ಬೆಂಗಳೂರು
ರಾಜ್ಯ ಸರ್ಕಾರದ ವತಿಯಿಂದ ಅನುಷ್ಠಾನಗೊಳಿಸುವ ವಸತಿ ಯೋಜನೆಗಳಿಗೆ ನಿರ್ದಿಷ್ಟ ಪ್ರಮಾಣದ ಹಣ ನೀಡಿ ಒಂದೇ ವರ್ಷದಲ್ಲಿ ಸೂರು ರಹಿತರಿಗೆ ಸೂರು ನೀಡಬೇಕು ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಪರಿಶಿಷ್ಟ ಜಾತಿ, ಪಂಗಡಗಳ ಕಾಯ್ದೆಯಡಿ ಕಳೆದ ಐದು ವರ್ಷಗಳಲ್ಲಿ ಒಂದು ಕಾಲು ಲಕ್ಷ ಕೋಟಿ ರೂ.ಗಳಷ್ಟು ಹಣ ವೆಚ್ಚವಾದರೂ ನಿರ್ವಸಿತರ ಸಂಖ್ಯೆ ಇದ್ದೇ ಇದೆ. ಮೂವತ್ತು ಸಾವಿರ ಕೋಟಿ ಹಣ ಖರ್ಚಾದರೂ ಯಾವ ಕಾರಣಕ್ಕಾಗಿ ವಸತಿ ಯೋಜನೆಗಳು ಇನ್ನೂ ಬಾಕಿ ಇವೆ ಎಂದವರು ಪ್ರಶ್ನಿಸಿದ್ದಾರೆ.
ಈ ಕಾಯ್ದೆಯಡಿ ಮೀಸಲಿಟ್ಟ ಹಣವನ್ನು ಲ್ಯಾಪ್ ಟಾಪ್ ನೀಡುವುದು ಸೇರಿದಂತೆ ಹಲ ಜನಪ್ರಿಯ ಯೋಜನೆಗಳಿಗೆ ವೆಚ್ಚ ಮಾಡುವ ಬದಲು ವಸತಿ, ಆರೋಗ್ಯ, ಶಿಕ್ಷಣದಂತಹ ನಿರ್ದಿಷ್ಟ ಯೋಜನೆಗಳಿಗೆ ವೆಚ್ಚ ಮಾಡಬೇಕು. ಇಲ್ಲದಿದ್ದರೆ ನಾವೇನೇ ಮಾಡಿದರೂ ಫಲಾನುಭವಿಗಳ ಸಂಖ್ಯೆ ಉಳಿದೆ ಇರುತ್ತದೆ. ಹೀಗಾಗಿ ಇನ್ನು ಮುಂದೆ ಹಲ ಯೋಜನೆಗಳಿಗೆ ಹಣ ಹಂಚುವ ಬದಲು ನಿರ್ದಿಷ್ಟ ಯೋಜನೆಗಳಿಗೆ ಹೆಚ್ಚು ಹಣ ನೀಡುವಂತೆ ಅವರು ಸೂಚಿಸಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿಂದು ಮುಂದುವರಿದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಉಪಮುಖ್ಯಮಂತ್ರಿಗಳು ಹೀಗೆ ಮಾತನಾಡಿದ್ದನ್ನು ಸಿಎಂ ಕುಮಾರಸ್ವಾಮಿ ಸಹ ಬೆಂಬಲಿಸಿದರು.
ಉಳಿದಂತೆ ವಿವಿಧ ಜಿಲ್ಲೆಗಳಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಅನುದಾನದ ಶೇ. 75 ರಷ್ಟನ್ನು ಬಿಡುಗಡೆ ಮಾಡಲಾಗುವುದು. ಕೂಡಲೇ ಅಲ್ಪಾವಧಿ ಟೆಂಡರ್ ಕರೆದು ಕಾಮಗಾರಿಗಳಿಗೆ ಚಾಲನೆ ನೀಡುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳಿಗೆ ಸಭೆಯಲ್ಲಿ ಸಿಎಂ ಹಾಗೂ ಡಿಸಿಎಂ ಸೂಚಿಸಿದರು. ಮುಖ್ಯಮಂತ್ರಿಗಳ ಅಭಿವೃದ್ಧಿ ಯೋಜನೆಯಡಿ ಜಿಲ್ಲೆಗಳಿಗೆ ಮಂಜೂರಾದ 4080 ಕಾಮಗಾರಿಗಳಲ್ಲಿ 765 ಪೂರ್ಣಗೊಂಡಿದೆ. 1939 ಕಾಮಗಾರಿಗಳು ಪ್ರಗತಿಯಲ್ಲಿವೆ. ಇವುಗಳನ್ನು ಶೀಘ್ರವೇ ಪೂರ್ಣಗೊಳಿಸಲು ಕ್ರಮ ವಹಿಸುವಂತೆ ಸೂಚಿಸಿದರು. ಎಲ್ಲ ಜಿಲ್ಲೆಗಳಳಲ್ಲಿ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲನೆಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ತಪ್ಪದೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಯಿತು.
ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಯೋಜನೆಗಳು ಸಕಾಲದಲ್ಲಿ ಪೂರ್ಣಗೊಳಿಸಲು ಅನುವಾಗುವಂತೆ ತುರ್ತಾಗಿ ಭರ್ತಿ ಮಾಡುವ ಅಗತ್ಯವಿರುವ ಹುದ್ದೆಗಳಿಗೆ ನಿವೃತ್ತ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವ ಬಗ್ಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೂ ಅನುದಾನ ಮೀಸಲಿಡಲು ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಲಾಯಿತು. ದೇವರಾಜ ಅರಸು ವಸತಿ ಯೋಜನೆಯಡಿ ದಮನಿತರು, ಶೋಷಿತ ವರ್ಗದವರಿಗೆ ವಸತಿ ಸೌಲಭ್ಯ ಮಂಜೂರು ಮಾಡಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಮಿತಿಯು ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಎಂದು ಸೂಚಿಸಲಾಯಿತು.
ನಿಗದಿ ಪಡಿಸಲಾಗಿರುವ 63,196 ಗುರಿಗೆ ಎದುರಾಗಿ ಕೇವಲ 32,075 ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಶೀಘ್ರವೇ ಆಸಕ್ತಿ ವಹಿಸಿ, ಸ್ವಯಂ ಸೇವಾ ಸಂಸ್ಥೆಗಳ ನೆರವಿನೊಂದಿಗೆ ಫಲಾನುಭವಿಗಳನ್ನು ಗುರುತಿಸಿ ಮನೆ ಹಂಚಿಕೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು. ಮುಖ್ಯಮಂತ್ರಿ ಗಳ ಬಹುಮಹಡಿ ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸಲು ಕೂಡಲೇ ಜಮೀನು ಗುರುತಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಯಿತು. ಸಭೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ,ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಮುಖ್ಯ ಕಾರ್ಯದರ್ಶಿ ಟಿ. ಎಂ. ವಿಜಯಭಾಸ್ಕರ್, ಕಂದಾಯ ಸಚಿವ ಆರ್.ವಿ. ದೇಶಪಾಂಡೆ, ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಮತ್ತಿತರ ಸಚಿವರು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು