ಗಿಡ-ಮರ ಬೆಳೆಸಿ, ಪರಿಸರ ಸಂರಕ್ಷಿಸಲು ಕರೆ

ದಾವಣಗೆರೆ:

     ಪ್ರಸ್ತುತ ಜನರು ಶುದ್ಧವಾದ ಗಾಳಿಯಿಂದ ವಂಚಿತರಾಗಿದ್ದಾರೆ. ಪ್ರತಿಯೊಬ್ಬರು ಅವಶ್ಯದ್ದಲ್ಲಿ ಗಿಡಮರಗಳನ್ನು ಬೆಳೆಸಿ ಪರಿಸರ ಕಾಪಾಡಬೇಕಾದ ಅವಶ್ಯಕತೆ ಇದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರೂ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಜಿ.ಅಂಬಾದಾಸ್ ಕುಲಕರ್ಣಿ ತಿಳಿಸಿದರು.

      ನಗರದ ಅರ್.ಎಲ್.ಕಾನೂನು ಕಾಲೇಜಿನ ಸಭಾಂಗಣದಲ್ಲಿ ಆರ್.ಎಲ್.ಕಾನೂನು ಕಾಲೇಜು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ನಡೆದ ಪರಿಸರ ದಿನಾಚರಣೆ, ವಿದ್ಯಾರ್ಥಿ ಸಂಘದ ಸಮಾರೋಪ ಮತ್ತು ಅಂತಿಮ ವರ್ಷದ ಎಲ್‍ಎಲ್‍ಬಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

        ನಮ್ಮ ದೇಶ ಅತಿ ಹೇರಳವಾದ ಪ್ರಾಕೃತಿಕ ಸಂಪತ್ತು ಹೊಂದಿದೆ. ಆದರೆ ಇಂದು ಜಾಗತೀಕರಣದ ಪ್ರಭಾವದಿಂದ ಅರಣ್ಯ ಸಂಪತ್ತು ದಿನದಿಂದ ದಿನಕ್ಕೆ ನಾಶವಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಗಿಡ ಮರಗಳನ್ನು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕೆಂದರು.

       ಪರಿಸರ ಸಂರಕ್ಷಣೆ ಕೇವಲ ಅರಣ್ಯ ಇಲಾಖೆ, ಪರಿಸರ ಇಲಾಖೆಗಳ ಹೊಣೆಗಾರಿಕೆ ಎಂದು ತಿಳಿಯದೇ ಪ್ರತಿಯೊಬ್ಬರಲ್ಲೂ ಪ್ರಕೃತಿ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.

       ವಿದ್ಯಾರ್ಥಿಗಳ ಕುರಿತು ಮಾತನಾಡಿ, ನ್ಯಾಯಾಧೀಶರು ಮತ್ತು ನ್ಯಾಯವಾದಿಗಳು ನಿತ್ಯ ವಿದ್ಯಾರ್ಥಿಗಳಾಗಿದ್ದು, ನಿರಂತರ ಅಧ್ಯಯನ ಮತ್ತು ಅಭ್ಯಾಸ ಅವಶ್ಯಕವಾಗಿದೆ. ಅವರು ತಮ್ಮ ಮುಂದಿರುವ ಸಮಸ್ಯೆಗಳಿಂದ ಹೊರ ಬರಬೇಕಾದರೆ ಅಧ್ಯಯನ ಅಗತ್ಯ.ಮುಂದಿನ ದಿನಗಳಲ್ಲಿ ನ್ಯಾಯವಾದಿಗಳಾಗುವ ವಿದ್ಯಾರ್ಥಿಗಳು ತಮ್ಮ ವೃತ್ತಿಯಲ್ಲಿ ಪ್ರಾಮಾಣಿಕತೆ, ಶ್ರದ್ದೆ, ನಂಬಿಕೆ ಮೂಲಕ ಉನ್ನತ ಸ್ಥಾನಕ್ಕೆ ಏರಲು ಸಾಧ್ಯ ಎಂದು ಹೇಳಿದರು.

