ತುಮಕೂರು:
ನಂಬಿಕೆಯನ್ನೇ ಬಂಡವಾಳವನ್ನಾಗಿ ಮಾಡಿಕೊಳ್ಳುವ ಕೆಲವರು ಹಣಕಾಸು ವಹಿವಾಟು ನಡೆಸುವ ನೆಪದಲ್ಲಿ ಕೋಟಿಗಟ್ಟಲೆ ನುಂಗಿ ನೀರು ಕುಡಿದಿರುವ ಉದಾಹರಣೆಗಳು ಸಾಕಷ್ಟಿವೆ. ಅದೂ ಭಾರತದಂತಹ ದೇಶದಲ್ಲಿ ಇಂತಹ ಪ್ರಕರಣಗಳಿಗೆ ಕೊರತೆಯೇನೂ ಇಲ್ಲ. ಮೊನ್ನೆ ಬೆಂಗಳೂರಿನಲ್ಲಿ ನಡೆದಿರುವ ಭಾರೀ ಮೊತ್ತದ ಹಗರಣ ಈಗ ಎಲ್ಲ ಕಡೆ ಚರ್ಚೆಯ ವಿಷಯವಾಗಿದೆ. ಕೆಲವೊಂದು ದಿನಗಳ ಕಾಲ ಈ ಚರ್ಚಾ ವಿಷಯ ಜನರ ಬಾಯಲ್ಲಿರುತ್ತದೆ. ಕ್ರಮೇಣ ಇದೆಲ್ಲವನ್ನೂ ಮರೆತು ಹೋಗುತ್ತಾರೆ. ಮತ್ತೊಂದು ಸಂಸ್ಥೆ ಹುಟ್ಟಿಕೊಳ್ಳುತ್ತದೆ. ಜನರನ್ನು ನಂಬಿಸುತ್ತದೆ. ನಂಬಿ ಮೋಸ ಹೋದವರು ಬೊಬ್ಬೆ ಹೊಡೆದುಕೊಂಡು ಬೀದಿಗೆ ಬರುತ್ತಾರೆ.
ಹಣಕಾಸು ವಿಷಯಕ್ಕೆ ಬಂದಾಗ ನಮ್ಮ ದೇಶದಲ್ಲಿ ಪಾರದರ್ಶಕತೆ ಎಂಬುದೇ ಇಲ್ಲ. ವಾಸ್ತವ ಹಣಕಾಸು ಪರಿಸ್ಥಿತಿಯನ್ನು ಹೇಳಿಕೊಳ್ಳುವುದೂ ಇಲ್ಲ. ತನ್ನಲ್ಲಿರುವ ಹಣವನ್ನು ಎಲ್ಲಿಯೋ ಹೂಡಿಕೆ ಮಾಡುತ್ತಾರೆ. ಎಷ್ಟೋ ಜನ ಉಂಡೆ ನಾಮ ಹಾಕಿಕೊಂಡಿದ್ದಾರೆ. ವಿಶೇಷವಾಗಿ ಮಹಿಳೆಯರಂತೂ ರೌರವ ನರಕ ಅನುಭವಿಸುತ್ತಿದ್ದಾರೆ. ಮಗಳ ಖರ್ಚಿಗೋ, ಮನೆಯ ಖರ್ಚಿಗೋ ಬೇಕಾಗಬಹುದೆಂದು ಗಂಡನಿಗೂ ಹೇಳದೆ ಕೂಡಿಟ್ಟ ಹಣವೆಲ್ಲ ಯಾರದೋ ಪಾಲಾದಾಗ ಆಕೆಯ ಮನಸ್ಥಿತಿ ಏನಾಗಬೇಡ? ಹಣ ಹೋದರೆ ಹೋಯಿತು. ಆದರೆ ಗಂಡನ ಪ್ರಶ್ನೆಗಳಿಗೆ ಉತ್ತರಿಸಲಾಗದೆ, ತೊಳಲಾಟದ ಸ್ಥಿತಿಯಲ್ಲಿ ಎಷ್ಟೋ ಮಂದಿ ವಿಚ್ಛೇದನದ ಹಂತಕ್ಕೂ ಹೋಗಿರುವ ಉದಾಹರಣೆಗಳಿವೆ.
