ದಾವಣಗೆರೆ:
ನುಡಿದಂತೆ ನಡೆದರೆ, ಮಾತು ಕೃತಿಯಾದರೆ ಮಾತ್ರ ಪರಿಸರ ಉಳಿಸಲು ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಪ್ರತಿಪಾದಿಸಿದರು.
ಇಲ್ಲಿನ ನಿಟುವಳ್ಳಿಯ ಆರ್.ವಿ.ಕೆ. ಶಾಲಾ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಾಲಿನ್ಯ ನಿಯಂತ್ರಣ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಪರಿಸರ ಸಂರಕ್ಷಣಾ ವೇದಿಕೆ, ವಿಜ್ಞಾನ ಪರಿಷತ್ತು, ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆದ ಪರಿಸರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪರಿಸರಕ್ಕೆ ಸಂಬಂಧಿಸಿದ ಸಭೆ ಸಮಾರಂಭಗಳಲ್ಲಿ ಬಹಳಷ್ಟು ಉತ್ತಮ ಭಾಷಣ ಮಾಡುತ್ತಾರೆ. ಮಾತನಾಡುತ್ತಾರೆ. ಆದರೆ, ಭಾಷಣಕಾರರು ಹೋಗಿ ಪರಿಸರ ಉಳಿಸುವ ಯಾವುದೇ ಕೆಲಸ ಮಾಡುವುದಿಲ್ಲ. ಹೀಗಾಗಿ ಒಂದು ಸಭೆ, ಒಂದು ಭಾಷಣದಿಂದ ಪರಿಸರ ಉಳಿಸಲು ಸಾಧ್ಯವಿಲ್ಲ. ಆದರೆ, ಮಾತು ಕೃತಿಯಾದರೆ ಮಾತ್ರ ಪ್ರಕೃತಿ, ಪರಿಸರವನ್ನು ಉಳಿಸಬಹುದಾಗಿದೆ ಎಂದರು.
ಪಠ್ಯಗಳಲ್ಲಿ ಪರಿಸರಕ್ಕೆ ಸಂಬಂಧಿಸದ ಪಾಠಗಳನ್ನು ಅಳವಡಿಸುವ ಮೂಲಕ ಶಿಕ್ಷಣದ ಮುಖಾಂತರ ಪರಿಸರ ಜ್ಞಾನವನ್ನು ಕಲಿಸಿಕೊಡಬೇಕೆಂಬ ಉದ್ದೇಶವನ್ನು ಸರ್ಕಾರ ಹೊಂದಿದೆ. ವಿದ್ಯಾರ್ಥಿಗಳನ್ನು ಒಳಗೊಳಿಸುವ ಮೂಲಕ ದೇಶ, ಭಾಷೆ, ಪರಿಸರದ ಜ್ಞಾನವನ್ನು ಪಸರಿಸುವ ಕೆಲಸ ಮಾಡಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಪರಿಸರ ಅಧಿಕಾರಿ ಕೆ.ಬಿ.ಕೊಟ್ರೇಶ್, ಕೈಗಾರಿಕೆಗಳು ಹಾಗೂ ವಾಹನಗಳು ಉಗಳುವ ಹೊಗೆಯಿಂದ, ನಗರ ಪ್ರದೇಶಗಳಲ್ಲಿ ಕಸ ಸುಡುವುದರಿಂದ ವಾಯು ಮಾಲಿನ್ಯ ಉಂಟಾಗುತ್ತಿದೆ ಎಂದರು.
ಅಭಿವೃದ್ಧಿಯ ನೆಪದಲ್ಲಿ ಹಾಗೂ ಸ್ಮಾರ್ಟ್ಸಿಟಿ ಹೆಸರಲ್ಲಿ ಮರ ಕಡಿದು, ದೊಡ್ಡ, ದೊಡ್ಡ ಕಟ್ಟಡಗಳನ್ನು ನಿರ್ಮಿಸುವ ಮೂಲಕ ಕಾಂಕ್ರೀಟ್ ಕಾಡು ನಿರ್ಮಿಸಲಾಗುತ್ತಿದೆ.
