ತುಮಕೂರು
ನಗರದ ವಿದ್ಯಾನಗರ ಇಂಡಸ್ಟ್ರಿಯಲ್ ಏರಿಯಾದ ಕೈಜಾನ್ ಹೆಲ್ತ್‍ಕೇರ್ ಸೋಪ್ ಫ್ಯಾಕ್ಟರಿಯಲ್ಲಿ ಡೈಸೆಟ್‍ಗಳನ್ನು ಕಳವು ಮಾಡಿದ್ದ ಆರೋಪಿ ಶಿವಾಜಿ ಎಂಬಾತನನ್ನು ಜಯನಗರ ಪೊಲೀಸ್ ಠಾಣೆಯ ಪೋಲೀಸರು ಬಂಧಿಸಿದ್ದಾರೆ.
ಕೈಜಾನ್ ಹೆಲ್ತ್ ಕೇರ್ ಸೋಪ್ ಫ್ಯಾಕ್ಟರಿಯಲ್ಲಿ ಜೂನ್ 2ರಂದು ಹಗಲು ವೇಳೆಯೇ ಕಿಟಕಿ ಮುರಿದು ಕಂಬಿ ಕಿತ್ತು ಒಳ ಪ್ರವೇಶಿಸಿ ಸೋಪ್ ತಯಾರಿಸಲು ಬಳಸುವ ಡೈ ಸೆಟ್‍ಗಳನ್ನು ಕಳವು ಮಾಡಲಾಗಿತ್ತು. ಈ ಸಂಬಂಧ ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲು ಡಿವೈಎಸ್‍ಪಿ ತಿಪ್ಪೇಸ್ವಾಮಿ ಮಾರ್ಗದರ್ಶನದಲ್ಲಿ ತಿಲಕ್‍ಪಾರ್ಕ್ ವೃತ್ತ ನಿರೀಕ್ಷಕರಾದ ರಾಧಾಕೃಷ್ಣ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದ್ದು, ಜೂ.14ರಂದು ಆರೋಪಿಯನ್ನು ಬಂಧಿಸಲಾಗಿತ್ತು.
ಬಂಧಿತ ಆರೋಪಿಯನ್ನು ಶಿವಾಜಿ ಬಿನ್ ಲೇ.ನರಸಿಂಹಮೂರ್ತಿ ದಿಬ್ಬೂರು ಲೇಔಟ್ ನಿವಾಸಿ ಎಂದು ಗುರುತಿಸಲಾಗಿದ್ದು, ಈತನಿಂದ 2 ಲಕ್ಷ 75 ಸಾವಿರದ ಬೆಲೆ ಬಾಳುವ ಸೋಪ್ ಫ್ಯಾಕ್ಟರಿಯ ಡೈ ಸೆಟ್‍ಗಳನ್ನು ದಸ್ತಗಿರಿ ಮಾಡಲಾಗಿದೆ. ಈ ಪ್ರಕರಣ ಬೇಧಿಸುವಲ್ಲಿ ಜಯನಗರ ಠಾಣೆಯ ಪಿಎಸ್‍ಐ ನವೀನ್ ಎಚ್.ಎಸ್ ಹಾಗೂ ಅಪರಾಧ ವಿಭಾಗದವರು ಶ್ರಮಿಸಿದ್ದು, ಈ ಅಧಿಕಾರಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಭಿನಂದಿಸಿದ್ದಾರೆ.