ಚಿತ್ರದುರ್ಗ:
ಮೀಸಲಾತಿಯನ್ನು ಶೇ.3 ರಿಂದ 7.5 ರಷ್ಟು ಹೆಚ್ಚಿಸುವಂತೆ ರಾಜ್ಯ ಸಮ್ಮಿಶ್ರ ಸರ್ಕಾರದ ಮೇಲೆ ಒತ್ತಡ ಹೇರಲು ರಾಜನಹಳ್ಳಿಯಿಂದ ರಾಜಧಾನಿವರೆಗೆ ಹೊರಟಿರುವ ನಮ್ಮ ಪಾದಯಾತ್ರೆಗೆ ಮುಖ್ಯಮಂತ್ರಿಗಳು ಸ್ಪಂದಿಸದಿದ್ದರೆ ಜೂ.25 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಅಹೋರಾತ್ರಿ ಮುಷ್ಕರ ನಡೆಸಲಾಗುವುದೆಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಎಚ್ಚರಿಸಿದರು.
ನಾಯಕ ಸಮಾಜದೊಂದಿಗೆ ಕಳೆದ 9 ರಂದು ರಾಜನಹಳ್ಳಿಯಿಂದ ಹೊರಟು ಪಾದಯಾತ್ರೆ ಮೂಲಕ ಚಿತ್ರದುರ್ಗ ಮುರುಘಾಮಠಕ್ಕೆ ಆಗಮಿಸಿದ ಪ್ರಸನ್ನಾನಂದಪುರಿಸ್ವಾಮೀಜಿ ಗುರುವಾರ ಬೃಹನ್ಮಠದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತ ಐವತ್ತು ವರ್ಷಗಳಿಂದಲೂ ಮೀಸಲಾತಿಯಲ್ಲಿ ಅನ್ಯಾಯಕ್ಕೊಳಗಾಗುತ್ತ ಬರುತ್ತಿರುವುದರಿಂದ ಅನೇಕ ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಸಹ ಇದುವರೆವಿಗೂ ಯಾವುದೇ ಪ್ರಯೋಜನವಾಗದ ಕಾರಣ ಅಂತಿಮವಾಗಿ ಪಾದಯಾತ್ರೆಗೆ ಮುಂದಾಗಿದ್ದೇವೆ.
ಪರಿಶಿಷ್ಟ ವರ್ಗದಲ್ಲಿ 51 ಇತರೆ ಸಮುದಾಯಗಳಿವೆ. ಜನಸಂಖ್ಯೆಗನುಗುಣವಾಗಿ ಮೀಸಲಾತಿಯನ್ನು ಹೆಚ್ಚಿಸಬೇಕೆಂಬುದು ನಮ್ಮ ಪ್ರಮುಖ ಬೇಡಿಕೆ. ಹಾಗಾಗಿ ಇದೆ ತಿಂಗಳ 25 ರಂದು ಬೆಂಗಳೂರಿನಲ್ಲಿ ಸಭೆ ಸೇರಿ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದೆಂದು ಹೇಳಿದರು.
ಮುರುಘಾಮಠಕ್ಕೂ ನಾಯಕ ಜನಾಂಗಕ್ಕೂ ಅವಿನಾಭಾವ ಸಂಬಂಧವಿದೆ. ಬಿಚ್ಚುಗತ್ತಿ ಭರಮಣ್ಣನಾಯಕನಿಗೆ ನೀನು ದೊರೆಯಾಗುತ್ತೀಯ ಎಂದು ಮುರುಘಿಶಾಂತವೀರಸ್ವಾಮಿಗಳು ಆಶೀರ್ವದಿಸಿದ್ದರು. ಸಮುದಾಯದ ಹಿತಕ್ಕಿಂತ ರಾಜಕೀಯದ ಅಧಿಕಾರ ದೊಡ್ಡದಲ್ಲ. ಆದ್ದರಿಂದ ನಾಯಕ ಸಮಾಜದ ಎಲ್ಲಾ ಶಾಸಕರು, ಇಬ್ಬರು ಸಂಸದರು ರಾಜೀನಾಮೆ ನೀಡಬೇಕೆಂದು ತಾಕೀತು ಮಾಡಿದ್ದೇನೆ. ಮೀಸಲಾತಿ ಹೆಚ್ಚಿಸಲು ತೊಡಕಾಗಿರುವ ತಾಂತ್ರಿಕ ಸಮಸ್ಯೆಯನ್ನು ನಿವಾರಿಸಿಕೊಂಡು ಬೇಡಿಕೆ ಈಡೇರಿಸುವುದಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಶ್ವಾಸನೆ ನೀಡಿರುವುದನ್ನು ಸಾವಧಾನದಿಂದ ಕಾಯುತ್ತೇವೆ. ಎಂದರು.
