾರ್ನಾಡರು ಕನ್ನಡ ರಂಗ ಭೂಮಿ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದರು. ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ ಎಂದರು.

      ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಹೆಚ್. ಲಕ್ಷ್ಮಣ್‍ರವರು ಮಾತನಾಡಿ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಹೆಸರುವಾಸಿಯಾದ ಗಿರೀಶ್ ಕಾರ್ನಾಡರು ಸಮಕಾಲೀನ ಸಾಹಿತ್ಯದ ಸವಾಲುಗಳಿಗೆ ಉತ್ತರವಾಗಿದ್ದರು ಎಂದರು.

       ಗಿರೀಶ್ ಕಾರ್ನಾಡರ ನಿಧನದಿಂದಾಗಿ ಕನ್ನಡ ಸಾಹಿತ್ಯ ಮತ್ತು ನಾಟಕ ಕ್ಷೇತ್ರಗಳಿಗೆ ಅಪಾರ ನಷ್ಟವಾಗಿದ್ದು, ಅವರ ನಿಧನ ಇಡೀ ಕನ್ನಡ ನಾಡನ್ನು ಶೋಕದಲ್ಲಿ ಮುಳುಗಿಸಿದಂತಾಗಿದೆ. ಮಹರಾಷ್ಟ್ರದಲ್ಲಿ ಹುಟ್ಟಿ ಕರ್ನಾಟಕದ ಶಿರಸಿ, ಧಾರವಾಡಗಳಲ್ಲಿ ಶಿಕ್ಷಣ ಪಡೆದಿದ್ದ ಅವರು ದೇಶ ವಿದೇಶಗಳ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ, ಚಲನಚಿತ್ರ ನಟರಾಗಿ ದೇಶದ ಉದ್ದಗಲಕ್ಕೆ ಪರಿಚಿತರಾಗಿದ್ದರು. ಅವರ ನಿಧನ ಕನ್ನಡ ಸಾಹಿತ್ಯ ರಂಗ ನೋವು ಅನುಭವಿಸುವಂತಾಗಿದೆ ಎಂದು ಹೇಳಿದರು.

       ಶ್ರದ್ಧಾಂಜಲಿ ಸಭೆಯಲ್ಲಿ ಇಂಡಿಯನ್ ಎಕ್ಸ್‍ಪ್ರೆಸ್ ವರದಿಗಾರರಾದ ಜಿ. ಸುಭಾಷ್ ಚಂದ್ರ, ಟಿವಿ5 ವರದಿಗಾರರಾದ ವಿ.ವೀರೇಶ್, ಕ್ಯಾಮರಮನ್ ಶಿವು, ಪತ್ರಕರ್ತ ಸಿ.ಪಿ. ಮಾರುತಿ, ಶ್ರೀ ಕಣಿವೆ ಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ರಾಮಚಂದ್ರ, ಮಲ್ಲಿಕಾರ್ಜುನ, ಪಾಪನಾಯ್ಕ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link