ದಾವಣಗೆರೆ:
1975-77ರ ಅವಧಿಯಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟವು ಹೊಸ ತಲೆಮಾರಿನ ಸಾಹಿತಿ, ಪತ್ರಕರ್ತರ ಉಗಮಕ್ಕೆ ಸಾಕ್ಷೀಭೂತವಾಯಿತು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕ ಸು.ರಾಮಣ್ಣ ತಿಳಿಸಿದರು.
ನಗರದ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಗುರುವಾರ ಸಂಜೆ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಿದ್ದ ತುರ್ತು ಪರಿಸ್ಥಿತಿಯಲ್ಲಿ ಸಾಹಿತ್ಯ ಎಂಬ ವಿಚಾರಗೋಷ್ಠಿಯಲ್ಲಿ ‘ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಾಹಿತ್ಯ ನಿರ್ವಹಿಸಿದ ಪಾತ್ರ ಕುರಿತು ಅವರು ವಿಷಯ ಮಂಡಿಸಿ ಅವರು ಮಾತನಾಡಿದರು.
ಕೆಲವು ಪತ್ರಿಕೆಗಳು ತುರ್ತು ಪರಿಸ್ಥಿತಿಯನ್ನು ವಿರೋಧಿಸಿದರೂ, ಬಹುತೇಕ ಪತ್ರಿಕೆಗಳು ಇಂದಿರಾ ಗಾಂಧಿಯ ಸರ್ವಾಧಿಕಾರದೆದುರು ಮಂಡಿಯೂರಿದ್ದವು. ಸರ್ಕಾರಕ್ಕೆ ವಿರುದ್ಧವಾಗಿ ಯಾರೂ ಸಹ ಏನೊಂದನ್ನೂ ಬರೆಯುವಂತಿರಲಿಲ್ಲ. ಅಂತಹ ಕ್ಲಿಷ್ಟಕರ ಸನ್ನಿವೇಶವನ್ನು ಸವಾಲಾಗಿ ಸ್ವೀಕರಿಸಿದ ಆರೆಸ್ಸೆಸ್ ಸ್ವಯಂಸೇವಕರು ತಮ್ಮದೇ ಪತ್ರಿಕೆಗಳನ್ನು ಆರಂಭಿಸಿದರು. ಸರಿಯಾಗಿ ಪತ್ರ ಬರೆಯಲೂ ಬಾರದಿದ್ದವರು ಪತ್ರಿಕಾ ಸಂಪಾದಕರಾದರು. ಈ ಮೂಲಕ ಹೊಸ ತಲೆಮಾರಿನ ಸಾಹಿತಿ, ಪತ್ರಕರ್ತರ ಉಗಮಕ್ಕೆ ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟ ಕಾರಣವಾಯಿತು ಎಂದು ವಿಶ್ಲೇಷಿಸಿದರು.
ಹೀಗೆ ತುರ್ತು ಪರಿಸ್ಥಿತಿಯ ಕರಾಳ ಕಾಲಘಟ್ಟದಲ್ಲಿ ಆರೆಸ್ಸೆಸ್ ಪ್ರೇರಣೆಯಿಂದ ರಾಷ್ಟ್ರಪರ ಸಾಹಿತ್ಯ, ಪತ್ರಿಕೋದ್ಯಮ ಆರಂಭವಾಯಿತು ಎಂದ ಅವರು, 1975-77ರ ಅವಧಿಯಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ದೇಶದ ಮೇಲೆ ಆಂತರಿಕ ತುರ್ತು ಪರಿಸ್ಥಿತಿ ಹೇರಿದ್ದರು.
ಅಂತಹ ಕಾಲಘಟ್ಟದಲ್ಲಿ ಪ್ರಧಾನಿ ವಿರುದ್ಧ ಯಾರೂ ಉಸಿರೆತ್ತುವಂತಿರಲಿಲ್ಲ ಎಂದು ಹೇಳಿದರು.ಕಮ್ಯುನಿಸ್ಟರು, ಸೋಷಲಿಸ್ಟರು, ಪ್ರಗತಿಪರರು, ಸಾಹಿತಿಗಳು ಬಾಲ ಮುದುರಿಕೊಂಡಿದ್ದರು. ಪತ್ರಿಕಾ ರಂಗವಂತೂ ಪ್ರಧಾನಿ ಎದುರು ತೆವಳುತ್ತಾ ಸರ್ಕಾರಕ್ಕೆ ಬಹುಪರಾಕ್ ಹೇಳುತ್ತಿತ್ತು. ಆ ಸಂದರ್ಭದಲ್ಲಿ ಭೂಗತ ಆಂದೋಲನಕ್ಕಿಳಿದಿದ್ದ ಆರೆಸ್ಸೆಸ್ ಮಾತ್ರವೇ ಜನರಿಗೆ ಆಶಾಕಿರಣವಾಗಿತ್ತು. ಸಂಘದ ಪ್ರೇರಣೆಯಿಂದ ರಾಷ್ಟ್ರೀಯ ಚಿಂತನೆಯ ಪತ್ರಿಕಾ ರಂಗ, ಸಾಹಿತ್ಯದ ಬೆಳವಣಿಗೆ ಸಾಧ್ಯವಾಯಿತು ಎಂದು ಸ್ಮರಿಸಿದರು.ಮೋದಿ ವಿರುದ್ಧ ವೀರಾವೇಶದಿಂದ ಮಾತನಾಡುವ ಜ್ಞಾನಪೀಠ ಪುರಸ್ಕøತ ಸಾಹಿತಿಗಳ ನಾಲಿಗೆಯೂ ತುರ್ತು ಪರಿಸ್ಥಿತಿ ಕಾಲದಲ್ಲಿ ಸೇದಿ ಹೋಗಿತ್ತು ಎಂಬುದನ್ನು ಯಾರೂ ಮರೆಯಲಾರರು ಎಂದು ಮಾರ್ಮಿಕವಾಗಿ ನುಡಿದರು.
ಪತ್ರಿಕಾ ಅಂಕಣಕಾರ ಜಗನ್ನಾಥ ನಾಡಿಗೇರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ ಜಿಲ್ಲಾ ಸಂಚಾಲಕ ಅಜಯ್ ಭಾರತೀಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪರಿಷತ್ತಿನ ಡಾ.ಸುಧಾಕರ ಹೊಸಳ್ಳಿ ಕಾರ್ಯಕ್ರಮ ನಿರ್ವಹಿಸಿದರು.