ಅಮರಾವತಿ:
ಆಂಧ್ರಪ್ರದೇಶದಲ್ಲಿ ಇತ್ತೀಚೆಗೆ ನಡೆದಿದ್ದ ಚುನಾವಣೆಯಲ್ಲಿ ವಿಪಕ್ಷ ಸ್ಥಾನಕ್ಕೆ ಸರಿದ ಟಿಡಿಪಿ ಮತ್ತು ಆಡಳಿತ ಪಕ್ಷದ ನಡುವಣ ರಾಜಕೀಯ ಸಮರ ತಾರಕ್ಕೇರಿದೆ .
ಎರಡೂ ಪಕ್ಷಗಳ ನಡುವೆ ಜಗಳಕ್ಕೆ ಕಾರಣವಾಗಿದ್ದ ಟಿಡಿಪಿ ಕಚೇರಿಯ ‘ಪ್ರಜಾವೇದಿಕಾ’ ಕಟ್ಟವನ್ನು ಆಂಧ್ರ ಪ್ರದೇಶದ ಜಗನ್ ಸರ್ಕಾರ ಕೊನೆಗೂ ತೆರವುಗೊಳಿಸಿದೆ.
ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರು, ಪಕ್ಷದ ಚಟುವಟಿಕೆಗಳನ್ನು ನಡೆಸಲೆಂದು ನಿರ್ಮಾಣ ಮಾಡಿದ್ದ ಕಟ್ಟಡವನ್ನು ನೆಲಸಮ ಮಾಡಲಾಗಿದೆ. ನೂತನ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸರ್ಕಾರ ರಚನೆ ಬಳಿಕ ನಾಯ್ಡು ವಿರುದ್ಧ ಕೈಗೊಂಡ ಮೊದಲ ಕ್ರಮ ಇದಾಗಿದ್ದು,ಮಂಗಳವಾರ ರಾತ್ರಿಯಿಂದಲೇ ಕಟ್ಟಡವನ್ನು ನೆಲಸಮ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.ಆಂಧ್ರಪ್ರದೇಶದ ‘ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ’ವು (ಸಿಆರ್ಡಿಎ) ಕಟ್ಟಡವವನ್ನು ವಶಕ್ಕೆ ಪಡೆದು ಸಂಪೂರ್ಣ ಕೆಡವಿ ಹಾಕಿದೆ
ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ನಿವಾಸದ ಸಮೀಪದಲ್ಲಿಯೇ ಈ ಪ್ರಜಾ ವೇದಿಕ ನಿರ್ಮಾಣವಾಗಿದ್ದು, ಆರಂಭದಲ್ಲಿ ಈ ಕಟ್ಟಡ ಕಾಮಗಾರಿ ವೆಚ್ಚ 5 ಕೋಟಿ ಎಂದು ಹೇಳಲಾಗಿತ್ತು. ಆದರೆ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ಹೊತ್ತಿಗೆ ಅದು 8 ಕೋಟಿಯಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.