ಚಿತ್ರದುರ್ಗ:
ಹಿರೇಗುಂಟನೂರು ಹಳಿಯೂರು ಸಮೀಪ ಸೋಮವಾರ ಮೈನ್ಸ್ ಲಾರಿ ಬೈಕ್‍ಗೆ ಡಿಕ್ಕಿ ಹೊಡೆಸಿ ದಂಪತಿ ಸೇರಿದಂತೆ ಮೂವರನ್ನು ಬಲಿತೆಗೆದುಕೊಂಡಿದ್ದರಿಂದ ಮೈನ್ಸ್ ಲಾರಿಗಳ ಸಾಗಾಟವನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಹಿರೇಗುಂಟನೂರು ಹಾಗೂ ಸುತ್ತಮುತ್ತಲ ಗ್ರಾಮಗಳ ನೂರಾರು ಜನ ಪ್ರತಿಭಟನೆ ನಡೆಸಿ ಗಣಿ ಕಂಪನಿಗಳ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಅಪಘಾತದಲ್ಲಿ ತುಂಬು ಗರ್ಭಿಣಿ ಹಾಗೂ ಗರ್ಭದಲ್ಲಿದ್ದ ಶಿಶು ಕೂಡ ಹೊರಗಿನ ಪ್ರಪಂಚವನ್ನು ನೋಡುವ ಮುನ್ನವೇ ಬಲಿಯಾಗಿದ್ದನ್ನು ನೆನಪಿಸಿಕೊಂಡು ಪ್ರತಿಭಟನೆಯಲ್ಲಿದ್ದ ನೂರಾರು ಮಹಿಳೆಯರು ಅವರ ಸಂಬಂಧಿಕರು ದುಃಖಿ ದುಃಖಿಸಿ ಅಳುತ್ತಿದ್ದರು. ಇನ್ನು ಕೆಲವರು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ಗಣಿ ಕಂಪನಿಗಳ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಹಿರೇಗುಂಟನೂರು ಹೋಬಳಿ ಭೀಮಸಮುದ್ರ ಬಳಿ ವೇದಾಂತ ಲಿಮಿಟೆಡ್ ಕಂಪನಿಯವರು ಅದಿರು ಸಾಗಾಣಿಕೆ ಮಾಡುತ್ತಿದ್ದು, ಪ್ರತಿನಿತ್ಯವೂ ನೂರಾರು ಲಾರಿಗಳು ಭೀಮಸಮುದ್ರ ರಸ್ತೆಯಲ್ಲಿ ಸಂಚರಿಸುತ್ತಿವೆ. ಅನೇಕ ಬಾರಿ ಅಪಘಾತಗಳಾಗಿ ಸಾವು-ನೋವು ಸಂಭವಿಸಿದರು ಅದಿರು ಸಾಗಿಸುವ ಕಂಪನಿಗಳ ಲಾರಿಗಳು ಮಾರ್ಗವನ್ನು ಬದಲಾಯಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು
ಈ ಮಾರ್ಗದಲ್ಲಿ ಪದೇ ಪದೇ ಇಂತಹ ಘಟನೆಗಳು ನಡೆಯುತ್ತಲೇ ಇದ್ದು, ಗ್ರಾಮಸ್ಥರು ಹಾಗೂ ಸಾರ್ವಜನಿಕರು ಸಾಕಷ್ಟು ಬಾರಿ ಪ್ರತಿಭಟನೆ ನಡೆಸಿದ್ದಾರೆ. ಚುನಾಯಿತ ಪ್ರತಿನಿಧಿಗಳು ಸಹ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಯಾವುದೇ ಅನುಮತಿ ಇಲ್ಲದೆ ರಾತ್ರಿ ಹಗಲು ನೂರಾರು ಲಾರಿಗಳು ಅದಿರು ತುಂಬಿಕೊಂಡು ಸಂಚರಿಸುತ್ತಿವೆ. ಸಂಬಂಧಿಸಿದ ಇಲಾಖೆಯೂ ನಿರ್ಲಕ್ಷವಹಿಸಿವೆ ಎಂದು ದೂರಿದರು
ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಇತ್ತ ಗಮನಹರಿಸದಿರುವುದರಿಂದಲೆ ಮೇಲಿಂದ ಮೇಲೆ ಅಪಘಾತಗಳುಂಟಾಗಿ ಮುಗ್ದರು ಪ್ರಾಣ ಕಳೆದುಕೊಳ್ಳುವಂತಾಗಿದೆ ಎಂದು ಮೃತರ ಸಂಬಂಧಿಕರುಗಳು ಡಿ.ಸಿ.ಕಚೇರಿ ಎದುರು ಗೋಳಾಡಿದರು.
