ಬೆಂಗಳೂರು
ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸಚಿವ ಸಂಪುಟ ಶುಕ್ರವಾರ ಮಧ್ಯಾಹ್ನ 1:30 ಕ್ಕೆ ವಿಸ್ತರಣೆಯಾಗಲಿದೆ. ರಾಜಭವನದಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ ಕುಮಾರಸ್ವಾಮಿ ಅವರ ಸಂಪುಟದ ವಿಸ್ತರಣೆ ಕಾರ್ಯ ನಡೆಯಲಿದೆ.
ಸದ್ಯದ ಮಾಹಿತಿಗಳ ಪ್ರಕಾರ ಜೆಡಿಎಸ್ ಕೋಟಾದಿಂದ ಲಭ್ಯವಾಗುವ ಸೀಟಿಗೆ ಪಕ್ಷೇತರ ಶಾಸಕ ನಾಗೇಶ್ ಅವರನ್ನು ಕಾಂಗ್ರೆಸ್ ಆಯ್ಕೆ ಮಾಡಿದ್ದು, ಶಿವಳ್ಳಿ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಪಕ್ಷೇತರ ಶಾಸಕ ಆರ್ ಶಂಕರ್ ಅವರನ್ನು ನೇಮಕ ಮಾಡಲು ತೀರ್ಮಾನಿಸಲಾಗಿದೆ.
ಉಳಿದಂತೆ ಖಾಲಿ ಉಳಿಯುವ ಒಂದು ಸ್ಥಾನಕ್ಕೆ ತನ್ನ ವತಿಯಿಂದ ಅಲ್ಪಸಂಖ್ಯಾತ ನಾಯಕ ಬಿ.ಎಂ.ಫಾರೂಕ್ ಅವರನ್ನು ಹಾಗೂ ಹಾಲಿ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ಅವರ ಕೈಲಿ ರಾಜೀನಾಮೆ ಕೊಡಿಸಿ ಅದರಿಂದ ತೆರವಾಗಲಿರುವ ಸ್ಥಾನಕ್ಕೆ ಹಿರಿಯ ನಾಯಕ ಎಚ್.ವಿಶ್ವನಾಥ್ ಅವರನ್ನು ತರುವ ಕುರಿತು ಜೆಡಿಎಸ್ನಲ್ಲಿ ಸುದೀರ್ಘ ಚರ್ಚೆ ನಡೆದಿದೆ.
ಹೀಗೆ ಮಾಡಿದರೆ ಮುಂದಿನ ದಿನಗಳಲ್ಲಿ ಆಗುವ ಸಾಧಕ ಬಾಧಕಗಳ ಕುರಿತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಚರ್ಚೆ ಮುಂದುವರಿಸಿದ್ದು, ಇದು ಯಾವ ಸ್ವರೂಪವನ್ನು ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನುಳಿದಂತೆ ಕಾಂಗ್ರೆಸ್ ಕೋಟಾದಡಿ ರಾಮಲಿಂಗಾರೆಡ್ಡಿ ಅವರನ್ನು ಮಂತ್ರಿ ಮಾಡುವಂತೆ ಒತ್ತಡ ಕೇಳಿ ಬರುತ್ತಿದೆಯಾದರೂ ಈ ಕೆಲಸ ಮಾಡಿದರೆ ಕೈ ಪಾಳೆಯದಲ್ಲಿ ಆತಂಕದ ಕಾರ್ಮೋಡ ಹೆಚ್ಚಾಗಲಿದೆ ಎಂಬ ಚಿಂತೆ ಇದೆ.ಅಂದ ಹಾಗೆ ಇದಕ್ಕೂ ಮುನ್ನ ಹಿರಿಯ ನಾಯಕ ರೋಷನ್ ಬೇಗ್ ಅವರು ಪಕ್ಷದ ನಾಯಕರ ವಿರುದ್ದ ಬಂಡಾಯವೆದ್ದ ಹಿನ್ನೆಲೆಯಲ್ಲಿ ಅವರಿಗೆ ಮಂತ್ರಿಗಿರಿ ನೀಡಬಹುದು ಎಂಬ ಲೆಕ್ಕಾಚಾರ ಇತ್ತಾದರೂ ಐಎಂಎ ಹಗರಣದ ನಂತರ ಆ ನಿರೀಕ್ಷೆ ಹುಸಿಯಾಗಿದೆ.