ಹೊನ್ನಾಳಿ:
ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ(ಮನ್ರೇಗಾ) ಅಡಿ ಕೆರೆ ಹೂಳೆತ್ತುವ ಕಾಮಗಾರಿಗೆ ಮಂಗಳವಾರ ಶಾಸಕ ಎಂ.ಪಿ. ರೇಣುಕಾಚಾರ್ಯ ವಿಶಿಷ್ಟವಾಗಿ ಚಾಲನೆ ನೀಡಿದರು.ಸ್ವತಃ ತಾವೇ ಹಾರೆಕೋಲು, ಪಿಕಾಸಿ ಹಿಡಿದು ಗುಂಡಿ ತೆಗೆಯುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು. ಕಾರ್ಮಿಕರ ಜೊತೆ ಒಂದು ಗಂಟೆ ಕಾಲ ಮಣ್ಣು ಅಗೆದು ಗಮನ ಸೆಳೆದರು.
ಬಳಿಕ ಮಾತನಾಡಿದ ಅವರು, ರಾಜಕೀಯ ಪ್ರವೇಶ ಮಾಡುವ ಪೂರ್ವದ ದಿನಗಳಲ್ಲಿ ನಾನೇ ಸ್ವತಃ ವಿದ್ಯಾಭ್ಯಾಸ, ವ್ಯಾಪಾರದ ಜೊತೆಗೆ ಕೃಷಿ ಕೆಲಸ ಮಾಡಿದ ಅನುಭವವಿದೆ. ನಾವು ಹಿಂದೆಲ್ಲ ಗದ್ದೆಯಲ್ಲಿ ರೈತರ ಜೊತೆ ಕೆಲಸ ಮಾಡಿದ್ದೇವೆ. ಈ ಅನುಭವವೇ ಇಂದಿನ ನನ್ನ ಜನಸೇವೆಗೆ ಪ್ರೇರಣೆಯಾಗಿದೆ ಎಂದು ಹೇಳಿದರು.
ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳ ಜನತೆಯ ಹಿತರಕ್ಷಣೆ ಮತ್ತು ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೂಲ ಮಂತ್ರವಾಗಿದೆ. ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಉದ್ಯೋಗ ಖಾತ್ರಿ ಯೋಜನೆಯಡಿ ದೇಶದ ಜನತೆಯ ಕಲ್ಯಾಣಕ್ಕಾಗಿ ಅನೇಕ ಮಹತ್ವ ಪೂರ್ಣ ಕಾಮಗಾರಿಗಳನ್ನು ಅಳವಡಿಸಲಾಗಿದೆ.
ಬರಗಾಲ, ಪ್ರವಾಹ ಪರಿಸ್ಥಿತಿ ಸಮಯದಲ್ಲಿ ಕೂಲಿ ಕಾರ್ಮಿಕರ ಜೀವನಕ್ಕೆ ಅನನುಕೂಲ ಉಂಟಾದ ಸಮಯದಲ್ಲಿ ಖಾತ್ರಿ ಯೋಜನೆಯಡಿ 100 ಮಾನವ ದಿನಗಳು ಮತ್ತು ಬರಗಾಲ ಪರಿಸ್ಥಿತಿಯಂತಹ ಸಮಯದಲ್ಲಿ 50 ಮಾನವ ದಿನಗಳಷ್ಟು ಹೆಚ್ಚು ಸಮಯದಲ್ಲಿ ವೇತನವನ್ನು ಕೂಡ ಕೇಂದ್ರ ಸರಕಾರ ನಿಗದಿಪಡಿಸಿದೆ. ಕಾರ್ಮಿಕರು, ಕೆಲಸ ನಿರ್ವಹಿಸುವ ಸಮಯದಲ್ಲಿ ಕುಡಿಯುವ ನೀರು ಮುಂತಾದ ಸೌಲಭ್ಯಗಳನ್ನು ಕೂಡ ಇದರಲ್ಲಿ ಕಲ್ಪಿಸಲಾಗಿದೆ.
