ಸಂಚಾರಿ ನಿಯಮ ಉಲ್ಲಂಘನೆ ಜೀವಕ್ಕೆ ಅಪಾಯ

ಚಿತ್ರದುರ್ಗ:

   ಸಂಚಾರಿ ನಿಯಮಗಳನ್ನು ಪಾಲಿಸದೆ ವಾಹನಗಳನ್ನು ಚಾಲನೆ ಮಾಡುವುದರಿಂದ ಅಪಘಾತಗಳು ಸಂಭವಿಸಿ ಅಮೂಲ್ಯವಾದ ಜೀವಗಳನ್ನು ಬಲಿಕೊಡಬೇಕಾಗುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ ಹೇಳಿದರು.

    ಜೆ.ಎಂ.ಐ.ಟಿ.ಸರ್ಕಲ್‍ನಲ್ಲಿ ಕಳೆದ ಒಂದು ವಾರದ ಹಿಂದೆ ನಡೆದ ಅಪಘಾತದಲ್ಲಿ ಬಲಿಯಾದ ವಿದ್ಯಾರ್ಥಿನಿ ಅಮೃತಳ ಆತ್ಮಕ್ಕೆ ಶಾಂತಿ ಕೋರಿ ವಿಜ್ಞಾನ ಕೇಂದ್ರ, ರೋಟರಿ ಕ್ಲಬ್, ಸಾಮಾಜಿಕ ಚಿಂತಕರು ಹಾಗೂ ಸಾರ್ವಜನಿಕರೊಡಗೂಡಿ ರೋಟರಿ ಬಾಲಭವನದ ಮುಂಭಾಗ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ರಸ್ತೆ ಅಪಘಾತಗಳ ವಿರುದ್ದ ಸಹಿ ಸಂಗ್ರಹದಲ್ಲಿ ಭಾಗವಹಿಸಿ ಮಾತನಾಡಿದರು.

    ಕಾಯಿಲೆಯಿಂದ ಸಾಯುವವರಿಗಿಂತಲೂ ರಸ್ತೆ ಅಪಘಾತಗಳಲ್ಲಿ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಿರ್ಲಕ್ಷೆ ಹಾಗೂ ಚಾಲಕರ ತಪ್ಪಿನಿಂದ ಅಪಘಾತಗಳಾಗುವುದುಂಟು. ಸಾರಿಗೆ ನಿಯಮ ಅತ್ಯದ್ಬುತವಾಗಿದೆ. ಆದರೆ ಯಾರು ಪಾಲನೆ ಮಾಡುತ್ತಿಲ್ಲ. ವಾಹನಗಳನ್ನು ವೇಗವಾಗಿ ಚಾಲನೆ ಮಾಡುವುದು ತಾತ್ಕಾಲಿಕವಾಗಿ ಮನಸ್ಸಿಗೆ ಖುಷಿ ಕೊಡಬಹುದು.

      ಆದರೆ ಸಾವು-ನೋವು ಸಂಭವಿಸಿದಾಗ ಅವಲಂಭಿತರು ಜೀವನಪರ್ಯಂತ ದುಃಖಪಡಬೇಕಾಗುತ್ತದೆ. ಯಾವುದೇ ವಾಹನವನ್ನು ಚಾಲನೆ ಮಾಡುವಾಗ ಮೆದುಳು ಮತ್ತು ದೇಹಕ್ಕೆ ಏಕಾಗ್ರತೆ ಇರಬೇಕು. ಬೇರೆ ಕಡೆ ಗಮನಹರಿಸಬಾರದು. ಮೈಯೆಲ್ಲಾ ಕಣ್ಣಾಗಿಸಿಕೊಂಡು ಎಚ್ಚರಿಕೆಯಿಂದ ಇದ್ದಾಗ ಮಾತ್ರ ಸಾಕಷ್ಟು ಅಪಘಾತಗಳನ್ನು ತಡೆಗಟ್ಟಬಹುದು ಎಂದು ತಿಳಿಸಿದರು.

     ರೋಟರಿ ಕ್ಲಬ್ ಕಾರ್ಯದರ್ಶಿ ಶಿವರಾಂ ಮಾತನಾಡುತ್ತ ಚಾಲಕರುಗಳು ಸಂಚಾರಿ ನಿಯಮಗಳನ್ನು ಪಾಲಿಸದಿದ್ದಾಗ ಅಪಘಾತಗಳಾಗುತ್ತದೆ. ಅದಕ್ಕಾಗಿ ಪ್ರತಿಯೊಬ್ಬರು ಸಂಚಾರಿ ನಿಯಮಗಳನ್ನು ಪಾಲಿಸಿ ಜೀವ ಉಳಿಸಬೇಕಾಗಿದೆ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

