ಭದ್ರಾ ಮೇಲ್ದಂಡೆ ಯೋಜನೆ : ಕೆರೆ ಮಾರ್ಗ ಬದಲಾವಣೆ ವಿರುದ್ದ ಪ್ರತಿಭಟನೆ

ಚಿತ್ರದುರ್ಗ

      ಭದ್ರಾ ಮೇಲ್ದಂಡೆ ಯೋಜನೆಯಡಿ ತುಂಬಿಸುವ ಕೆರೆಗಳ ಮಾರ್ಗದಲ್ಲಿ ಯಾವುದೇ ಬದಲಾವಣೆ ಮಾಡಬಾರದೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ಜೂನ್ 17ರಂದು ಪ್ರತಿಭಟನೆ ನಡೆಸಲಾಗುವುದೆಂದು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪ್ರಧಾನಕಾರ್ಯದರ್ಶಿ ಟಿ.ನುಲೇನೂರು ಶಂಕ್ರಪ್ಪ ಹೇಳಿದರು.

     ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಿತ್ರದುರ್ಗ ಸಮೀಪದ ಮಲ್ಲಾಪುರ, ಕಾತ್ರಾಳು, ಮುದ್ದಾಪುರ,  ಯಳಗೋಡು ಹಾಗೂ ಸುಲ್ತಾನಿಪುರ ಕೆರೆಗಳನ್ನು ನೀರು ತುಂಬಿಸಲು ಯೋಜಿಸಲಾಗಿದೆ. ಆದರೆ ಇತ್ತೀಚೆಗೆ ಜಗಳೂರು ತಾಲೂಕು ರೈತರು ಮಾರ್ಗ ಬದಲಾವಣೆಗೆ ಪಟ್ಟು ಹಿಡಿದು ನೇರವಾಗಿ ಜಗಳೂರು ತಾಲೂಕಿನ ಸಂಗನೇಹಳ್ಳಿ ಮೊದಲಾದ ಕೆರೆಗಳಿಗೆ 2.4 ಟಿಎಂಸಿ ಸಂಪೂರ್ಣ ನೀರನ್ನು ಒದಗಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ಜಗಳೂರು ರೈತರು ಭದ್ರೆ ನೀರು ಕೇಳುತ್ತಿರುವುದಕ್ಕೆ ಅಭ್ಯಂತರವಿಲ್ಲ. ಆದರೆ ಮಾರ್ಗ ಬದಲಾಯಿಸಿ ಜಗಳೂರು ಕೆರೆಗೆ ನೀರು ಕೊಡಿ ಎಂಬ ಬೇಡಿಕೆ ಇಟ್ಟಿದ್ದಾರೆ ಇದು ಸರಿಯಲ್ಲ ಎಂದರು.

      ಕೆ.ಸಿ.ರೆಡ್ಡಿ ವರದಿಯಂತೆ ಮಾರ್ಗದಲ್ಲಿ ಯಾವುದೇ ಬದಲಾವಣೆ ಮಾಡಬಾರದು ಎಂದಿದ್ದರೂ ಸಿದ್ದರಾಮಯ್ಯ ತಮ್ಮ ಅಧಿಕಾರಾವಧಿ ಕೊನೆ ದಿನಗಳಲ್ಲಿ ಮಾರ್ಗ ಬದಲಾವಣೆ ಕುರಿತಂತೆ ನೀರಾವರಿ ತಜ್ಞ ದೇಸಾಯಿ ನೇತೃತ್ವದಲ್ಲಿ ಸಮಿತಿ ರಚಿಸಿದ್ದರು. ಒಂದು ಸಭೆ ನಡೆಸಿರುವ ಸಮಿತಿ ಈವರೆಗೆ ವರದಿ ಕೊಟ್ಟಿಲ್ಲ. ಇದುವರೆಗೆ ಜಗಳೂರು ತಾಲ್ಲೂಕು ರೈತರೊಂದಿಗೆ ಈ ವಿಚಾರದ ಬಗ್ಗೆ ಮಾತುಕತೆ ನಡೆಸಿಲ್ಲ. ಮುಂದಿನ ದಿನಗಳಲ್ಲಿ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

      ಜೂ.18ರಂದು ಮತ್ತೆ ಸಭೆ ಸೇರಲಿದೆ ಎಂದು ಗೊತ್ತಾಗಿದೆ. ಭದ್ರಾಮೇಲ್ದಂಡೆ ಯೋಜನೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕೆರೆಗಳ ಹೂಳೆತ್ತುವ ಹಾಗೂ ಒತ್ತುವರಿ ತೆರವುಗೊಳಿಸಬೇಕೆಂದು ಆಗ್ರಹಿಸಿದರು.

