ಬೆಂಗಳೂರು
ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ರಾಜೀನಾಮೆ ನೀಡುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ಲಾಲ್ ಬಾಗ್ ಮುಂಭಾಗದಿಂದ ಶಾಂತಿನಗರದ ಮುಖ್ಯ ರಸ್ತೆಯ ಮುಂಭಾಗ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೆಎಸ್ಆರ್ಟಿಸಿ,ಬಿಎಂಟಿಸಿಯ ಸಾವಿರಾರು ನೌಕರರು ಬೆಂಗಳೂರು ಚಲೋ ಮೂಲಕ ಮೆರವಣಿಗೆ ಹೊರಟು ಸಂಸ್ಥೆಯ ಕೇಂದ್ರ ಕಚೇರಿಯ ಬಳಿ ಸಮಾವೇಶಗೊಂಡರು.
ಸಮಾವೇಶದಲ್ಲಿ ಮಾತನಾಡಿದ ನೌಕರರ ಸಂಘಟನೆಯ ಮುಖಂಡರು ಸಂಸ್ಥೆಯಲ್ಲಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣರಿಂದ ಯಾವುದೇ ಅಭಿವೃದ್ಧಿ ಆಗಿಲ್ಲ ವರ್ಗಾವಣೆ ದಂಧೆ ಹೆಚ್ಚಾಗಿದೆ.ಇನ್ನೂ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಸಂಬಂಧಿಯಾಗಿರುವುದರಿಂದ ಸಚಿವರಿಗೆ ಯಾವುದೇ ಅಡೆತಡೆ, ಜವಾಬ್ದಾರಿ ಇಲ್ಲದಂತೆ ಆಗಿದೆ ಎಂದು ಪ್ರತಿಭಟನೆ ನಿರತ ನೌಕರರು ಆಕ್ರೋಶ ವ್ಯಕ್ತಪಡಿಸಿದರು.
ಅವೈಜ್ಞಾನಿಕವಾದ ನಮೂನೆ 4ರಿಂದ ಚಾಲಕ, ನಿರ್ವಾಹಕರ ಕೆಲಸದ ಭಾರ ಹೆಚ್ಚಾಗಿದೆ. ಕಾನೂನುರೀತ್ಯ ಓವರ್ ಟೈಮ್ ನೀಡುತ್ತಿಲ್ಲ.ನಾಲ್ಕೂ ಸಾರಿಗೆ ನಿಗಮಗಳಲ್ಲೂ ಕೈಗಾರಿಕಾ ಬಾಂಧವ್ಯ ಸಂಪೂರ್ಣವಾಗಿ ಕುಸಿದಿದೆ.ಕೈಗಾರಿಕಾ ಬಾಂಧವ್ಯವನ್ನು ಸರಿಪಡಿಸುವ ದಿಕ್ಕಿನಲ್ಲಿ ಆಡಳಿತ ವರ್ಗ ಯಾವುದೇಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ದೂರಿದರು.
ಕಳೆದ 1999, ಫೆಬ್ರವರಿ 18ರಂದು ಸುಪ್ರೀಂ ಕೋರ್ಟ್ ನೌಕರರ ಫೆಡರೇಷನ್ ಗೆ ಮಾನ್ಯತೆ ಇದೆ ಎಂದು ತಿಳಿಸಿದ್ದರೂ ಆಡಳಿತ ವರ್ಗ ಅದಕ್ಕೆ ಕಿಂಚಿತ್ತೂ ಬೆಲೆ ಕೊಟ್ಟಿಲ್ಲ.ಯಾವುದೇ ಸಂಘಕ್ಕೂ ಮಾನ್ಯತೆ ಇಲ್ಲ ಹಾಗೂ ನಾವು ಯಾರ ಜೊತೆ ಬೇಕಾದರೂ ಮಾತನಾಡುತ್ತೇವೆ ಎಂಬ ಧೋರಣೆಯನ್ನು ಅದು ತಾಳಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 2012 ಸೆಪ್ಟಂಬರ್ ಮತ್ತು 2015 ಜುಲೈ ಮುಷ್ಕರಗಳ ಸಂದರ್ಭಗಳಲ್ಲಿ ಮಾತುಕತೆಯಾದರೂ ಅದು ಕೈಗಾರಿಕಾ ವಿವಾದ ಕಾಯ್ದೆಯಡಿಯಲ್ಲಿ ಕೈಗಾರಿಕಾ ಒಪ್ಪಂದವಾಗಿಲ್ಲ. ಈಗಾಗಲೇ ಚಾಲ್ತಿಯಲ್ಲಿರುವಂತೆ, ಅಪಘಾತವಾದಾಗ ಚಾಲಕರಿಗೆ ಜಾಮೀನು ಕೊಡುವ ವಿಷಯದಲ್ಲಿ, ಐಒಡಿ ಕೊಡುವ ವಿಷಯದಲ್ಲಿ, ಅಮಾನತು ರದ್ದು ಮಾಡುವ ವಿಷಯದಲ್ಲಿ ಕೈಗಾರಿಕಾ ಒಪ್ಪಂದಗಳ ಉಲ್ಲಂಘನೆಯಾಗುತ್ತಿವೆ ಎಂದು ದೂರಿದರು.
