ಜಿಂದಾಲ್ ಗೆ ಭೂಮಿ : ಯಡಿಯೂರಪ್ಪನವರ ತೀರ್ಮಾನ!!?

 ಬೆಂಗಳೂರು:

        ಜಿಂದಾಲ್ ಕಂಪನಿಗೆ ಜಾಗ ನೀಡಲು ಬಿಜೆಪಿಯ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರೇ ಕಾರಣ ಎಂದು ಸಚಿವ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

     ರಾಜಭವನದ ಗಾಜಿನಮನೆಯಲ್ಲಿ ಶುಕ್ರವಾರ ಇಬ್ಬರು ಪಕ್ಷೇತರ ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಡಿ.ಕೆ. ಶಿವಕುಮಾರ್, ಇಂದು ನಾವು ಜಿಂದಾಲ್ ಕಂಪನಿಗೆ ಜಾಗ ನೀಡಲು ಬಿಜೆಪಿಯ ಮಾಜಿ ಸಿಎಂಗಳಾದ ಯಡಿಯೂರಪ್ಪ, ಜಗದೀಶ್ ಶೆಟ್ಟರೆ ಹಾಗೂ ಸದಾನಂದಗೌಡರು ಕಾರಣ. ಅವರೇ ಅದಕ್ಕೆ ಅಡಿಪಾಯ ಹಾಕಿದ್ದು. ಅವರೇ ಈ ಜಮೀನು ನೀಡಲು ತೀರ್ಮಾನ ಮಾಡಿದ್ದು. ಅವರು ಮಾಡಿದ್ದನ್ನು ಸರಕಾರ ಮುಂದುವರಿಸಿಕೊಂಡು ಹೋಗಿದೆ. ಈಗ ಅದು ಒಂದು ಹಂತಕ್ಕೆ ಬಂದು ನಿಂತಿದೆ. ಬೇಕಿದ್ದರೆ ದಾಖಲೆಗಳನ್ನು ತೆಗೆಸಿ ನೋಡಲಿ’ ಎಂದು

      ‘ನಾವು ಕೈಗಾರಿಕೆಗಳನ್ನು ಬೆಳೆಸದಿದ್ದರೆ ಸರ್ಕಾರ ಎಲ್ಲ ಜನರಿಗೂ ಉದ್ಯೋಗ ನೀಡಲು ಸಾಧ್ಯವಾಗುತ್ತದೆಯೇ? ಪ್ರಧಾನಮಂತ್ರಿಗಳು 2 ಕೋಟಿ ಉದ್ಯೋಗ ನೀಡುತ್ತೇವೆ ಎಂದು ಭರವಸೆ ಕೊಟ್ಟದ್ದರಲ್ಲಾ, ಏನು ಅವೆಲ್ಲ ಸರ್ಕಾರಿ ಉದ್ಯೋಗಗಳೇ? ಜಿಂದಾಲ್ ಅವರು ಇಲ್ಲಿಯೇ ಓದಿದ್ದು, ಅತ್ಯುತ್ತಮ ಉದ್ಯಮಿ. ಯಾವುದೇ ಉದ್ಯಮಿ ಕೂಡ ಲಾಭವಿಲ್ಲದೇ ವ್ಯಾಪಾರ ಮಾಡುವುದಿಲ್ಲ. ಅವರಿಗೂ ಲಾಭವಾಗುತ್ತದೆ. ಹಾಗಂತ ಎಲ್ಲ ವಿಚಾರದಲ್ಲೂ ನಾವು ತಪ್ಪು ಹುಡುಕಿಕೊಂಡು ಹೋಗಲು ಸಾಧ್ಯವಿಲ್ಲ ಎಂದರು.