      ಕೆ.ಸಿ.ರೆಡ್ಡಿ ವರದಿ ಪ್ರಕಾರ ಕಾತ್ರಾಳ್, ಮುದ್ದಾಪುರ, ಯಳಗೋಡು ಮೂಲಕ ಜಗಳೂರು ಕೆರೆಗೆ ನೀರು ಹರಿಸಬೇಕು. ಈಗ ಜಗಳೂರು ರೈತರು ಕೇಳುತ್ತಿರುವುದು ಬೆಳಗಟ್ಟ, ಹಾಯ್ಕಲ್ ಮೂಲಕ ಜಗಳೂರು ತಾಲ್ಲೂಕಿನ ಸಂಗೇನಹಳ್ಳಿಗೆ ನೇರವಾಗಿ ನೀರು ಹರಿಸುವಂತೆ ಒತ್ತಾಯ ಮಾಡುತ್ತಿದ್ದಾರೆ.

      ಇದಕ್ಕೆ ಸಂಬಂಧಿಸಿದಂತೆ ನೀರಾವರಿ ತಜ್ಞ ದೇಸಾಯಿ ಹಾಗೂ ಇತರರ ನೇತೃತ್ವದ ಸಮಿತಿ ರಚಿಸಲಾಯಿತು. ಸಮಿತಿ ಒಮ್ಮೆ ಮಾತ್ರ ಸಭೆ ನಡೆಸಿದೆ. ಮತ್ತೊಂದು ಸಭೆ ಜೂನ್ 18ರಂದು ನಡೆಯಲಿದೆ. ಇದಕ್ಕಾಗಿ ಸರ್ಕಾರದ ಗಮನ ಸೆಳೆಯುವ ಸಲುವಾಗಿ 17ರಂದು ರೈತರು ಹೆದ್ದಾರಿ ಬಂದ್‍ನಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

     ಜಗಳೂರು ತಾಲ್ಲೂಕಿಗೆ ಬೆಳಗಟ್ಟದ ಮೂಲಕ ನೀರು ಕೊಡುವ ಉದ್ದೇಶ ಹೊಂದಿದ್ದರೆ ಅಭ್ಯಂತರವಿಲ್ಲ. ಕಾತ್ರಾಳ್ ಅಚ್ಚುಕಟ್ಟುದಾರರಿಗೂ ಭದ್ರೆ ನೀರು ಕೊಡಬೇಕು. ಹಳೆ ಮಾರ್ಗವನ್ನು ಚಿತ್ರದುರ್ಗದ ಗಡಿಯಂಚಿನ ಬಸ್ತಿಹಳ್ಳಿ ವರೆಗೂ ವಿಸ್ತರಿಸಬೇಕು. ಈ ವಿಚಾರದಲ್ಲಿ ಯಾವ ರೈತರು ಸಂಘರ್ಷಕ್ಕೆ ಇಳಿಯುವುದಿಲ್ಲ. ಆದರೆ ಹಳೆ ಮಾರ್ಗದ ಪ್ರಕಾರವೇ ಕಾಮಗಾರಿ ನಡೆಸಬೇಕು ಎಂದು ಆಗ್ರಹಿಸಿದರು.

     ನೀರು ಹರಿಯುವ ಮುನ್ನ ಕೆರೆಗಳನ್ನು ಹೂಳೆತ್ತಬೇಕು. ಕೆರೆಗಳಲ್ಲಿ ಹೂಳು ತುಂಬಿಕೊಂಡು ಹಾಳಾಗಿದೆ. ಅಲ್ಲದೆ ಒತ್ತುವರಿ ಮಾಡಿಕೊಳ್ಳ ಲಾಗಿದೆ. ಸರ್ಕಾರ ಕೂಡಲೇ ಒತ್ತುವರಿ ತೆರವುಗೊಳಿಸಿ ಕೆರೆ ಹೂಳೆತ್ತುವಂತೆ ಮನವಿ ಮಾಡಿದರು.ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷ ಬಸ್ತಿಹಳ್ಳಿ ಸುರೇಶ್‍ಬಾಬು , ಜಿಲ್ಲೆಯಲ್ಲಿ ಅಂತರ್ಜಲ ಸಂಪೂರ್ಣ ಕುಸಿದಿದೆ . ಕುಡಿಯಲು ನೀರು ಸಿಗುತ್ತಿಲ್ಲ ಇಂತಹ ವೇಳೆಯಲ್ಲಿ ಮಾರ್ಗ ಬದಲಾಯಿಸಿದರೆ ಸರಿ ಇರುವುದಿಲ್ಲ . ಹಳೆ ಮಾರ್ಗದಲ್ಲಿಯೇ ಕಾಮಗಾರಿ ಮಾಡಬೇಕು ಎಂದು ಒತ್ತಾಯಿಸಿದರು.ರೈತ ಸಂಘದ ಉಪಾಧ್ಯಕ್ಷ ಎಂ.ಬಿ.ತಿಪ್ಪೇಸ್ವಾಮಿ, ಖಜಾಂಚಿ ಸಿ.ಆರ್.ತಿಮ್ಮಣ್ಣ, ಜಿಲ್ಲಾ ಸಂಚಾಲಕ ಧನಂಜಯ ಹಾಗೂ ಇತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link