ಡಾ.ಶಿವಮೂರ್ತಿ ಮುರುಘಾಶರಣರು ಮಾತನಾಡುತ್ತ ನಾಯಕ ಜನಾಂಗದ ಬೇಡಿಕೆಗಳು ಸಮಯೋಚಿತ ಹಾಗೂ ನ್ಯಾಯಸಮ್ಮತವಾಗಿದೆ. ಉದ್ಯೋಗ ಮತ್ತು ಶೈಕ್ಷಣಿಕ ಮೀಸಲಾತಿಯನ್ನು ಕೇಳುವುದು ನಿಮ್ಮ ಹಕ್ಕು. ಮೀಸಲಾತಿಯಿಂದ ಸಾಕಷ್ಟು ಜನಾಂಗ ವಂಚನೆಗೊಳಗಾಗಿದೆ. ಸಂವಿಧಾನಬದ್ದ ಹಕ್ಕಿಗಾಗಿ ನೀವು ನಡೆಸುತ್ತಿರುವ ಹೋರಾಟಕ್ಕೆ ಮುರುಘಾಮಠದ ಸಂಪೂರ್ಣ ಬೆಂಬಲವಿದೆ ಎಂದು ಪಾದಯಾತ್ರೆಯಲ್ಲಿ ಹೊರಟಿರುವವರಿಗೆ ಆತ್ಮಸ್ಥೈರ್ಯ ತುಂಬಿದರು.
ಮುರುಘ ಶಾಂತವೀರಸ್ವಾಮೀಜಿ 400 ವರ್ಷಗಳ ಹಿಂದೆಯೇ ಬಿಚ್ಚುಗತ್ತಿಭರಮಣ್ಣನಾಯಕನಿಗೆ ದೊರೆಯಾಗು ಎಂದು ಆಶೀರ್ವದಿಸಿದ್ದರು. ನಿಮ್ಮ ಸಮಾಜ ಸಂಘಟನೆ ಇನ್ನು ಹೆಚ್ಚು ಶಕ್ತಿಯುತವಾಗಲಿ ಎಂದು ಹಾರೈಸಿದ ಮುರುಘಾಶರಣರು ನಾಯಕ ಜನಾಂಗದ ಶಾಸಕರು ಹಾಗೂ ಪಾರ್ಲಿಮೆಂಟ್ ಸದಸ್ಯರುಗಳು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವ ಬದಲು ಮೀಸಲಾತಿಯನ್ನು ಹೆಚ್ಚಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕುವುದು ಒಳ್ಳೆಯದು.
ನಿಮ್ಮ ಪಾದಯಾತ್ರೆಗೆ ರಾಜ್ಯ ಸಮ್ಮಿಶ್ರ ಸರ್ಕಾರ ಮಣಿದು ನೀವುಗಳು ಬೆಂಗಳೂರು ತಲುಪುವುದರೊಳಗೆ ಬೇಡಿಕೆಗಳು ಈಡೇರುವ ಭರವಸೆ ನನಗಿದೆ ಎಂದು ನಾಯಕ ಸಮಾಜದವರಿಗೆ ತಿಳಿಸಿದರು.
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ ಸತೀಶ್‍ಜಾರಕಿಹೊಳಿ ನೇತೃತ್ವದಲ್ಲಿ ನಮ್ಮ ಸಮಾಜದ ಎಲ್ಲಾ ಶಾಸಕರು, ಸಂಸದರು, ಅಧಿಕಾರಿಗಳು ಇದೇ ತಿಂಗಳ 19 ರಂದು ಉನ್ನತ ಮಟ್ಟದ ಸಭೆ ಸೇರಿ ಹೋರಾಟವನ್ನು ಯಾವ ಮಟ್ಟಕ್ಕೆ ಕೊಂಡೊಯ್ಯಬೇಕು ಎನ್ನುವುದರ ಬಗ್ಗೆ ತೀರ್ಮಾನಿಸುತ್ತೇವೆ. ರಾಜೀನಾಮೆ ನೀಡುವುದು ಮುಖ್ಯವಲ್ಲ. ಒಂದು ವೇಳೆ ನಮ್ಮ ಬೇಡಿಕೆಗಳು ಈಡೇರದೆ ಇದ್ದ ಪಕ್ಷದಲ್ಲಿ ಎಲ್ಲರೂ ರಾಜೀನಾಮೆ ನೀಡುತ್ತೇವೆ.
