ಯುವಜನತೆ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ: ಮಾನ್ಯ ರಾಜ್ಯಪಾಲರು

ಬೆಂಗಳೂರು

    ಯುವಜನರು ಕೆಟ್ಟವಿಚಾರಗಳತ್ತ ಗಮನ ಹರಿಸದೇ ತಲೆಕೆಡಿಸಿಕೊಳ್ಳದೆ, ಸಮಾಜಮುಖಿ ಸೇವೆಗಳತ್ತ ಒಲವು ಬೆಳೆಸಿಕೊಳ್ಳುವಂತೆ ರಾಜ್ಯಪಾಲ ವಜುಬಾಯಿ ರೂಢವಾಲಾ ಅವರು ಕರೆ ನೀಡಿದ್ದಾರೆ.ರಾಜಭವನದ ಗಾಜಿನ ಮನೆ ಆವರಣದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆಯೋಜಿಸಿದ್ದ ಸಮಾರಂಭದಲ್ಲಿ ಕಪ್ಸ್ ಬುಲ್ ಬುಲ್ಸ್ ಸ್ಕೌಟ್ಸ್ ಗೈಡ್ಸ್ ರೋವರ್ ಮತ್ತು ರೇಂಜರ್ಸ್ಗಳಿಗೆ ಚತುರ್ಥ ಚರಣ್ ಹೀರಕ್ ಪಂಕ್ ಮತ್ತು ರಾಜ್ಯ ಪುರಸ್ಕಾರ ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಿ ಮಾತನಾಡಿದರು.

      ನಿರ್ಗತಿಕರು, ಬಡವರು,ನೊಂದವರು ಹಾಗೂ ರೋಗಿಗಳ ಸೇವೆ ಮಾಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಅವರು ಕರೆ ನೀಡಿದರು.ಸಮಾಜದ ಆಗುಹೋಗುಗಳತ್ತ ಹೆಚ್ಚಿನ ಗಮನ ನೀಡಬೇಕು. ಕೇವಲ ರಾಜ್ಯ ಮಾತ್ರವಲ್ಲದೆ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ಸೇವೆ ಸಲ್ಲಿಸುವಂತಹ ಮನೋಭಾವ ಬೆಳೆಸಿಕೊಳ್ಳುವಂತೆ ಅವರು ಸಲಹೆ ನೀಡಿದರು.ಉನ್ನತ ಶಿಕ್ಷಣ ಸಚಿವ ಹಾಗೂ ಭಾರತ್ ಮತ್ತು ಸ್ಕೌಟ್ಸ್ ಉಪಾಧ್ಯಕ್ಷ ಜಿ.ಟಿ. ದೇವೇಗೌಡ ಅವರು ಮಾತನಾಡಿ, ರಾಜ್ಯದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಾಖೆಗೆ ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿದರು.

       ಶಿಕ್ಷಣದ ಜೊತೆಗೆ ಪ್ರತಿ ವಿದ್ಯಾರ್ಥಿಯ ಸಮತೋಲನ ಬೆಳವಣಿಗೆಗೆ ಸ್ಕೌಟ್ಸ್ ಹೆಚ್ಚು ಅಗತ್ಯತೆ ಇದೆ. ನಡತೆ, ಆರೋಗ್ಯ, ಪರಿಸರ, ಸೇವಾ ಮನೋಭಾವಗಳನ್ನು ಕಲಿಸಿಕೊಡುವ ಸ್ಕೌಟ್ಸ್, ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುತ್ತದೆ ಎಂದು ತಿಳಿಸಿದರು.ದೇಶದ ಭವಿಷ್ಯ ರೂಪಿಸುವ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ. ಶಾಲಾ – ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲಿ ಆಟ, ಯೋಗ, ಧ್ಯಾನಕ್ಕೂ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ ಎಂದು ಹೇಳಿದರು.

       ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ಉಪಾಧ್ಯಕ್ಷೆ ತೇಜಸ್ವಿನಿ ಅನಂತ್ ಕುಮಾರ್ ಅವರು ಮಾತನಾಡಿ, ಮನುಷ್ಯ ಸಂಘಜೀವಿ ಯಾಗಲು ಹಾಗೂ ಪರಿಶ್ರಮದ ಬಗ್ಗೆ ಪಾಠ ಕಲಿಸಲು ಸ್ಕೌಟ್ಸ್ ಹೆಚ್ಚು ನೆರವಾಗಿದೆ. ವಿದ್ಯಾರ್ಥಿಗಳು ಪ್ಲಾಸ್ಟಿಕ್‍ನಿಂದ ನಿರ್ಮಿತವಾದ ವಸ್ತುಗಳನ್ನು ಬಳಸಬಾರದು ಎಂದು ಮನವಿ ಮಾಡಿದರು.ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಅವರು, ಸ್ಕೌಟ್ಸ್ ವಿದ್ಯಾರ್ಥಿಗಳು ಕೈಗೊಂಡ ಸಮಾಜಮುಖಿ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.ಸಮಾರಂಭದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ಉಪಾಧ್ಯಕ್ಷ ಕೊಂಡಜ್ಜಿ ಬ. ಷಣ್ಮುಖಪ್ಪ, ಭಾರತಿ ಚಂದ್ರಶೇಖರ್ ಮತ್ತು ರಾಜ್ಯ ಆಯುಕ್ತ ಎಂ.ಎ. ಖಾಲಿದ್ ಅವರು ಉಪಸ್ಥಿತರಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link