ಕೇಂದ್ರ ಮಟ್ಟದಲ್ಲಾಗಲೀ, ವಿಭಾಗ ಮಟ್ಟದಲ್ಲಾಗಲಿ ಅಥವಾ ಘಟಕ ಮಟ್ಟದಲ್ಲಾಗಲೀ ಮಾತುಕತೆ ನಡೆಯುತ್ತಿಲ್ಲ. ಇದರಿಂದ ಸಮಸ್ಯೆ ಹೆಚ್ಚಾಗಿ ಉಳಿದುಕೊಂಡಿದೆ. ಮಾತುಕತೆಗಳ ಮೂಲಕ ಸಮಸ್ಯೆ ಬಗೆಹರಿಸುವ ನಂಬಿಕೆ ಆಡಳಿತ ವರ್ಗಕ್ಕಿಲ್ಲ.ಇಲ್ಲಿರುವ ಅಧಿಕಾರಿಗಳಿಗೆ ಕೈಗಾರಿಕಾ ಬಾಂಧವ್ಯದ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ಆರೋಪಿಸಿದರು.
ಸಾರಿಗೆ ನಿಗಮಗಳು ಖರೀದಿಸುವ ಡೀಸೆಲ್ ಮೇಲೆ ರಾಜ್ಯ ಸರ್ಕಾರ ವಿಧಿಸುವ ಸುಂಕವನ್ನು ಶೇಕಡಾ 50ರಷ್ಟು ಭಾಗ ಕಡಿಮೆ ಮಾಡಬೇಕು, ನಾಲ್ಕೂ ಸಾರಿಗೆ ನಿಗಮಗಳನ್ನು ಒಂದು ಮಾಡಬೇಕು ಎಂದು ಒತ್ತಾಯಿಸಿದ ನೌಕರರು, ನಾಲ್ಕೂ ಸಾರಿಗೆ ನಿಗಮಗಳ ವಾಹನಗಳಿಗೆ ಹೆದ್ದಾರಿ ಸುಂಕ ರದ್ದು ಪಡಿಸಬೇಕು, ನಿಗಮಗಳ ನೌಕರರ ವೇತನವನ್ನು ಸರ್ಕಾರವೇ ಪಾವತಿಸಬೇಕು, ನಾಲ್ಕೂ ಸಾರಿಗೆ ನಿಗಮಗಳ ವಾಹನಗಳಿಗೆ ಮೋಟಾರ್ ವೆಹಿಕಲ್ ತೆರಿಗೆಯನ್ನು ರದ್ದುಪಡಿಸಬೇಕು. 4 ನಿಗಮಗಳಿಗೆ ವಾರ್ಷಿಕ ಒಂದು ಸಾವಿರ ಕೋಟಿ ರೂಪಾಯಿ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
ನೌಕರರ ಪ್ರತಿಭಟನೆಯಿಂದ ಕೇಂದ್ರ ಕಚೇಋಇ ಬಳಿ ಬಿಗಿ ಪೊಲೀಸ್ ಬಂದೋಬಸ್ಥ್ ವ್ಯವಸ್ಥೆ ಕೈಗೊಳ್ಳಲಾಗಿತ್ತು.
ಸಿಎಂ ಜೊತೆ ಚರ್ಚೆ
ಬೆಂಗಳೂರು ಚಲೋಗೂ ಮುನ್ನ ತಮ್ಮ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಕೆಎಸ್ಆರ್ಟಿಸಿ ಸ್ಟಾಫ್ ಆಯಂಡ್ ವರ್ಕರ್ಸ್ ಫೆಡರೇಷನ್ನ ಮುಂಖಡರುಗಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವೆ ಅವರಿ ಮನವಿ ಪತ್ರ ಸಲ್ಲಿಸಿದರು.
ಸದಾಶಿವನಗರ ಗೃಹ ಕಚೇರಿಯಲ್ಲಿ ಮನವಿ ಸ್ವಿಕರಿಸಿ ಮಾತನಾಡಿದ ಅವರು,ಫೆಡರೇಷನ್ನ ಪದಾಧಿಕಾರಿಗಳು ಇಂದು ವಿವಿಧ ಬೇಡಿಕೆ ಈಡೇರಿಸಲು ಸಾರಿಗೆ ನೌಕರರ ಬೆಂಗಳೂರು ಚಲೋ ಕಾರ್ಯಕ್ರಮ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳ ಬಸ್ ಪಾಸ್ ವೆಚ್ಚದ ಬಾಬ್ತು ಭರಿಸುವುದು, ನಾಲ್ಕು ನಿಗಮದ ಬದಲು ಒಂದೇ ನಿಗಮ ಮಾಡುವುದು ಸೇರಿದಂತೆ ಅನೇಕ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರ ಜೊತೆ ಚರ್ಚಿಸಲಾಗುವುದು. ಅಲ್ಲದೆ, ಸಾರಿಗೆ ಅಧಿಕಾರಿಗಳೊಂದಿಗೆ ಸಭೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