ಹಣಕಾಸಿನ ವ್ಯವಹಾರ ನಿರ್ವಹಿಸಲು ನಮ್ಮಲ್ಲಿ ಹೇರಳವಾಗಿ ಬ್ಯಾಂಕಿಂಗ್ ವ್ಯವಸ್ಥೆ ಇದೆ.
ಈ ವ್ಯವಸ್ಥೆಯಲ್ಲಿ ಸಿಲುಕಿಕೊಳ್ಳಲು ಹಲವರು ಇಷ್ಟಪಡುವುದಿಲ್ಲ. ಅದು ಏಕೆ ಎಂಬುದು ಅವರಿಗಷ್ಟೇ ಗೊತ್ತು. ಇನ್ನು ಬಡವರು, ಮಧ್ಯಮ ವರ್ಗದವರು ಕೆಲವು ಕನಸುಗಳನ್ನು ಕಾಣುತ್ತಿರುತ್ತಾರೆ. ಅದನ್ನು ಈಡೇರಿಸಿಕೊಳ್ಳಲು ಅವಕಾಶಕ್ಕಾಗಿ ಕಾದಿರುತ್ತಾರೆ. ವಂಚಕ ಕಂಪನಿಗಳಿಗೆ ಬೇಗನೆ ಸಿಲುಕುವವರು ಈ ವರ್ಗದ ಜನರೆ. ಬ್ಯಾಂಕಿಂಗ್‍ಯೇತರ ವಹಿವಾಟುಗಳನ್ನು ನಡೆಸುವಾಗ ಏನು ಎಚ್ಚರಿಕೆ ವಹಿಸಬೇಕು ಎಂಬ ಬಗ್ಗೆ ಸೂಕ್ತ ತಿಳವಳಿಕೆಯೂ ಇಲ್ಲ. ಹೀಗಾಗಿ ಹೆಚ್ಚಿನ ಬಡ್ಡಿ ನೀಡುವ ಆಸೆ ತೋರಿಸುವ, ಹಣ ದ್ವಿಗುಣಗೊಳಿಸುವ ಹಣಕಾಸು ಸಂಸ್ಥೆಗಳತ್ತ ಬೇಗನೆ ವಾಲುತ್ತಾರೆ.
ಅಲ್ಲಿ ಹಣ ಹೂಡಿಕೆ ಮಾಡುತ್ತಾರೆ. ಕಷ್ಟಪಟ್ಟು ದುಡಿಯುವ ಹಣವನ್ನು ಅಲ್ಲಿಗೆ ಹಾಕುತ್ತಾರೆ. ಮನೆಯಲ್ಲಿ ಉಪವಾಸ ಇದ್ದರೂ ಪರವಾಗಿಲ್ಲ, ಮಾಹೆಯಾನ ಕಂತುಗಳನ್ನು ಮಾತ್ರ ತಪ್ಪದೆ ಕಟ್ಟಿಬಿಡುತ್ತಾರೆ. ಮುಂದೆ ಇಡಿಗಂಟು ಸಿಗುತ್ತದಲ್ಲ ಎಂಬ ನಂಬಿಕೆ ಇವರದ್ದು.
ಆದರೆ ಈ ನಂಬಿಕೆ ಎಷ್ಟು ದಿನ ಉಳಿಯಬಲ್ಲದು? ಯಾರನ್ನೋ ತೋರಿಸಿ, ಸಭೆ ಸಮಾರಂಭಗಳ ಪತ್ರಿಕಾ ವರದಿಗಳನ್ನು ಉಲ್ಲೇಖಿಸಿ ಇಂತಹ ಸಂಸ್ಥೆಗಳ ಸದಸ್ಯರಾಗಲು ಪ್ರಚೋದಿಸಬಹುದು.
