ದಾವಣಗೆರೆ:
ಶಾಂತಿ ಮತ್ತು ನೆಮ್ಮದಿಯ ಆರೋಗ್ಯಕರ ಜೀವನಕ್ಕೆ ಯೋಗ ಸಹಕಾರಿಯಾಗಿದೆ ಎಂದು ಶ್ರೀಬಸವಪ್ರಭು ಸ್ವಾಮೀಜಿ ಪ್ರತಿಪಾದಿಸಿದರು.
ನಗರದ ಶಿವಯೋಗಾಶ್ರಮದಲ್ಲಿ ಭಾನುವಾರ ಜಯದೇವ ಯೋಗ ಕೇಂದ್ರ ವತಿಯಿಂದ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಉಚಿತ ಯೋಗ ತರಬೇತಿ ಶಿಬಿರ ಹಾಗೂ ಯೋಗ ಸಪ್ತಾಹ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ವ್ಯಕ್ತಿಯು ಪ್ರತಿನಿತ್ಯ ಯೋಗಾಸನ ಮಾಡುವುದರಿಂದ, ಮಾನಸಿಕ ಒತ್ತಡದಿಂದ ಹೊರುವುದರ ಜೊತೆಗೆ ಶಾಂತಿಹಾಗೂ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ಭೋಗ ಜೀವನದಿಂದ ಆಲಸ್ಯ ಹೆಚ್ಚಾಗುವುದರ ಜೊತೆಗೆ ಎಲ್ಲವೂ ನನಗೆ ಬೇಕೆಂಬ ಸ್ವಾರ್ಥ ಮನುಷ್ಯನಲ್ಲಿ ಮನೆ ಮಾಡಲಿದೆ. ಅಲ್ಲದೇ, ಭೋಗದ ಜೀವನದಿಂದ ದೇಹವು ರೋಗಗಳ ಗುಡಾಣವಾಗಿ ಮಾರ್ಪಡಲಿದೆ. ಈ ಎಲ್ಲ ಸಮಸ್ಯೆಗಳಿಂದ ಹೊರ ಬಂದು ಸಮಾಜಮುಖಿ ಚಿಂತನೆಯಲ್ಲಿ ತೊಡಗಲು ಪ್ರತಿಯೊಬ್ಬರೂ ಜೀವನದಲ್ಲಿ ಯೋಗ ಅಳವಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಯೋಗ ನನಗೆ ಬೇಕು, ನಿನಗೆ ಬೇಡ ಎಂದೇನೂ ಇಲ್ಲ. ಆರೋಗ್ಯಕರ ಜೀವನಕ್ಕಾಗಿ ಪ್ರತಿಯೊಬ್ಬರೂ ಯೋಗಾಸನ ಮಾಡಬೇಕು. ಇದರಿಂದ ನಾವು ರೋಗಮುಕ್ತರಾಗಿ ಬದುಕಲು ಸಾಧ್ಯವಾಗುತ್ತದೆ. ಜೀವನವಿಡಿ ಸ್ಪೂರ್ತಿ, ಉತ್ಸಾಹ, ಚೇತೋಲಹರಿ ಜೀವನ ಸಾಧ್ಯವಾಗುತ್ತದೆ. ಅತಿಯಾದ ಆಹಾರ ಸೇವನೆಯೂ ಕೂಡಾ ರೋಗಕ್ಕೆ ಆಹ್ವಾನಿಸಿದಂತೆ. ಹಿತ-ಮಿತ ಆಹಾರ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಯೋಗಾಸನ ಮಾಡುವುದರಿಂದ, ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದರು.
ಇಂದಿನ ತಂತ್ರಜ್ಞಾನದ ದಿನಗಳಲ್ಲಿ ಯೋಗದ ಹೆಸರಿನಲ್ಲಿ ವ್ಯಾಪಾರಿಕರಣ ನಡೆದಿದೆ. ಇಂತಹ ಸಂದರ್ಭದಲ್ಲಿ ಜಯದೇವ ಯೋಗ ಕೇಂದ್ರದಿಂದ ಒಂದು ವಾರಗಳ ಕಾಲ ಉಚಿತ ಯೋಗಾಸನ ಶಿಬಿರ ಏರ್ಪಡಿಸಲಾಗಿದೆ. ಹೀಗಾಗಿ ಮಕ್ಕಳು, ಯುವಕರು, ಮಧ್ಯ ವಸ್ಕರು, ಹಿರಿಯರು ಈ ಶಿಬಿರದ ಸದುಪಯೋಗ ಪಡೆದುಕೊಂಡು ಯೋಗಾಭ್ಯಾಸ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಹಣದ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಮುಖ್ಯ. ಆರೋಗ್ಯ ಸಂಪತ್ತಿಗಾಗಿ ಯೋಗಾಸನ ಮಾಡುವುದು ಅಗತ್ಯವಾಗಿದೆ. ದುರಾಲೋಚನೆ ದೂರವಾಗಿ, ಉತ್ತಮ ಯೋಚನೆಗಳೊಂದಿಗೆ ಸ್ವಾಸ್ಥ್ಯ ಸಮಾಜ ನಿರ್ಮಿಸಬಹುದು ಎಂದರು.ಯೋಗಬಂಧು ವೀರಭದ್ರಪ್ಪ ಮಾತನಾಡಿ, ದಾವಣಗೆರೆಗೆ ಯೋಗ ಬರಲು ಮಲ್ಲಾಡಿಹಳ್ಳಿಯ ರಾಘವೇಂದ್ರ ಸ್ವಾಮೀಜಿ ಕಾರಣ. ರೋಗದಿಂದ ದೂರ ಇರಲು ಪ್ರತಿನಿತ್ಯ ಯೋಗಾಸನ ಮಾಡಬೇಕು. ಯೋಗಾಸನ ಕಲಿಯುವುದರ ಜೊತೆಗೆ ಬೇರೆಯವರಿಗೆ ಕಲಿಸಬೇಕು ಎಂದರು.
ಶಿಬಿರಾರ್ಥಿ ಸುಧಾ ಕಿರುವಾಡಿ ಮಾತನಾಡಿ, ಕೈ, ಕಾಲು ನೋವಿಗಾಗಿ ಸಾಕಷ್ಟು ವೈದ್ಯರಲ್ಲಿ ಚಿಕಿತ್ಸೆ ಪಡೆದಿದ್ದೆ. ಆದರೂ ಕಡಿಮೆ ಯಾಗಿರಲಿಲ್ಲ. ಕೊನೆಗೆ ವೈದ್ಯರು ನಿತ್ಯ ಯೋಗಾಸನ ಮಾಡಿ ಎಂಬ ಸಲಹೆ ನೀಡಿದ ಹಿನ್ನೆಲೆಯಲ್ಲಿ ಇಲ್ಲಿ ಬಂದು ಯೋಗಾಸನ ಕಲಿತಿದ್ದು, ಈಗ ಕೈ, ಕಾಲು ನೋವು ಮಾಯವಾಗಿದೆ ಎಂದು ಹೇಳಿದರು.
ಮತ್ತೊರ್ವ ಶಿಬಿರಾರ್ಥಿ ಸಂಜಯ್, ಬೆಳಿಗ್ಗೆ ಎದ್ದು ಯೋಗಾಸನ ಮಾಡುವುದು ಎಂದರೆ ನನಗೆ ಒಂದು ರೀತಿಯಲ್ಲಿ ಅಲಸ್ಯ ಇತ್ತು. ಪ್ರತಿನಿತ್ಯ ಯೋಗದ ಬಗ್ಗೆ ಸಾಕಷ್ಟು ಪ್ರಚಾರ ಆಗುತ್ತಿದ್ದ ಪರಿಣಾಮ ನೋಡೋಣ ಎಂದು ಯೋಗಾಸನ ಶಿಬಿರದಲ್ಲಿ ಪಾಲ್ಗೊಂಡೆ, ನನ್ನಲ್ಲಿಗ ಪರಿವರ್ತನೆ ಕಂಡಿದೆ. ಆತ್ಮವಿಶ್ವಾಸ ಹೆಚ್ಚಿದೆ. ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ಬಂದಿದೆ. ಈಗ ನನ್ನ ಜೊತೆ ಹಲವಾರು ಗೆಳೆಯರನ್ನೂ ಇಲ್ಲಿಗೆ ಕರೆದುಕೊಂಡು ಬರುತ್ತಿದ್ದೇನೆ ಎಂದು ತಿಳಿಸಿದರು.
ವಿದ್ಯಾರ್ಥಿನಿ ಸಹನಾ, ಯೋಗಾಸನದಿಂದ ತಾನು ಆರೋಗ್ಯದಿಂದ ಇದ್ದು, ತಮ್ಮ ಮನೆಯಲ್ಲಿ ತಮ್ಮ ತಾಯಿಯವರಿಗೂ ಯೋಗಾಸನ ಹೇಳಿ ಕೊಡುತ್ತಿರುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಜಯದೇವ ಯೋಗ ಕೇಂದ್ರದ ಪದಾಧಿಕಾರಿಗಳು, ಹಾಸ್ಟೆಲ್ ವಿದ್ಯಾರ್ಥಿಗಳು, ಶಿರಡಿ ಸಾಯಿ ಯೋಗ ಕೇಂದ್ರದ ಪದಾಧಿಕಾರಿಗಳು, ಜೈನ್ ಯೋಗ ಕೇಂದ್ರದ ಯೋಗ ಬಂಧುಗಳು, ಸ್ವಾಮಿ ವಿವೇಕಾನಂದ ಬಡಾವಣೆಯ ಯೋಗ ಬಂಧುಗಳು, ಅಲ್ಲದೆ ಮುಖಂಡರಾದ ಕರಿಬಸಪ್ಪ ಕಣಕುಪ್ಪಿ, ಬಿ.ಟಿ.ಜಯಪ್ರಕಾಶ್, ಕಿರಣ್‍ಕುಮಾರ್ ವಿ.ಶಣೈ, ಜೆ.ಸೋಮನಾಥ, ಶರಣಾರ್ಥಿ ಬಕ್ಕಪ್ಪ, ಅಜ್ಜಪ್ಪ, ಹಿರೇಮಠ, ಸುಮಿತ್ರಮ್ಮ, ಉಳುವಯ್ಯ, ಸವಿತಾ ಬೆಂಗೇರಿ, ವಿಜಯಕುಮಾರ್, ರೇವಣ್ಣ, ಜಿ.ಎಸ್.ವೀರಣ್ಣ, ಕೆ.ಎಂ.ಉಮಾಶಂಕರ್, ಶಾಂತಕುಮಾರ್ ಸೋಗಿ, ಮಂಜುನಾಥ ಸಿ,, ಸಂಜಯ್‍ಕುಮಾರ್, ಸಿದ್ದಣ್ಣ, ಪುಟ್ಟರಾಜ್, ಮಂಜುಳಮ್ಮ, ಭಾರತಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