    ಸಾಮಾಜಿಕ ಚಿಂತಕ ಕೆ.ಕೆ.ಕಮಾನಿ ಮಾತನಾಡಿ ಪರವಾನಗಿಯಿಲ್ಲದೆ ಯಾರು ವಾಹನಗಳನ್ನು ಚಾಲನೆ ಮಾಡಬಾರದು. ಚಿಕ್ಕ ಚಿಕ್ಕ ವಯಸ್ಸಿನ ಮಕ್ಕಳ ಕೈಗೆ ತಂದೆ-ತಾಯಿಗಳು ದ್ವಿಚಕ್ರ ವಾಹನಗಳನ್ನು ಯಾವುದೇ ಕಾರಣಕ್ಕೂ ನೀಡಬಾರದು. ಮತ್ತೊಬ್ಬರ ವಾಹನಗಳನ್ನು ಚಾಲನೆ ಮಾಡುವಾಗ ಅಪಘಾತಗಳು ಸಂಭವಿಸಿ ಎಲ್ಲರನ್ನು ಇಕ್ಕಟ್ಟಿಗೆ ಸಿಲುಕಿಸುತ್ತದೆ. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿರಬೇಕು ಎಂದು ಜಾಗೃತಿ ಮೂಡಿಸಿದರು.

       ರೀನ ವೀರಭದ್ರಪ್ಪ ಮಾತನಾಡುತ್ತ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಅಡ್ಡಾದಿಡ್ಡಿಯಾಗಿ ಚಾಲನೆ ಮಾಡುವುದರಿಂದ ಅಪಘಾತಗಳು ಸಂಭವಿಸುವುದುಂಟು. ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಾಲನೆ ಮಾಡುವವರನ್ನು ಕಾನೂನು ಅಡಿ ಶಿಕ್ಷಿಸಬೇಕು. ಏಕೆಂದರೆ ಸಾಕಷ್ಟು ಅಪಘಾತಗಳಲ್ಲಿ ತಲೆಗೆ ಪಟ್ಟು ಬೀಳುವುದು ಸಹಜ. ಇದರಿಂದ ಪ್ರಾಣಕ್ಕೆ ಕುತ್ತು ಬರುತ್ತದೆ. ಅತಿಯಾದ ವೇಗದ ಚಾಲನೆ ಮನಸ್ಸಿಗೆ ಮುದ ನೀಡಬಹುದು. ಆಕಸ್ಮಿಕವಾಗಿ ಅಪಘಾತವಾಗಿ ಕಾಲು-ಕೈಗಳನ್ನು ಕಳೆದುಕೊಂಡು ಬದುಕಿದರೆ ತಂದೆ ತಾಯಿಗಳು ನೋವು ಅನುಭವಿಸಬೇಕಾಗುತ್ತದೆ. ಪರವಾನಗಿಯಿಲ್ಲದೆ ವಾಹನ ಚಾಲನೆ ಮಾಡುವವರನ್ನು ಪೋಲಿಸರು ಹಿಡಿದು ದಂಡಿಸಬೇಕು ಎಂದು ವಿನಂತಿಸಿದರು.

     ಪರಿಸರ ತಜ್ಞ ಡಾ.ಹೆಚ್.ಎಸ್.ಕೆ.ಸ್ವಾಮಿ ಮಾತನಾಡಿ ಹೆದ್ದಾರಿಗಳಲ್ಲಿ ಯಾವುದೇ ಸುರಕ್ಷತೆ ಇಲ್ಲದ ಪರಿಣಾಮ ಅಪಘಾತಗಳು ಮೇಲಿಂದ ಮೇಲೆ ಸಂಭವಿಸುತ್ತಿರುತ್ತವೆ. ಜೆ.ಎಂ.ಐ.ಟಿ.ಬಳಿ ಸಂಭವಿಸಿದ ಅಪಘಾತದಲ್ಲಿ ಹನ್ನೆರಡು ವರ್ಷದ ಬಾಲಕಿ ಅಮೃತ ಬಲಿಯಾಗಿರುವುದು ಅತ್ಯಂತ ನೋವಿನ ಸಂಗತಿ. ಇನ್ನು ಮುಂದೆ ಅಂತಹ ಘಟನೆಗಳು ಮರಕಳಿಸಬಾರದೆಂದರೆ ಹೆದ್ದಾರಿಗಳಲ್ಲಿ ರೋಡ್‍ಹಂಪ್ಸ್‍ಗಳನ್ನು ನಿರ್ಮಿಸಿ ಅಪಘಾತಗಳನ್ನು ತಡೆಯಬೇಕಾಗಿದೆ ಎಂದರು.

     ರೊ.ವೈಚಂದ್ರಶೇಖರ್, ಬ್ರಹ್ಮಾನಂದಗುಪ್ತ, ಡಾ.ಹರಿಣಿ, ವಾಣಿಜಯದೇವ್, ಕವಿತ ಜೈನ್, ರೋಟರಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಸಾಮಾಜಿಕ ಚಿಂತಕರು ಸಹಿ ಸಂಗ್ರಹದಲ್ಲಿ ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap