ನವದೆಹಲಿ
ಹವಾಮಾನ ಬದಲಾವಣೆಯ ಪರಿಣಾಮವನ್ನು ಎದುರಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದಾಗಿ ಸರ್ಕಾರ ಗುರುವಾರ ರಾಜ್ಯಸಭೆಗೆ ತಿಳಿಸಿದೆ.
ದೇಶದಲ್ಲಿ ಹವಾಮಾನ ಬದಲಾವಣೆಯಿಂದ ಎದುರಾಗಿರುವ ಪರಿಸ್ಥಿತಿ ಮತ್ತು ಈ ನಿಟ್ಟಿನಲ್ಲಿ ಸರ್ಕಾರ ಕೈಗೊಂಡ ಕ್ರಮಗಳು’ ಕುರಿತಂತೆ ಸಮಾಜವಾದಿ ಪಕ್ಷದ ರೇವತಿ ರಾಮನ್ ಸಿಂಗ್ ಮಂಡಿಸಿದ ನಿಲುವಳಿ ಸೂಚನೆಗೆ ಪ್ರತಿಕ್ರಿಯಿಸಿದ ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್, ‘ಭಾರತ, ಹವಾಮಾನ ಬದಲಾವಣೆ ಸಮಸ್ಯೆಯ ಒಂದು ಭಾಗವಲ್ಲದಿದ್ದರೂ, ಈ ಕುರಿತಂತೆ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅಲ್ಲದೆ, ರಾಷ್ಟ್ರಗಳೊಂದಿಗೆ ತೊಡಗಿಸಿಕೊಂಡಿದೆ.’ ಎಂದು ಹೇಳಿದರು.
ಹವಾಮಾನ ಬದಲಾವಣೆಯನ್ನು ನಿಭಾಯಿಸಲು ಸಚಿವಾಲಯ ಕೈಗೊಂಡ ಕ್ರಮಗಳನ್ನು ಪಟ್ಟಿ ಮಾಡಿದ ಸಚಿವರು, ‘ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆ ಕಾರ್ಯಚೌಕಟ್ಟು ನಿರ್ಣಯ ಸೇರಿದಂತೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತ ಸಕಾರಾತ್ಮಕವಾಗಿ ತೊಡಗಿಸಿಕೊಂಡಿದೆ. ಭಾರತ, ಪ್ಯಾರಿಸ್ ಒಪ್ಪಂದಕ್ಕೂ ಸಹಿ ಹಾಕಿದೆ. 2005 ರಲ್ಲಿದ್ದ ಶೇ.33ರಷ್ಟು ಜಿಡಿಪಿಯ ಹೊರಸೂಸುವಿಕೆ ತೀವ್ರತೆಯನ್ನು ಪ್ರಮಾಣವನ್ನು 2030 ರ ವೇಳೆಗೆ ಶೇ.35ಕ್ಕೆ ಇಳಿಸುವುದು ಹಾಗೂ 2030ರ ವೇಳೆಗೆ ಅಸಂಪ್ರದಾಯಿಕ ಇಂಧನ ಮೂಲಗಳಿಂದ ಶೇ 40 ರಷ್ಟು ವಿದ್ಯುತ್ ಉತ್ಪಾದಿಸುವ ನಿರ್ಣಯವನ್ನು ಭಾರತ ತೆಗೆದುಕೊಂಡಿದೆ.
ರಾಜ್ಯಗಳು ಹವಾಮಾನ ಕ್ರಿಯಾ ಯೋಜನೆಯನ್ನು ರೂಪಿಸಬೇಕಾಗಿದೆ. ಕೇಂದ್ರ ಸರ್ಕಾರ ತನ್ನ ಗುರಿಗಿಂತ ಮುಂದಿದೆ. ದೇಶದಲ್ಲಿ ಅರಣ್ಯ ವ್ಯಾಪ್ತಿ ಹೆಚ್ಚಾಗಿದೆ. ಹಳೆಯ ಬಲ್ಬ್‌ಗಳನ್ನು ಎಲ್ಇಡಿ ಬಲ್ಬ್‌ಗಳೊಂದಿಗೆ ಬದಲಾಯಿಸುತ್ತಿದ್ದೇವೆ. ಒಮ್ಮೆ ಬಳಸಿ ಬಿಸಾಡುವಂತಹ ಪ್ಲಾಸ್ಟಿಕ್ ಅನ್ನು 2022 ರ ವೇಳೆಗೆ ನಿರ್ಮೂಲನೆ ಮಾಡಲು ಸರ್ಕಾರ ಉದ್ದೇಶಿಸಿದೆ.’ ಎಂದು ಅವರು ಹೇಳಿದ್ದಾರೆ.
ಹವಾಮಾನ ಬದಲಾವಣೆ ತೀವ್ರತೆಯನ್ನು ದೇಶ ಎದುರಿಸುತ್ತಿದೆ ಎಂದು ಪ್ರಸ್ತಾಪಿಸಿದ ರೇವತಿ ರಾಮನ್ ಸಿಂಗ್ ಅವರು, ‘ಹಿಂದಿನ ವರ್ಷದ ವರೆಗೆ ನನ್ನ ಜೀವಿತಾವಧಿಯಲ್ಲಿ ಕೇರಳದಲ್ಲಿ ಪ್ರವಾಹ ಎದುರಾಗಿದ್ದನ್ನು ನಾನು ನೋಡಿರಲಿಲ್ಲ. ಚೆನ್ನೈನಲ್ಲೂ ಪ್ರವಾಹ ಉಂಟಾಗಿತ್ತು. ಇದೀಗ ಈ ನಗರ ಬರವನ್ನು ಎದುರಿಸುತ್ತಿದೆ. ಮುಂಗಾರು ಪೂರ್ವ ಮಳೆ ಉತ್ತರ ಭಾರತಕ್ಕೆ ಇನ್ನೂ ಬಂದಿಲ್ಲ. ಹಿಮಾಲಯದ ನೀರ್ಗಲ್ಲುಗಳು ಕರಗುತ್ತಿವೆ.’ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
