ಚಿತ್ರದುರ್ಗ:
ಬರದ ನಾಡಿನ ಆಶಾಕಿರಣವಾಗಿರುವ ಭದ್ರಾ ಮೇಲ್ದಂಡೆ ಯೋಜನೆಯಡಿ ಕೆರೆಗಳನ್ನು ತುಂಬಿಸುವ ಕಾರ್ಯಕ್ಕೆ ಮೊದಲ ಆದ್ಯತೆ ನೀಡಬೇಕು, ಇದರ ನಂತರವೇ ಹನಿ ನೀರಾವರಿ ಕಾಮಗಾರಿಗಳನ್ನು ಕೈಗೊಳ್ಳುವುದು ಸೂಕ್ತ ಎಂದು ಚಿತ್ರದುರ್ಗ ಸಂಸದ ಎ. ನಾರಾಯಣಸ್ವಾಮಿ ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.
ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ವತಿಯಿಂದ ಕೈಗೊಂಡಿರುವ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಗಳ ವಾಸ್ತವಿಕ ಸ್ಥಿತಿ-ಗತಿ ಪರಿಶೀಲನೆಗಾಗಿ ಗುರುವಾರದಂದು ಭದ್ರಾ ಮೇಲ್ದಂಡೆ ಯೋಜನೆಯ ಲಕ್ಕವಳ್ಳಿಯ ಮುಖ್ಯ ಅಭಿಯಂತರರ ಕಚೇರಿ ಸಭಾಂಗಣದಲ್ಲಿ ನಡೆಸಿದ ಅಧಿಕಾರಿಗಳು, ರೈತ ಪ್ರತಿನಿಧಿಗಳೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭದ್ರಾ ಮೇಲ್ದಂಡೆ ಯೋಜನೆಯಡಿ ತುಂಗಾ ಮತ್ತು ಭದ್ರಾದಿಂದ ಒಟ್ಟು 29.9 ಟಿ.ಎಂ.ಸಿ. ನೀರು ಹಂಚಿಕೆಯಾಗಿದ್ದು, ತುಂಗಾ ನದಿಯಿಂದ 17.4 ಟಿ.ಎಂ.ಸಿ ನೀರನ್ನು ಎರಡು ಹಂತಗಳಲ್ಲಿ ಲಿಫ್ಟ್ ಮಾಡಿ ಭದ್ರಾ ಜಲಾಶಯಕ್ಕೆ ನೀರು ಹರಿಸುವುದು, ಭದ್ರಾ ಜಲಾಶಯದಿಂದ ಒಟ್ಟು 29. 9 ಟಿ.ಎಂ.ಸಿ. ನೀರನ್ನು ಎರಡು ಹಂತಗಳಲ್ಲಿ ಲಿಫ್ಟ್ ಮಾಡಿ ಅಜ್ಜಂಪುರ ಸುರಂಗದವರೆಗೆ ಕೊಂಡೊಯ್ದು, ಇಲ್ಲಿಂದ ಚಿತ್ರದುರ್ಗ ಶಾಖಾ ಕಾಲುವೆ ಹಾಗೂ ತುಮಕೂರು ಶಾಖಾ ಕಾಲುವೆ ಮೂಲಕ ನೀರು ಹರಿಸುವುದು ಯೋಜನೆಯ ಪ್ರಮುಖ ಅಂಶವಾಗಿದೆ ಎಂದರು
ಯೋಜನೆಯಿಂದ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳ 2.25 ಲಕ್ಷ ಹೆಕ್ಟೇರ್ ಕ್ಷೇತ್ರಕ್ಕೆ ಹನಿ ನೀರಾವರಿ ವ್ಯವಸ್ಥೆ ಮೂಲಕ ರೈತರ ಹಿತಕಾಯುವುದು ಇದಲ್ಲದೆ, ನಾಲ್ಕೂ ಜಿಲ್ಲೆಗಳ ಒಟ್ಟು 367 ಕೆರೆಗಳನ್ನು ತುಂಬಿಸುವ ಮಹತ್ವದ ಕಾರ್ಯ ಕೈಗೊಳ್ಳಲಾಗುತ್ತಿದೆ.