ಆದರೆ ಮೋಸ ಹೋದಾಗ ಅವರ್ಯಾರೂ ಇವರ ಸಹಾಯಕ್ಕೆ ಬರುವುದಿಲ್ಲ. ಹಣಕಾಸು ವಂಚನೆ ಕಂಪನಿಗಳು, ಸಂಸ್ಥೆಗಳು ನಮ್ಮ ದೇಶದಲ್ಲಿ ಬಹಳಷ್ಟಿವೆ. ಇತ್ತೀಚಿನ ವರ್ಷಗಳ ಉದಾಹರಣೆಯನ್ನೇ ನೋಡುವುದಾದರೆ ಅಂಬಿಡೆಂಟ್, ಅಗ್ರಿಗೋಲ್ಡ್, ವಿಕ್ರಂ ಇನ್‍ವೆಸ್ಟ್‍ಮೆಂಟ್, ಡ್ರೀಮ್ಸ್ ಜಿ.ಕೆ., ಷಣ್ಮುಗಂ ಫೈನಾನ್ಸ್, ಹಿಂದೂಸ್ತಾನ್ ಇನ್ಫ್ರಾಕಾನ್, ಗೃಹ ಕಲ್ಯಾಣ್, ಟಿಜಿಎಸ್ ಮೊದಲಾದ 16ಕ್ಕೂ ಹೆಚ್ಚು ಹಣಕಾಸು ಸಂಸ್ಥೆಗಳು ಜನರ ಹೂಡಿಕೆ ಹಣವನ್ನು ವಂಚಿಸಿರುವ ಬಗ್ಗೆ ಮೊಕದ್ದಮೆಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಅಂದಾಜು ಮೊತ್ತ 5 ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚಿದೆ ಎಂಬುದು ಇಲ್ಲಿ ಗಮನಾರ್ಹ.
ಹೆಚ್ಚಿನ ಆದಾಯ ಬರುತ್ತದೆ, ಕೆಲವೇ ವರ್ಷಗಳಲ್ಲಿ ಹಣ ವಾಪಸ್ ಬರುತ್ತದೆ, ಸುಲಭವಾಗಿ ವ್ಯವಹರಿಸಬಹುದು ಇತ್ಯಾದಿಗಳ ನಂಬಿಕೆಯಲ್ಲಿ ವಂಚಕ ಕಂಪನಿಗಳತ್ತ ಜನ ತಮ್ಮ ಮನಸ್ಸನ್ನು ಹರಿಯಬಿಡುತ್ತಾರೆ. ಆರಂಭದಲ್ಲಿ ಇವ್ಯಾವುವೂ ವಂಚನೆಯ ಕಂಪನಿಗಳೆಂದು ಗೊತ್ತಾಗುವುದಿಲ್ಲ. ಜನರನ್ನು ನಂಬಿಸಲು ಬೇಕಾದ ಎಲ್ಲಾ ಮಾನದಂಡಗಳನ್ನೂ ಇವರು ಅನುಸರಿಸುತ್ತಾರೆ. ಯಾವುದೋ ಒಂದು ಲೈಸೆನ್ಸ್ ಪಡೆಯುತ್ತಾರೆ. ಆದರೆ ಹಣಕಾಸು ವಹಿವಾಟುಗಳಿಗೆ ಬಂದಾಗ ಯಾರಿಂದ ಲೈಸೆನ್ಸ್ ಪಡೆಯಬೇಕು? ಹೇಗೆ ವ್ಯವಹಾರ ನಡೆಸಬೇಕು? ಇದಕ್ಕಿರುವ ಕಾನೂನು ಕಟ್ಟಳೆಗಳೇನು ಎಂಬುದು ಜನರಿಗೂ ತಿಳಿದಿರುವುದಿಲ್ಲ. ಅದನ್ನು ತಿಳಿಸುವ ಪ್ರಯತ್ನವನ್ನು ಈ ಕಂಪನಿಗಳು ಮಾಡುವುದಿಲ್ಲ.