       ಕ್ರೀಡಾ ಮತ್ತು ಸಾಂಸ್ಕತಿಕ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ವಿತರಿಸಿ ಮಾತನಾಡಿ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾದ ಪ್ರಭು ಎನ್ ಬಡಿಗೇರ್ ಮಾತನಾಡಿ, ಸುಖವನ್ನು ಬದಿಗಿರಿಸಿ ತ್ಯಾಗ ಮತ್ತು ಪರಿಶ್ರಮದಿಂದ ವ್ಯಕ್ತಿ ಉನ್ನತ ಸ್ಥಾನಕ್ಕೆ ಬರಬಹುದು. ಪ್ರತಿಯೊಬ್ಬರು ಸಂಯಮ, ತಾಳ್ಮಿ, ವಿನಯತೆಗಳನ್ನು ಮೈಗೂಡಿಸಿಕೊಂಡಲ್ಲಿ ವೃತ್ತಿಯಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಕಿವಿಮಾತು ಹೇಳಿದರು.

      ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಹೆಚ್.ಅರುಣ್‍ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಮುಂದೆ ತಾವು ಮಾಡುವ ವೃತ್ತಿಯ ಜೊತೆಗೆ ಸಮಾಜದಲ್ಲಿರುವ ಬಡವರ, ಶೋಷಿತರ, ನಿರ್ಗತಿಕರ ಹಕ್ಕುಗಳ ರಕ್ಷಣೆಗೆ ಮುಂದಾಗುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತಂದು ಸಮ ಸಮಾಜವನ್ನು ನಿರ್ಮಿಸುವ ಹೊಣೆಗಾರಿಕೆ ನಿರ್ವಹಿಸಬೇಕೆಂದು ಕಿವಿಮಾತು ಹೇಳಿದರು.

       ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಆರ್.ಎಲ್.ಕಾನೂನು ಕಾಲೇಜಿನ ಪ್ರಾಚಾರ್ಯ ಡಾ.ಬಿ.ಎಸ್.ರೆಡ್ಡಿ ಮಾತನಾಡಿ, ಕಾನೂನು ಆಡಳಿತದ ಮೂಲಕ ಪ್ರಜಾಪ್ರಭುತ್ವ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ನ್ಯಾಯಾಂಗವು ತನ್ನ ವಿಶ್ವಾಸರ್ಹತೆಯನ್ನು ಉಳಿಸಿಕೊಳ್ಳುವ ಮೂಲಕ ಶಾಸಕಾಂಗ ಮತ್ತು ಕಾರ್ಯಾಂಗಗಳನ್ನು ಸರಿಯಾದ ದಾರಿಯಲ್ಲಿ ಕಾರ್ಯನಿರ್ವಹಿಸಲು ಸಹಕಾರಿಯಾಗಿದೆ. ಸಮಾಜವನ್ನು ಅರ್ಥ ಮಾಡಿಕೊಳ್ಳದೇ ವೃತ್ತಿಯಲ್ಲಿ ಯಶಸ್ವಿ ಆಗಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಮಾಜದೊಡನೆ ನಿರಂತರವಾಗಿ ಸಂಪರ್ಕ ಇಟ್ಟುಕೊಳ್ಳುವುದು ಅನಿವಾರ್ಯ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ.ಮಂಜುನಾಥ್, ಕಾಲೇಜಿನ ಉಪನ್ಯಾಸಕರಾದ ವಿದ್ಯಾದರ ವೇದವರ್ಮ, ಟಿ.ಸಿ.ಪಂಕಜ, ಬಿ.ಪಿ.ಬಸವನಗೌಡ, ಕೆ.ಸೋಮಶೇಖರ್, ವಿದ್ಯಾರ್ಥಿ ಸಂಘದ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

 

Recent Articles

spot_img

Related Stories

Share via
Copy link