ಅಪಘಾತದಲ್ಲಿ ಮೃತಪಟ್ಟ ಮಹಂತೇಶ್‍ನಾಯ್ಕ, ಪತ್ನಿ ಎಂಟು ತಿಂಗಳ ಗರ್ಭಿಣಿ ದೀಪಾಬಾಯಿ ಹಾಗೂ ದೀಪಾಬಾಯಿ ಅಣ್ಣನ ಮಗ ಚೇತನ್ ಸಾವನ್ನಪ್ಪಿದ್ದು, ತಲಾ ಒಂದು ಕೋಟಿ ರೂ.ಪರಿಹಾರ ನೀಡಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.ಹತ್ತಾರು ಅಪೆಗಾಡಿ, ಆಟೋ, ಟ್ರಾಕ್ಟರ್, ನೂರಾರು ಬೈಕ್‍ಗಳಿಂದ ಆಗಮಿಸಿ ಸುಮಾರು ಮೂರು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ್ದರಿಂದ ಒನಕೆ ಓಬವ್ವ ವೃತ್ತ ಹಾಗೂ ಜಿಲ್ಲಾಧಿಕಾರಿ ಬಂಗಲೆ ಕಡೆಯಿಂದ ವಾಹನ ಸಂಚಾರವನ್ನು ತಡೆಹಿಡಿಯಲಾಗಿತ್ತು. ಅಲ್ಲಲ್ಲಿ ಪೊಲೀಸ್ ಬ್ಯಾರಿಕೇಡ್‍ಗಳನ್ನು ಅಡ್ಡವಿಟ್ಟು ಪೋಲಿಸರು ಸಂಚಾರ ದಟ್ಟಣೆಯನ್ನು ನಿಭಾಯಿಸುತ್ತಿದ್ದರು.
ಹೊರಗೆ ಪ್ರತಿಭಟನೆ ನಡೆಯುತ್ತಿದ್ದರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಜಿಲ್ಲಾಧಿಕಾರಿ, ರಕ್ಷಣಾಧಿರಿ, ರೈತ ಸಂಘ ಹಾಗೂ ಹಿರೇಗುಂಟನೂರು ಗ್ರಾಮದ ಮುಖಂಡರು ಮತ್ತು ವೇದಾಂತ ಗಣಿ ಕಂಪನಿಯವರ ಜೊತೆ ಮೃತರ ಕುಟುಂಬಕ್ಕೆ ಪರಿಹಾರ ಒದಗಿಸುವ ಕುರಿತು ಚರ್ಚಿಸಿದರು.
ಅಖಿಲ ಕರ್ನಾಟಕ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಮಿತಿ ಜಿಲ್ಲಾಧ್ಯಕ್ಷ ಕೆ.ಜಿ.ಅನಂತಮೂರ್ತಿನಾಯ್ಕ, ಕನ್ನಡಸೇನೆ ಕರ್ನಾಟಕ ಜಿಲ್ಲಾಧ್ಯಕ್ಷ ರಮೇಶ್, ಗೋವಿಂದನಾಯ್ಕ, ತಿಪ್ಪೇಶ್‍ನಾಯ್ಕ, ಕುಮಾರ್ ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/06/1-10.gif)