ತುರುವೇಕೆರೆ:
ಕಟ್ಟಡ ಕಾರ್ಮಿಕರಿಗೆ ಸರ್ಕಾರದ ವತಿಯಿಂದ ಶೇ 90 ರಷ್ಟು ಸಹಾಯ ಧನದಲ್ಲಿ ದ್ವಿಚಕ್ರವಾಹನ ನೀಡಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ್ ಅಭಿಪ್ರಾಯಪಟ್ಟರು.
ಪಟ್ಟಣದ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಶ್ರೀ ವಿದ್ಯಾಗಣಪತಿ ಕಟ್ಟಡ ಕೆಲಸಗಾರರ ಸಂಘ, ಶ್ರೀ ಭುವನೇಶ್ವರಿ ಸುಣ್ಣ-ಬಣ್ಣ, ಶ್ರಮಜೀವಿ ಕಟ್ಟಡ ಕಾರ್ಮಿಕರ ಹಿತ ರಕ್ಷಣ ಸಮಿತಿ ಕುಣಿಗಲ್, ಶ್ರೀ ಹೊನ್ನಾದೇವಿ ಕಟ್ಟಡ ಕಾರ್ಮಿಕರ ಸಂಘ ದಂಡಿನಶಿವರ ಹಗು ಶ್ರಮಶಕ್ತಿ ಕರ್ಮಿಕ ವೇದಿಕೆ ಮಾಯಸಚಿದ್ರ ಇವುಗಳ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ 9 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಹಾಗೂ ಕಾರ್ಮಿಕರ ದಿನಾಚಾರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಟ್ಟಡ ಕಾರ್ಮಿಕರು ಅಸಂಘಟಿತ ಕಾರ್ಮಿಕರಾಗಿದ್ದು ಕಾರ್ಮಿಕ ಸಂಘದ ಸದಸ್ಯರಾಗಿ ಸರ್ಕಾರದಿಂದ ಸಿಗುವ ಸವಲತ್ತು ಪಡೆಯಬೇಕಿದೆ.
ತಾಲೂಕಿನಲ್ಲಿ ಕೇವಲ 400 ಕಾರ್ಮಿಕರು ಮಾತ್ರ ಸದಸ್ಯತ್ವ ಪಡೆದಿದ್ದಾರೆ. ಸಂಘಟನೆ ವಿಚಾರದಲ್ಲಿ ಶಾಶ್ವತ ಯೋಜನೆ ರೂಪಿಸಬೇಕಿದೆ. ಪ್ರತಿ ವರ್ಷ ಸದಸ್ಯತ್ವ ನವೀಕರಣ ಮಾಡಿಕೊಳ್ಳಬೇಕು. ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕರೇ ಕಟ್ಟಿರುವ ಸುಮಾರು 6500 ಕೋಟಿ ಹಣ ಇದೆ. ನಾನು ವಿಧಾನ ಪರಿಷತ್ ಸದಸ್ಯನಾಗಿದ್ದಾಗ ಸದನ ಸಮಿತಿಯಲ್ಲಿ ಸದಸ್ಯನಾಗಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯರಿಗೆ ಶೇ.90ರಷ್ಟು ಸಬ್ಸಿಡಿಯಲ್ಲಿ ಕಾರ್ಮಿಕರಿಗೆ ಸ್ಕೂಟರ್ ನೀಡುವಂತೆ ಸೂಚಿಸಿದ್ದೆನು. ಇದರ ಬಗ್ಗೆ ಈ ಸರ್ಕಾರ ಚಿಂತಿಸಬೇಕಿದೆ ಎಂದರು.
ಕಾರ್ಮಿಕ ಇಲಾಖೆ ನಿರೀಕ್ಷಕರಾದ ಅನುಪಮಾ ಕಾರ್ಮಿಕರಿಗೆ ಸಕಾರದ ಸವಲತ್ತುಗಳ ಸೌಲಭ್ಯಗಳನ್ನು ಪಡೆದುಕೊಳ್ಳುವ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಅಖಿಲ ಭಾರತ ಕಾರ್ಮಿಕ ಹಿತರಕ್ಷಣಾ ವೇದಿಕೆ ಗೌರವಾಧ್ಯಕ್ಷ ರಾಮಮೂರ್ತಿ ಕಾರ್ಮಿಕರು ಸಂಘಟಿತರಾಗುವಂತೆ ಕರೆಕೊಟ್ಟರೆ, ವಕೀಲ ಧನಪಾಲ್ ಕಾನೂನಿನ ಅಗತ್ಯತೆ ಬಗ್ಗೆ ತಿಳಿಸಿಕೊಟ್ಟರು. ಗ್ಲೋಬಲ್ ಎಂಬಸ್ಸಿ ಕಾಲೇಜು ಪ್ರಾಂಶುಪಾಲ ಗಂಗಾಧರದೇವರಮನೆ ಉಪನ್ಯಾಸ ನೀಡಿದರು.
ಈ ಸಂದರ್ಬದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಸಾದನೆ ಮಾಡಿದ ಕಟ್ಟಡ ಕಾರ್ಮಿಕರ ಮಕ್ಕಳನ್ನು ಸನ್ಮಾನಿಸಿ ಹೆಚ್ಚಿನ ವಿದ್ಯಾಬ್ಯಾಸಕ್ಕೆ ಪ್ರೋತ್ಸಾಹ ಹಣ ನೀಡಲಾಯಿತು. ಕಾರ್ಯಕ್ರಮದಲ್ಲಿ ಅಖಿಲ ಭಾರತ ಕಾರ್ಮಿಕ ಹಿತ ರಕ್ಷಣಾ ವೇದಿಕೆ ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ಬಸವರಾಜು, ಪಟ್ಟಣ ಪಂಚಾಯ್ತಿ ಸದಸ್ಯರಾದ ಅಶಾರಾಣಿ, ಭಾಗ್ಯ, ಚಿದಾನಂದ್, ಕಾನೂನು ಸಲಹೆಗಾರ ಉಮೇಶ್, ಈಶ್ವರೀಯ ವಿಧ್ಯಾಲಯದ ಸಂಚಾಲಕಿ ಬಿ.ಕೆ.ಗೀತಕ್ಕ, ಶಿವಣ್ಣ, ತಿಮ್ಮಪ್ಪ, ಗೌರವಾಧ್ಯಕ್ಷ ಈರಣ್ಣ, ಕಾರ್ಯದರ್ಶಿ ಮಂಜುನಾಥ್, ಡಿಷ್‍ರಾಜಶೇಖರ್, ರಂಗಸ್ವಾಮಿ, ಉಮೇಶ್, ಜಯಕುಮಾರ್, ಪ್ರೇಮಕುಮಾರ್, ಸುಣ್ಣ ಬಣ್ಣ ಕೆಲಸಗಾರರ ಸಂಘದ ಅಧ್ಯಕ್ಷ ಹೊನ್ನಪ್ಪ ಸೇರಿದಂತೆ ಇತರರು ಇದ್ದರು. ಕಾರ್ಯಕ್ರಮಕ್ಕೂ ಮುಂಚೆ ಪಟ್ಟಣದ ಶ್ರೀ ಉಡುಸಲಮ್ಮ ದೇವಾಯದಿಂದ ಅನೇಕ ಜಾನಪದ ಕಲಾ ಪ್ರಕಾರಗಳೊಂದಿಗೆ ಪಟ್ಟಣz ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.