ಈ ಯೋಜನೆಯು ಬರ ಪೀಡಿತ ಜಿಲ್ಲೆಗಳ ಜನರ ಪಾಲಿಗೆ ಆಶಾಕಿರಣವಾಗಿದ್ದು, ಜಾತಕ ಪಕ್ಷಿಗಳಂತೆ ನೀರನ್ನು ಎದುರುನೋಡುತ್ತಿರುವ ರೈತರ, ಜನರ ಹಾಗೂ ಜನಪ್ರತಿನಿಧಿಗಳ ಭಾವನೆಗಳನ್ನು ಅಧಿಕಾರಿಗಳು ಅರ್ಥ ಮಾಡಿಕೊಂಡು, ಆದಷ್ಟು ಶೀಘ್ರ ಬರ ಪ್ರದೇಶಗಳಿಗೆ ನೀರು ಹರಿಸುವ ಕಾರ್ಯ ಮಾಡಬೇಕು ಎಂದು ಸೂಚಿಸಿದರು
ವಾಣಿ ವಿಲಾಸ ಸಾಗರಕ್ಕೆ ನೀರು :
ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ನಾರಾಯಣಸ್ವಾಮಿ ಅವರು, ಅಜ್ಜಂಪುರ ಬಳಿಯ ರೈಲ್ವೆ ಕ್ರಾಸ್ ಕಾಮಗಾರಿಯ ವಿಳಂಬದಿಂದಾಗಿ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ಕೈಗೊಳ್ಳಲು ಅಡ್ಡಿಯಾಗಿದೆ. ಆದಷ್ಟು ಶೀಘ್ರ ಈ ಕಾಮಗಾರಿ ಪೂರ್ಣಗೊಳಿಸಿ ಎರಡು ತಿಂಗಳ ಒಳಗಾಗಿ ವಾಣಿವಿಲಾಸ ಸಾಗರ ಜಲಾಶಯಕ್ಕೆ ನೀರು ಹರಿಸುವುದು ಖಚಿತ ಎಂದರು
ಸದ್ಯ ಯೋಜನೆಯಡಿ 367 ಕೆರೆಗಳನ್ನು ಗುರುತ್ವಬಲದ ಮೂಲಕವೆ ಪೈಪ್ಲೈನ್ ಮಾಡಿ ತುಂಬಿಸಲಾಗುತ್ತಿದೆ. ಗುರುತ್ವಬಲದ ಮೂಲಕ ತುಂಬಿಸಲು ಸಾಧ್ಯವಾಗದ ಕೆರೆಗಳ ಪಟ್ಟಿಯನ್ನು ಮಾಡಿ, ಈ ಕೆರೆಗಳನ್ನು ತುಂಬಿಸಲು ಇರುವ ಮಾರ್ಗೋಪಾಯಗಳು, ಇಲ್ಲಿನ ರೈತರ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆಗಳ ವಿವರವಾದ ವರದಿಯನ್ನು ಸಿದ್ಧಪಡಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಸದ್ಯ ಯೋಜನೆಗೆ 29.9 ಟಿ.ಎಂ.ಸಿ. ನೀರು ಹಂಚಿಕೆಯಾಗಿದ್ದರೂ, ವಿಸ್ತøತವಾದ ವರದಿಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದಲ್ಲಿ ಇನ್ನೂ ಹೆಚ್ಚಿನ ನೀರು ಹಂಚಿಕೆಗೆ ವರದಿ ಸಹಕಾರಿಯಾಗಲಿದೆ. ಯೋಜನೆಯಡಿ ಸಂಪೂರ್ಣವಾಗಿ ಹನಿ ನೀರಾವರಿ ಕೈಗೊಳ್ಳಲಾಗುತ್ತಿರುವುದರಿಂದ ಯೋಜನೆಗೆ ಕೇಂದ್ರ ಸರ್ಕಾರದಿಂದ ಆರ್ಥಿಕ ನೆರವು ದೊರೆಯಲು ಅವಕಾಶವಿದ್ದು, ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು, ಜಲಸಂಪನ್ಮೂಲ ಸಚಿವರು ಹಾಗೂ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪ್ರಾಮಾಣಿಕ ಯತ್ನ ಮಾಡಲಾಗುವುದು ಎಂದರು.
ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಇಂಜಿನಿಯರ್ ಶಿವಕುಮಾರ್, ಅಧೀಕ್ಷಕ ಅಭಿಯಂತರ ವೇಣುಗೋಪಾಲ್, ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಸೇರಿದಂತೆ ವಿವಿಧ ಅಧಿಕಾರಿಗಳು, ಪಾಮಯ್ಯ ಸೇರಿದಂತೆ ವಿವಿಧ ರೈತ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
