ಗುರುಪುರ:
ಹಿಂದಿನ ಸಾರಿ ಸುರಿದ ಭಾರಿ ಮಳೆಗೆ ನಾಶವಾಗಿದ್ದ ಗುರುಪುರ ಸೇತುವೆ ಫಲ್ಗುಣಿ ನದಿಗೆ ಅಡ್ಡಲಾಗಿ ಗುರುಪುರದಲ್ಲಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು ಅತಿ ಶೀಘ್ರ ಮುಕ್ತಾಯಗೊಳ್ಳಲಿರುವ ಕಾಮಗಾರಿ ಇದೆಂಬ ಹೆಗ್ಗಳಿಕೆ ಪಾತ್ರವಾಗಲಿದೆ ಎಂದು ದಕ್ಷಿಣ ಕನ್ನಡ ಲೋಕಸಭಾ ಸಂಸದ ನಳಿನ್ ಕುಮಾರ್ ಕಟೀಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.ನಿನ್ನೆಗುರುಪುರದಲ್ಲಿ ಸೇತುವೆ ಕಾಮಗಾರಿಯ ಪ್ರಗತಿ ವೀಕ್ಷಿಸಿ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಸೇತುವೆ ಕಾಮಗಾರಿಯನ್ನು 2019ರ ಫೆಬ್ರವರಿ 21ಕ್ಕೆ ಆರಂಭ ಮಾಡಲಾಗಿತ್ತು ಅದನ್ನು 2021ರ ಫೆಬ್ರವರಿ 20ರಂದು ಪೂರ್ಣಗೊಳಿಸುವ ಕರಾರಿನ ಮೇರೆಗೆ ಕಾವೂರಿನ ಮೊಗರೋಡಿ ಕನ್‌ಸ್ಟ್ರಕ್ಷನ್ ಕಂಪೆನಿಗೆ ಗುತ್ತಿಗೆ ನೀಡಲಾಗಿತ್ತು. ಟೆಂಡರು ಪಡೆದ ತತ್‌ಕ್ಷಣ ಕಾಮಗಾರಿ ಆರಂಭಿಸಿರುವ ಕಂಪೆನಿ, ಬೇಸಗೆಯಲ್ಲಿ ಕ್ಷಿಪ್ರಗತಿಯಲ್ಲಿ ಪಿಲ್ಲರ್ ಹಾಕುವ ಕೆಲಸ ಮುಗಿಸಿದೆ. ಮಳೆಗಾಲದಲ್ಲಿ ಗರ್ಡರ್ ಮತ್ತು ಸ್ಲಾ ್ಯಬ್ ಅಳವಡಿಕೆ ನಡೆಯಲಿದೆ. ನಿಗದಿತ ಅವಧಿಯ ಒಳಗಡೆ ಲೋಕಾರ್ಪಣೆಗೊಳ್ಳಲಿದೆ ಎಂದರು.
39.420 ಕೋಟಿ ರೂ. ವೆಚ್ಚದ ಹೊಸ ಸೇತುವೆ ಯೋಜನೆಯಲ್ಲಿ 25 ಮೀಟರ್ ಉದ್ದದ ಏಳು ಅಂಕಣಗಳಿವೆ. ಅಗಲ 16 ಮೀ. ಅಗಲದ ಸೇತುವೆಯು 11 ಮೀ. ಅಗಲ ರಸ್ತೆ, 2.50 ಮೀ. ಅಗಲದ ಕಾಲುದಾರಿ (ಎರಡೂ ಕಡೆ) ಇತ್ಯಾದಿ ಹೊಂದಿರುತ್ತದೆ. ಎರಡೂ ಕಡೆ 500 ಮೀ. ಉದ್ದಕೆ ಕೂಡುರಸ್ತೆ ನಿರ್ಮಾಣಗೊಳ್ಳಲಿದೆ ಎಂದರು.
ಮಂಗಳೂರು ಬೈಪಾಸ್ ರಸ್ತೆಗೆ ಸರಕಾರ ಒಪ್ಪಿಗೆ ನೀಡಿದೆ. ಈ ರಸ್ತೆಮೂಲ್ಕಿ – ಕಿನ್ನಿಗೋಳಿ-ಕಟೀಲು-ಬಜಪೆ – ಗುರುಪುರ ಕೈಕಂಬ -ಪೊಳಲಿ – ಬಿ.ಸಿ.ರೋಡ್- ಮೆಲ್ಕಾರು -ಮುಡಿಪು-ಕೊಣಾಜೆ ಮೂಲಕ ತಲಪಾಡಿ ಸಂಪರ್ಕಿಸಲಿದೆ. ‘ಭಾರತ್ ಮಾಲ’ ಯೋಜನೆಯಡಿ ಬೈಪಾಸ್ ನಿರ್ಮಾಣಗೊಳ್ಳಲಿದೆ. ಪ್ರಸ್ತುತ ಗುರುಪುರ ಸೇತುವೆ ಗುರುಪುರಕ್ಕೆ ಬೈಪಾಸ್ ರಸ್ತೆಯಾಗಲಿದ್ದು, ಮಂಗಳೂರು ಕುಲಶೇಖರ ರಾಷ್ಟ್ರೀಯ ಹೆದ್ದಾರಿ ಅಡ್ಡೂರು ಮುಖಾಂತರ ಸಂಪರ್ಕ ಕಲ್ಪಿಸಲಿದೆ. ಅಡ್ಡೂರಿನಲ್ಲಿ ಫ್ಲೈ ಓವರ್ ನಿರ್ಮಾಣಗೊಳ್ಳಲಿದ್ದು, ಪ್ರಮುಖ ಜಂಕ್ಷನ್ ಆಗಲಿದೆ ಎಂದರು.