ಕ್ಷೇತ್ರದಲ್ಲಿ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಈಗಾಗಲೇ ನಾಲ್ಕಾರು ಬಾರಿ ಕ್ಷೇತ್ರದ 47 ಗ್ರಾಪಂ ಪಿಡಿಒ, ಕಾರ್ಯದರ್ಶಿ, ತಾಪಂ ಇಒಗಳೊಡನೆ ಸಭೆ ನಡೆಸಿ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಎರಡು ಕೋಟಿ ರೂ.ಗಳ ಕ್ರಿಯಾ ಯೋಜನೆ ತಯಾರಿಸಿ ಕಾಮಗಾರಿ ಅನುಷ್ಠಾನಗೊಳಿಸುವಂತೆ ಕಡ್ಡಾಯವಾಗಿ ಸೂಚನೆ ನೀಡಿರುವುದಾಗಿ ತಿಳಿಸಿದರು.
ಉದ್ಯೋಗ ಅರಸಿ ಜನರು ಗುಳೆ ಹೋಗುವುದನ್ನು ತಡೆಗಟ್ಟಬೇಕು. ಇದಕ್ಕೆ ಪೂರಕವಾಗಿ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಂಬಂಧಿಸಿದ ಅಧಿಕಾರಿಗಳು ತುರ್ತು ನಿಗಾ ವಹಿಸಬೇಕು. ಜಾಬ್‍ಕಾರ್ಡ್ ವ್ಯವಸ್ಥೆ ನಿರ್ವಹಿಸದ ಕೆಲವು ಗ್ರಾಪಂ ಪಿಡಿಒಗಳು ಖಾತ್ರಿ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ಕುರಿತಾಗಿ ದಿನ ನಿತ್ಯ ಸಾರ್ವಜನಿಕರಿಂದ ದೂರುಗಳ ಮಹಾಪೂರವೇ ಹರಿದು ಬರುತ್ತಿದೆ.
ಯಾವುದೇ ಕಾಮಗಾರಿ ನಿರ್ವಹಿಸಿದರೂ ಕೂಲಿ ಕಾರ್ಮಿಕರಿಗೆ ಕೂಲಿ ಹಣ ನಿಗದಿತ ಸಮಯಕ್ಕೆ ಪಾವತಿಸದೆ ಅಲೆದಾಡಿಸುವುದನ್ನು ಸಹಿಸುವುದಿಲ್ಲ. ನಿಗದಿತ ಕಾಲಮಿತಿಯಲ್ಲಿ ಕೂಲಿ ಹಣ ಪಾವತಿಸುವ ಮೂಲಕ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದಲ್ಲಿ ಕಾರ್ಮಿಕರ ಜೀವನಕ್ಕೆ ಭದ್ರತೆ ಒದಗಿಸಿದಂತಾಗುತ್ತದೆ ಎಂದು ವಿವರಿಸಿದರು. ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಕೂಲಿ ಪಾವತಿಗಾಗಿ ಕಾರ್ಮಿಕರು ದಿನನಿತ್ಯ ಗ್ರಾಪಂ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಬಂದೊದಗಿದೆ. ನಿರ್ಲಕ್ಷ್ಯ ವಹಿಸಿದ್ದಲ್ಲಿ ನಿಮ್ಮ ಜೇಬಿನಿಂದ ಹಣ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗ್ರಾಪಂ ಉಪಾಧ್ಯಕ್ಷ ನಾಗರಾಜ್, ಮಲ್ಲಿಕಾರ್ಜುನ್, ವಿರೇಶ್, ಚೇತು, ನರಸಿಂಹ, ಶ್ರೀನಿವಾಸ್, ಚನ್ನಬಸಪ್ಪ, ತೀರ್ಥಲಿಂಗಪ್ಪ, ನರಸಿಂಹಪ್ಪ, ಪಿಡಿಒ ಸುರೇಶ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.