ವಂಚಕ ಕಂಪನಿಗಳನ್ನು ಪೂಂಜಿ ಯೋಜನೆ ಎಂತಲೂ ಕರೆಯುತ್ತಾರೆ. ಬ್ಲೇಡ್ ಕಂಪನಿಗಳು, ನಾಮ ಹಾಕುವ ಸಂಸ್ಥೆಗಳು ಹೀಗೆ ವ್ಯಾಖ್ಯಾನಗಳು ಇವೆ. ಹೂಡಿಕೆದಾರರ ಆಸೆ, ಅಗತ್ಯ ಹಾಗೂ ಮುಗ್ಧತೆಯ ನಂಬಿಕೆಯನ್ನೇ ಬಂಡವಾಳ ಮಾಡಿಕೊಳ್ಳುವ ಇಂತಹ ಸಂಸ್ಥೆಗಳು ನಯವಾದ ಮಾತುಗಳಿಂದ ತಮ್ಮ ತಿಜೋರಿಯನ್ನು ತುಂಬಿಸಿಕೊಳ್ಳುತ್ತಾರೆ.
ಮಾತುಗಾರಿಕೆಗೆ ಕೆಲವು ವ್ಯಕ್ತಿಗಳನ್ನು ನೇಮಿಸಿಕೊಂಡಿರುತ್ತಾರೆ. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಕಂಪನಿ ಅಥವಾ ಸಂಸ್ಥೆಯು ಗ್ರಾಹಕರು ಹೂಡಿದ ಹಣಕ್ಕೆ ದ್ವಿಗುಣ ಮಾಡಿಕೊಡುವ ಅಥವಾ ಅದಕ್ಕಿಂತ ಹೆಚ್ಚಿನ ಲಾಭ ಮಾಡಿಕೊಡುವ ಸಾಧ್ಯತೆಗಳು ತೀರಾ ಕಡಿಮೆ. ಅದು ಸಾಧ್ಯವು ಇಲ್ಲ. ರಿಸರ್ವ್‍ಬ್ಯಾಂಕ್ ಆಫ್ ಇಂಡಿಯಾ ಈಗಾಗಲೇ ಇಂತಿಷ್ಟು ಬಡ್ಡಿ ನೀಡಬೇಕು ಎಂಬ ನಿಯಮಾವಳಿ ಹಾಕಿಕೊಟ್ಟಿದೆ. ಅದರ ಪ್ರಕಾರವೇ ಹಣಕಾಸು ವ್ಯವಹಾರಗಳು ನಡೆಯಬೇಕು.
ಇಲ್ಲಿ ನಾವು ಗಮನಿಸಬೇಕಾದ ಪ್ರಮುಖ ವಿಷಯವೆಂದರೆ ಹಣಕಾಸು ವಹಿವಾಟು ನಡೆಸುವ ವ್ಯಕ್ತಿಗಳು ಯಾರಿಂದ ಲೈಸೆನ್ಸ್ ಪಡೆದಿರುತ್ತಾರೆ ಎಂಬುದು. ಇಡೀ ದೇಶದಲ್ಲಿ ಎಲ್ಲ ಹಣಕಾಸು ವ್ಯವಹಾರಗಳಿಗೂ ಮಾರ್ಗದರ್ಶಿ ಆಗಿರುವುದು ಹಾಗೂ ನಿಯಂತ್ರಣ ಹೊಂದಿರುವುದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾತ್ರ. ದುರಂತವೆಂದರೆ, ಹಣಕಾಸು ವಹಿವಾಟು ನಡೆಸುವವರು ಆರಂಭದಲ್ಲಿ ಪಾರ್ಟನರ್ ಶಿಪ್ ಫರ್ಮ್ ಎಂತಲೋ, ಕಂಪನಿ ಎಂತಲೋ ಏನಾದರೊಂದು ಹೆಸರಿಟ್ಟುಕೊಂಡು ವಹಿವಾಟು ಆರಂಭಿಸುತ್ತಾರೆ. ಕ್ರಮೇಣ ಸಂಪೂರ್ಣವಾಗಿ ಹಣಕಾಸು ವಹಿವಾಟಿಗೆ ಇಳಿಯುತ್ತದೆ.