      ‘ಜಮೀನು ನೀಡುವ ವಿಚಾರವಾಗಿ ಮುಖ್ಯಮಂತ್ರಿಗಳು ಮರುಪರಿಶೀಲನೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಅದರಲ್ಲಿ ತಪ್ಪೇನಿಲ್ಲ. ಬೇಕಿದ್ದರೆ ಯಡಿಯೂರಪ್ಪನವರೂ ಪರಿಶೀಲನೆ ಮಾಡಲಿ. ಮಾಜಿ ಮುಖ್ಯಮಂತ್ರಿಯಾಗಿ ಅವರ ನಿಲುವೇನು? ಕೈಗಾರಿಕೆಗಳನ್ನು ರಾಜ್ಯದಿಂದ ಹೊರಹಾಕಲು ಬಯಸುತ್ತಾರೆಯೇ? ಎಲ್ಲದಕ್ಕೂ ಈ ರೀತಿ ತಗಾದೆ ಎತ್ತಿದರೆ ಯಾರು ಬಂದು ನಮ್ಮ ರಾಜ್ಯದಲ್ಲಿ ಹೂಡಿಕೆ ಮಾಡುತ್ತಾರೆ. ರಾಜ್ಯ ಸರ್ಕಾರದ ಸಚಿವನಾಗಿ ನಾನು ಹೇಳುತ್ತಿದ್ದೇನೆ. ಕೈಗಾರಿಕೆಗಳಿಗೆ ನಾವು ಬೆಂಬಲ ನೀಡುತ್ತೇವೆ. ಯಾರು ರಾಜ್ಯದಲ್ಲಿ ಹೂಡಿಕೆ ಮಾಡಲು ಇಚ್ಛಿಸುತ್ತಾರೋ ಅವರಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ’ ಎಂದು ಶಿವಕುಮಾರ್ ಹೇಳಿದರು.

      ಇನ್ನು ಜಿಂದಾಲ್ ಕಂಪನಿಗೆ ಬಳ್ಳಾರಿಯಲ್ಲಿ ಸಾವಿರಾರು ಎಕರೆ ಜಮೀನು ಪರಭಾರೆ ಮಾಡುವುದನ್ನು ವಿರೋಧಿಸಿ ಬಿಜೆಪಿ ನಾಯಕರು ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿಯ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಶಿವಕುಮಾರ್, ‘ಬಹಳ ಸಂತೋಷ. ಈ ವಿಚಾರದಲ್ಲಿ ಅವರು ಇಷ್ಟು ತಡ ಮಾಡಬಾರದಿತ್ತು. ಇವತ್ತಿಂದ ಮಾಡೋ ಬದಲು ಈ ಮುಂಚೆಯೇ ಶುರು ಮಾಡಬೇಕಿತ್ತು. ಕೂಡಲೇ ಧರಣಿ ಮಾಡಲಿ. ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನೇ ಇದಕ್ಕೆ ಉತ್ತರಿಸುತ್ತೇನೆ. ಬೃಹತ್ ಕೈಗಾರಿಕೆ ಸಚಿವ ಜಾರ್ಜ್ ಅವರ ಜೊತೆಗೇ ಉತ್ತರ ಕೊಡುತ್ತೇನೆ’ ಎಂದು ತಿಳಿಸಿದರು.

      ‘ಇಡೀ ಪ್ರಪಂಚ ಕರ್ನಾಟಕದತ್ತ ತಿರುಗಿ ನೋಡುತ್ತಿದೆ. ಪ್ರಧಾನಮಂತ್ರಿಗಳೇ ಬೆಂಗಳೂರಿಗೆ ಬಂದು ಜಾಗತಿಕ ಬಂಡವಾಳ ಹೂಡಿಕೆದಾರರ ಸಭೆ ನಡೆಸಿದ್ದಾರೆ. ಭಾರತಕ್ಕೆ ಬಂದು ಬಂಡವಾಳ ಹೂಡಿ ಎಂದು ಕರೆಯುತ್ತಿದ್ದಾರೆ. ಇದು ಬಿಜೆಪಿಯವರಿಗೆ ಅರ್ಥ ಆಗದಿರುವುದು ದುರಂತ’ ಎಂದರು.

