ಚಿತ್ರದುರ್ಗ:
ಪಶ್ಚಿಮ ಬಂಗಾಳದ ಕಲ್ಕತ್ತದಲ್ಲಿರುವ ಎನ್.ಆರ್.ಎಸ್.ಮೆಡಿಕಲ್ ಕಾಲೇಜಿನಲ್ಲಿ ವೈದ್ಯರುಗಳ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘ ಚಿತ್ರದುರ್ಗ ಶಾಖೆಯ ವೈದ್ಯರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ವೈದ್ಯರು ನಿರ್ಭಯವಾಗಿ ಕೆಲಸ ಮಾಡುವ ವಾತಾವರಣ ಕಲ್ಪಿಸುವಂತೆ ಅಪರ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ಐ.ಎಂ.ಎ.ಹಾಲ್ನಿಂದ ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ವೈದ್ಯರುಗಳು ಹಲ್ಲೆಕೋರರ ವಿರುದ್ದ ಧಿಕ್ಕಾರಗಳನ್ನು ಕೂಗಿದರು. ಕಳೆದ ಹತ್ತರಂದು ರಾತ್ರ 84 ವರ್ಷದ ವೃದ್ದನನ್ನು ಆಸ್ಪತ್ರೆಗೆ ಚಿಕಿತ್ಸೆಗೆ ಕರೆತಂದಾಗ ಅಲ್ಲಿನ ವೈದ್ಯರು ಕೂಡಲೆ ಸ್ಪಂದಿಸಿ ಚಿಕಿತ್ಸೆ ನೀಡಿದ್ದಾರೆ. ಆದರೂ ಪ್ರಾಣ ಉಳಿಯದ ಕಾರಣ ವೃದ್ದನ ಕಡೆಯ ಸುಮಾರು ಇನ್ನೂರು ಮಂದಿ ಎನ್.ಆರ್.ಎಸ್.ಮೆಡಿಕಲ್ ಕಾಲೇಜಿಗೆ ನುಗ್ಗಿ ಡಾ.ಪರಿಬಾ ಮುಖರ್ಜಿಯನ್ನು ಥಳಿಸಿದ್ದರಿಂದ ನ್ಯೂರೊ ಸರ್ಜಿಗೆ ಒಳಗಾಗಿ ಇನ್ನು ಕೋಮಾದಲ್ಲಿದ್ದಾರೆ. ಜೀವ ಕೊಡುವ ವೈದ್ಯರುಗಳ ಜೀವವನ್ನೇ ತೆಗೆಯಲು ಹೊರಟಿರುವವರ ವಿರುದ್ದ ಕಾನೂನು ರೀತಿಯ ಕ್ರಮ ಕೈಗೊಂಡು ವೈದ್ಯರುಗಳಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
ಕೆಲವರು ಚಿಕಿತ್ಸೆಗೆ ಸ್ಪಂದಿಸುತ್ತಾರೆ. ಇನ್ನು ಕೆಲವರು ಸ್ಪಂದಿಸದಿದ್ದಾಗ ಪ್ರಾಣ ಉಳಿಸುವುದು ಕಷ್ಟವಾಗುತ್ತದೆ. ವೈದ್ಯರು ಕೂಡ ಮನುಷ್ಯರೆ ದೇವರಲ್ಲ ಎನ್ನುವುದನ್ನು ಹಲ್ಲೆ ನಡೆಸುವವರು ಅರ್ಥಮಾಡಿಕೊಳ್ಳಬೇಕು. ಭಯದ ವಾತಾವರಣದಲ್ಲಿ ವೈದ್ಯರುಗಳು ಕೆಲಸ ಮಾಡುವಂತಾಗಿದೆ.
ಇದೇ ರೀತಿಯ ಹಿಂಸಾ ಪ್ರವೃತ್ತಿ ಮುಂದುವರೆದರೆ ವೈದ್ಯಕೀಯ ವೃತ್ತಿಗೆ ಬರಲು ಹಿಂಜರಿಯುವಂತ ಪರಿಸ್ಥಿತಿ ನಿರ್ಮಾಣವಾಗುವುದರಲ್ಲಿ ಅನುಮಾನವಿಲ್ಲ. ಒಬ್ಬ ಪರಿಣಿತ ವೈದ್ಯನಾಗಬೇಕಾದರೆ ಹದಿನೈದರಿಂದ ಇಪ್ಪತ್ತು ವರ್ಷಗಳು ಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರ ಇರುವ ಕಾನೂನನ್ನು ಪರಿಣಾಮಕಾರಿಯನ್ನಾಗಿಸಿ ವೈದ್ಯರುಗಳಿಗೆ ಭದ್ರತೆ ನೀಡಬೇಕೆಂದು ಪ್ರತಿಭಟನಾನಿರತ ವೈದ್ಯರುಗಳು ಸರ್ಕಾರವನ್ನು ಆಗ್ರಹಿಸಿದರು.
ಭಾರತೀಯ ವೈದ್ಯಕೀಯ ಸಂಘ ಚಿತ್ರದುರ್ಗ ಶಾಖೆಯ ಅಧ್ಯಕ್ಷ ಡಾ.ಶಿವಾನಂದಪ್ಪ, ಕಾರ್ಯದರ್ಶಿ ಡಾ.ತಿಮ್ಮಾರೆಡ್ಡಿ, ಡಾ.ಬಸಪ್ಪರೆಡ್ಡಿ, ಬಸವೇಶ್ವರ ವೈದ್ಯಕೀಯ ಕಾಲೇಜಿನ ಡೀನ್ ಡಾ.ಪ್ರಶಾಂತ್, ಡಾ.ರಾಜೇಶ್, ಡಾ.ರಾಜೇಂದ್ರರೆಡ್ಡಿ, ಡಾ.ನಾರಾಯಣಮೂರ್ತಿ, ನರ್ಸಿಂಗ್ ಹಾಗೂ ಪಿ.ಜಿ.ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
