ಹರಪನಹಳ್ಳಿ:
ಪಟ್ಟಣದ ಗೋಕರ್ಣೇಶ್ವರ ದೇವಸ್ಥಾನ ಹಾಗೂ ತಾಲ್ಲೂಕಿನ ಉಚ್ಚಂಗಿದುರ್ಗ, ಕೂಲಹಳ್ಳಿ ದೇವಸ್ಥಾನಗಳ ಅಭಿವೃದ್ಧಿ ಮತ್ತು ಭಕ್ತರ ಅನುಕೂಲಕ್ಕಾಗಿ ನೂತನ ಕಾರ್ಯ ನಿರ್ವಹಣಾಧಿಕಾರಿಯ ಕಚೇರಿ ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಜರಾಯಿ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ತಿಳಿಸಿದರು.
ಪಟ್ಟಣದ ಐತಿಹಾಸಿಕ ಗೋಕರ್ಣೇಶ್ವರ ಹಾಗೂ ಕೋಟೆ ಆಂಜನೇಯ ದೇವಸ್ಥಾನಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು. ಗೋಕರ್ಣೇಶ್ವರ ದೇವಸ್ಥಾನದ ಮೇಲ್ಚಾವಣೆ ನಿರ್ಮಾಣ ಹಾಗೂ ಅಭಿವೃದ್ಧಿಗೆ $20 ಲಕ್ಷ ಅನುದಾನ ನೀಡಲಾಗಿದೆ ಎಂದರು.
ಕೋಟೆ ಆಂಜನೇಯ ಬಳಿ ಉದ್ಯಾನವನ, ಭೋಜನಾಲಯ, ರಸ್ತೆ, ಚರಂಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ದೇವಸ್ಥಾನ ಸಮಿತಿ ಬೇಡಿಕೆ ಇಟ್ಟಿದೆ. ಈ ಬಗ್ಗೆ ಪರಿಶೀಲಿಸಿ ಕ್ರಿಯಾಯೋಜನೆ ತಯಾರಿಸಲು ಅಧಿಕಾರಿಗಳಿಗೆ ತಿಳಿಸಿದ್ದೇನೆ. ನಂತರ ಭಕ್ತರ ಬೇಡಿಕೆಯಂತೆ ದೇವಸ್ಥಾನ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಭಟ್, ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಶಿವಯೋಗಿ, ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಬಿ.ಪರಶುರಾಮಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ಮುಖಂಡರಾದ ಎಂ.ರಾಜಶೇಖರ, ಎಚ್.ಕೆ.ಹಾಲೇಶ್, ಪೂಜಾರ ಶಶಿಧರ, ಜಾತಯ್ಯ, ಲಕ್ಕಳ್ಳಿ ಹನುಮಂತಪ್ಪ, ಸಿ.ಮರೆಪ್ಪ, ಆಲದಹಳ್ಳಿ ಷಣ್ಮುಖಪ್ಪ, ಮ್ಯಾಕಿ ದುರುಗಪ್ಪ, ಪಟ್ನಾಮದ ನಾಗರಾಜ, ಬಾಣದ ಅಂಜಿನಪ್ಪ, ಪೂಜಾರ ಮಂಜುನಾಥ, ಪೂಜಾರ ರಮೇಶ, ಪೂಜಾರ, ಮಾರುತಿ ಪ್ರಬಾರಿ ಎಸಿ ಮಹೇಶ್, ತಹಶೀಲ್ದಾರ ಡಾ.ನಾಗವೇಣಿ, ಮುಜರಾಯಿ ಇಲಾಖೆಯ ರಮೇಶ್ ಇದ್ದರು.