ಸಮುದಾಯಕ್ಕಿಂತ ನಮಗೆ ಅಧಿಕಾರ ದೊಡ್ಡದಲ್ಲ ಎಂದು ನೇರವಾಗಿ ನುಡಿದರು.ಸುರಪುರ ಶಾಸಕ ರಾಜುಗೌಡ ಮಾತನಾಡುತ್ತ ಮೀಸಲಾತಿ ಹೆಚ್ಚಳ ಕುರಿತು ಈಗಾಗಲೇ ಸರ್ಕಾರದ ಮೇಲೆ ಸಾಕಷ್ಟು ಒತ್ತಡಗಳನ್ನು ಹೇರಿದ್ದೇವೆ. ವಿಧಾನಸೌದದ ಒಳಗೂ ಹೊರಾಟ ಮಾಡುತ್ತಿದ್ದೇವೆ. ಈಗಲೂ ಸರ್ಕಾರ ನಮ್ಮ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸದಿದ್ದರೆ ಶಾಸಕ ಸ್ಥಾನವನ್ನು ತ್ಯಜಿಸುತ್ತೇವೆ. ಒಟ್ಟು ಹದಿನೇಳು ಮಂದಿ ಶಾಸಕರಿದ್ದೇವೆ. ಇಬ್ಬರು ಪಾರ್ಲಿಮೆಂಟ್ ಸದಸ್ಯರಿದ್ದಾರೆ.
ಪಕ್ಷಾತೀತವಾಗಿ ಎಲ್ಲರೂ ರಾಜೀನಾಮೆ ನೀಡಲು ಸಿದ್ದವಾಗಿದ್ದೇವೆ. ಮೀಸಲಾತಿಯನ್ನು ಹೆಚ್ಚಳ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ರಾಜ್ಯದ ಮುಖ್ಯಕಾರ್ಯದರ್ಶಿ, ಕೆಲವು ಅಧಿಕಾರಿಗಳ ಮೇಲೆ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಿದ್ದೇವೆ. ಬೇರೆ ಜನಾಂಗದವರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವುದಕ್ಕೆ ನಮ್ಮದೇನು ಅಭ್ಯಂತರವಿಲ್ಲ. ಅದರಂತೆ ಜನಸಂಖ್ಯೆಗನುಗುಣವಾಗಿ ಮೀಸಲಾತಿಯನ್ನು ಹೆಚ್ಚಳ ಮಾಡಲಿ ಎಂಬುದು ನಮ್ಮ ಪ್ರಮುಖ ಬೇಡಿಕೆ ಎಂದರು.
ಇಮ್ಮಡಿ ಸಿದ್ದರಾಮೇಶ್ವರಸ್ವಾಮಿ, ಮೇದಾರ ಕೇತೇಶ್ವರಸ್ವಾಮಿ, ನಾಯಕ ಸಮಾಜದ ಜಿಲ್ಲಾಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ, ತಾಲೂಕು ಅಧ್ಯಕ್ಷ ಬಿ.ಕಾಂತರಾಜ್, ಕಾರ್ಯದರ್ಶಿ ಡಿ.ಗೋಪಾಲಸ್ವಾಮಿನಾಯಕ, ಹರ್ತಿಕೋಟೆ ವೀರೇಂದ್ರಸಿಂಹ, ಮಾಜಿ ಶಾಸಕ ಎ.ವಿ.ಉಮಾಪತಿ, ಹೆಚ್.ಅಂಜಿನಪ್ಪ, ಯುವ ನ್ಯಾಯವಾದಿ ಅಶೋಕ್‍ಬೆಳಗಟ್ಟ, ಸಂಪತ್‍ಕುಮಾರ್, ಸರ್ವೆಬೋರಣ್ಣ ಇನ್ನು ಮೊದಲಾದವರು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