ಯಾವ ಕಾನೂನಿನ ಕೆಳಗೆ ಇವರನ್ನು ನಿಯಂತ್ರಿಸಬೇಕು ಎಂಬ ಗೊಂದಲ ಇನ್ನೂ ಮುಂದುವರೆದಿದೆ. ಹಣಕಾಸು ವಹಿವಾಟುಗಳಿಗೆ ಸಂಬಂಧಿಸಿದಂತೆ ಚಿಟ್ ಫಂಡ್ ಕಾಯ್ದೆ, ಮಿತಿಮೀರಿದ ಬಡ್ಡಿ ನಿಷೇಧಿಸುವಿಕೆ ಕಾಯ್ದೆ ಸೇರಿದಂತೆ ಭಾರತ ದಂಡ ಸಂಹಿತೆಯ ಕೆಲವು ಕಲಂಗಳು ಆಯಾ ಸಂದರ್ಭಕ್ಕೆ ತಕ್ಕಂತೆ ಬಳಕೆಯಾಗುತ್ತವೆ. ವಂಚನೆ ಮತ್ತು ನಂಬಿಕೆ ದ್ರೋಹದ ಅಡಿಯಲ್ಲಿ ಐಪಿಸಿ ಕಲಂಗಳ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗುತ್ತದೆ. ಹಣ ವಸೂಲಾತಿಗಾಗಿ ಬೇರೊಂದು ಪ್ರಕ್ರಿಯೆಗಳು ಚಾಲನೆಗೊಳ್ಳುತ್ತವೆ. ಇತ್ತೀಚೆಗೆ ಇಂತಹ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ಸಹ ಮಧ್ಯ ಪ್ರವೇಶಿಸಿ ಗ್ರಾಹಕರಿಗೆ ಅನುಕೂಲ ಮಾಡಿಕೊಡುವ ಮಹತ್ವದ ಹೆಜ್ಜೆ ಇರಿಸಿದ್ದನ್ನು ಗಮನಿಸಬಹುದು. ಇವೆಲ್ಲವೂ ಕಾನೂನಾತ್ಮಕವಾಗಿಯೇ ನಡೆಯುತ್ತವೆ.
ಆದರೆ ಮೋಸ ಹೋದ ನಂತರ ಕಾನೂನು ಕ್ರಮ ಜರುಗಿಸಲು ಕೆಲವು ಕಾನೂನು ಕಾಯ್ದೆಗಳು ಬಳಕೆಯಾಗಬಹುದಾದರೂ ಮೋಸ ಹೋಗುವುದಕ್ಕಿಂತ ಮೊದಲೇ ಸೂಕ್ತ ನಿಯಂತ್ರಣ ಹೇರುವ ಮತ್ತು ಕ್ರಮ ಜರುಗಿಸುವ ಶಾಸನಾತ್ಮಕ ವ್ಯವಸ್ಥೆ ನಮ್ಮಲ್ಲಿ ಅಷ್ಟಾಗಿ ಇಲ್ಲ. ಹಣ ವಂಚನೆಯ ಪ್ರಕರಣಗಳಲ್ಲಿ ಇತ್ತೀಚೆಗೆ ಹೆಚ್ಚು ಬಳಕೆಯಾಗುತ್ತಿರುವುದು ಮತ್ತು ಚರ್ಚೆಗೆ ಬರುತ್ತಿರುವುದು 2004 ರ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಗಳ ಹಣ ಹೂಡಿಕೆ ಮಾಡಿರುವ ಹೂಡಿಕೆದಾರರ ಹಿತರಕ್ಷಣಾ ಕಾಯ್ದೆ.
ಈ ಕಾಯ್ದೆಯನ್ನು ಬಳಸಿಯೇ ಬೆಂಗಳೂರಿನ ವಕೀಲರೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ವಂಚಕ ಸಂಸ್ಥೆ ವಿರುದ್ಧ ಹೈಕೋರ್ಟ್ ಮೇಲ್ಚಿಚಾರಣೆಯಲ್ಲಿ ಕಾಲಮಿತಿಯೊಳಗೆ ಕ್ರಮ ಕೈಗೊಳ್ಳುವಂತೆ ಉತ್ತರ ಉಪ ವಿಭಾಗದ ಸಹಾಯಕ ಆಯುಕ್ತರಿಗೆ ನಿರ್ದೇಶನ ನೀಡಬೇಕು. ಸಂಸ್ಥೆಗಳಿಗೆ ಸೇರಿದ ಚರಾಸ್ತಿ ಹಾಗೂ ಚಿರಾಸ್ತಿಗಳನ್ನು ತಕ್ಷಣ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
