ರಾಮನಗರ:
ಮದುವೆಯ ಆರತಕ್ಷತೆ ಮುಗಿಸಿಕೊಂಡು ಹಿಂತಿರುಗುವಾಗ ಮರಕ್ಕೆ ಇಂಡಿಕಾ ಕಾರು ಡಿಕ್ಕಿ ಹೊಡೆದ ಪರಿಣಾಮ, ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮತ್ತೋರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಮೃತರು ಕಾಮಸಾಗರದ ಕುಮಾರ್ (28), ಶ್ರೀಪತಿಹಳ್ಳಿಯ ನರಸಮ್ಮ (36), ತಾಳೆಕೆರೆಯ ಜಯಲಕ್ಷ್ಮಮ್ಮ(46) ಎಂದು ಗುರ್ತಿಸಲಾಗಿದೆ. ಕರೇನಹಳ್ಳಿಯಲ್ಲಿ ಮದುವೆಯ ಆರತಕ್ಷತೆ ಮುಗಿಸಿಕೊಂಡು ತಾಳೇಕೆರೆಗೆ ಹೋಗುವಾಗ ದುರಂತ ಸಂಭವಿಸಿದೆ. ಮಾಗಡಿ ಕುಣಿಗಲ್ ರಸ್ತೆಯ ಹುಚ್ಚನುಮೇಗೌಡನ ಪಾಳ್ಯದ ಬಳಿ ಮರಕ್ಕೆ ಇಂಡಿಕಾ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮತ್ತೋರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಮತ್ತಿಬ್ಬರಾದ ಪ್ರಶಾಂತ, ಗಂಗಲಕ್ಷ್ಮಮ್ಮ ಗಂಭೀರವಾಗಿ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಮೃತ ದೇಹಗಳನ್ನಿಡಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ನೀಡಲಾಗುತ್ತದೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದರು. ಮಾಗಡಿ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.