ಆದ್ದರಿಂದ ಬಡಾವಣೆಗಳಲ್ಲಿ ಇದ್ದ ಒಂದೆರಡು ಮರಗಳು ಸಹ ಉಳಿಯುತ್ತಿಲ್ಲ. ಎಲ್ಲ ಕಡೆ ಗಿಡ ಬೆಳೆಸಬೇಕು. ಹಸಿರುಮನೆಗಳನ್ನು ನಿರ್ಮಿಸುವ ಮೂಲಕ ಪರಿಸರದ ಸಂರಕ್ಷಣೆಗೆ ಮುಂದಾಗಬೇಕೆಂದು ಕಿವಿಮಾತು ಹೇಳಿದರು.
ಸಾರ್ವಜನಿಕರು ಆದಷ್ಟು ಒಂದೇ ವಾಹನದಲ್ಲಿ ಪ್ರಯಾಣಿಸಬೇಕು. ಸಮರ್ಪಕವಾಗಿ ತ್ಯಾಜ್ಯ ನಿರ್ವಹಣೆ ಮಾಡಬೇಕು. ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಮೂಲಕ ಸಸಿಯುಕ್ತ, ಕಸ-ವಿಷಮುಕ್ತ ಸಮಾಜ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದರು.
ಡಯಟ್ ಉಪ ನಿರ್ದೇಶಕ ಎಚ್.ಕೆ.ಲಿಂಗರಾಜು, ವಿಜ್ಞಾನ, ತಂತ್ರಜ್ಞಾನದಲ್ಲಿ ದೇಶ ಸಾಕಷ್ಟು ಮುಂದುವರಿದಿದ್ದರೂ ಸಹ ನಮ್ಮಲ್ಲಿರುವ ಸಂಕುಚಿತ ಮನೋಭಾವದಿಂದ ಭೂಮಿಯನ್ನು ಕಸದ ತೊಟ್ಟಿಯನ್ನಾಗಿ ಮಾಡಿದ್ದೇವೆ. ಕೆನಡಾದಂಥ ದೇಶದಲ್ಲಿ ಒಬ್ಬ ಮನುಷ್ಯನಿಗೆ 8,861 ಸರಾಸರಿ ಮರಗಳಿದ್ದರೆ, ಭಾರತದಲ್ಲಿ ಕೇವಲ 28 ಮರಗಳಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಲ್ಲೇಶಪ್ಪ, ಕುಮಾರ್, ಕೃಷ್ಣಪ್ಪ ಅವರಿಗೆ ಪರಿಸರ ಸ್ನೇಹಿ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಚರ್ಚಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.
ಆರ್ವಿಕೆ ಶಾಲೆ ಕಾರ್ಯದರ್ಶಿ ಜಯಣ್ಣ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನ ಪರಿಷತ್ತಿನ ಅಂಗಡಿ ಸಂಗಮೇಶ, ಜೆ.ಎಚ್. ಪಟೇಲ್ ಕಾಲೇಜಿನ ಕಾರ್ಯದರ್ಶಿ ದೊಗ್ಗಳ್ಳಿ ಗೌಡ್ರು ಪುಟ್ಟರಾಜು, ಎ.ಎಚ್. ವೀವೇಕಾನಂದ ಸ್ವಾಮಿ, ಶಾಂತಯ್ಯ ಪರಡಿಮಠ ಉಪಸ್ಥಿತರಿದ್ದರು.
ವಿಜ್ಞಾನ ಪರಿಷತ್ತಿನ ಕಾರ್ಯದರ್ಶಿ ಎಂ. ಗುರುಸಿದ್ಧಸ್ವಾಮಿ ಸ್ವಾಗತಿಸಿದರು. ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ಗಿರೀಶ್ ಎಸ್. ದೇವರಮನಿ ವಂದಿಸಿದರು. ಶಿಕ್ಷಣ ಸಂಯೋಜಕ ಶಿವರಾಜ ಗುರೂಜಿ ಕಾರ್ಯಕ್ರಮ ನಿರೂಪಿಸಿದರು.