      ‘ಈ ಹಿಂದೆ ನಡೆದ ಗಣಿ ಲೂಟಿಯಿಂದಾಗಿ ಬಳ್ಳಾರಿಯಲ್ಲಿ ನಿರುದ್ಯೋಗ ಸಮಸ್ಯೆ ಯಾವ ಸ್ವರೂಪದಲ್ಲಿದೆ ಎಂಬುದು ನನಗೆ ಗೊತ್ತಿದೆ. ಅಲ್ಲಿನ ಜನರಿಗೆ ಉದ್ಯೋಗ ಸೃಷ್ಟಿ ಮಾಡುವ ಉದ್ದೇಶ ನಮ್ಮದು. ಉದ್ಯೋಗದ ಜತೆಗೆ ಸರ್ಕಾರಕ್ಕೂ ಆದಾಯ ಬರಬೇಕು. ಹಳ್ಳಿಗಳಿಂದ ಸರ್ಕಾರಕ್ಕೆ ತೆರಿಗೆ ಮೂಲಕ ಹಣ ಬರುವುದಿಲ್ಲ. ಆದರೆ ಕೈಗಾರಿಕೆಗಳ ಮೂಲಕ ಆದಾಯ ಬರುತ್ತದೆ. ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಪೂರಕ ವಾತಾವರಣ, ವಿದ್ಯಾವಂತ ಮಾನವ ಸಂಪನ್ಮೂಲ, ಉತ್ತಮ ಆಡಳಿತ ಇದೆ. ಹಾಗಾಗಿ ಇಲ್ಲಿಗೆ ಬಂದು ಬಂಡವಾಳ ಹೂಡಿ ಎಂದು ಪ್ರಧಾನ ಮಂತ್ರಿಗಳೇ ಸಭೆ ನಡೆಸುತ್ತಿದ್ದಾರೆ. ಅದೇ ರೀತಿ ನಾವು ಕೂಡ ಉದ್ದಿಮೆದಾರರಿಗೆ ಅವಕಾಶ ಕಲ್ಪಿಸಿ, ಜನರಿಗೆ ಅನುಕೂಲ ಮಾಡಿಕೊಡಲು ಹೊರಟಿದ್ದೇವೆ. ಮೈಸೂರಿನಲ್ಲಿ ಇನ್ಫೋಸಿಸ್ ಕಂಪನಿಗೆ ಜಾಗ ನೀಡಿದಾಗಲೂ ಇದೇ ರೀತಿ ವಿರೋಧ ವ್ಯಕ್ತಪಡಿಸಿದ್ದರು. ಈಗ ರಾಜ್ಯದ ಪ್ರಗತಿಗೆ ಇನ್ಫೋಸಿಸ್ ಸಾಕಷ್ಟು ಕೊಡುಗೆ ನೀಡಿದೆ. ಸಾವಿರಾರು ಜನಕ್ಕೆ ಉದ್ಯೋಗ ನೀಡಿದೆ’ ಎಂದು ಶಿವಕುಮಾರ್ ಹೇಳಿದರು.

      ‘ಮೊನ್ನೆ ಸರ್ಕಾರ ಆನ್ ಲೈನ್ ಮೂಲಕ ಮನೆ ನಿವೇಶನ ಕನ್ವರ್ಷನ್ ಮಾಡಲು ತೀರ್ಮಾನಿಸಿದೆ. ಇದರಿಂದ ಡೆವಲಪರ್ಸ್ ಗಳು ಬರಲಿ, ಬಂಡವಾಳ ಹೂಡಿಕೆ ಮಾಡಲಿ. ಈಗಾಗಲೇ ಬೆಂಗಳೂರಿನಲ್ಲಿ ಸಾಕಷ್ಟು ಪ್ಲಾಟ್ ಗಳು ಕಾಲಿ ಬಿದ್ದಿವೆ. ಜನರಿಗೆ ನಷ್ಟವಾಗುತ್ತಿದೆ. ಬ್ಯಾಂಕ್ ಗಳಿಂದ ಸೂಕ್ತ ನೆರವು ಸಿಗುತ್ತಿಲ್ಲ. ನನ್ನ ತಾಲೂಕಿನಲ್ಲಿ ಯಾರಾದರೂ ಉದ್ಯಮ ಶುರು ಮಾಡುತ್ತೇನೆ ಎಂದು ಮುಂದೆ ಬಂದರೆ ನಾನೇ ಮುಂದೆ ನಿಂತು ಜಾಗ ಕೊಡಿಸುತ್ತೇನೆ. ಕೆಲಸ ಇಲ್ಲದೆ ಜನ ವಲಸೆ ಹೋಗುತ್ತಿದ್ದಾರೆ. ಹೀಗಾಗಿ ಹೆಚ್ಚಿನ ಉದ್ಯೋಗ ಸೃಷ್ಟಿ ನಮ್ಮ ಆದ್ಯತೆ’ ಎಂದು ತಿಳಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link