ಶಿರಾ:
ತಾವು 7ನೇ ತರಗತಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಸುಮಾರು 117 ವರ್ಷಗಳ ಇತಿಹಾಸ ಹೊಂದಿ ಶಿಥಿಲಾವಸ್ಥೆ ತಲುಪಿರುವ ಕ್ಷೇತ್ರ ಶಿಕ್ಷಣ ಇಲಾಖೆಯ ಮುಂಭಾಗದಲ್ಲಿಯೇ ಇರುವ ಜಿ.ಕೆ.ಎಂ.ಹೆಚ್.ಪಿ.ಬಿ.ಎಸ್. ಸರ್ಕಾರಿ ಶಾಲೆಗೆ ಶಾಸಕ ಹಾಗೂ ರಾಜ್ಯ ಸಾರಿಗೆ ನಿಗಮದ ಅಧ್ಯಕ್ಷ ಬಿ.ಸತ್ಯನಾರಾಯಣ್ ಗುರುವಾರ ಭೇಟಿ ನೀಡಿದರು.
ಸದರಿ ಶಾಲೆಯ ಸಂಪೂರ್ಣ ಆವರಣವನ್ನು, ಕೊಠಡಿಗಳನ್ನು, ಅಡುಗೆ ಕೋಣೆಗಳನ್ನು, ಸೋರುತ್ತಿರುವ ಕೊಠಡಿಗಳು, ಮಕ್ಕಳು ಕೂರುತ್ತಿರುವ ಹಳೆಯ ನೆಲಹಾಸುಗಗಳನ್ನು ಪರಿಶೀಲಿಸಿದ ಶಾಸಕರು ಶಿರಾ ನಗರಕ್ಕೆ ಅತ್ಯಂತ ಹಳೆಯ ಶಾಲೆಯಾದ ಸದರಿ ಶಾಲೆಯು ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣಗೊಂಡಿದ್ದು. ಈಗಲೂ ಸುಸಜ್ಜಿತವಾದಂತೆ ಕಂಡು ಬಂದರೂ ಶಾಲೆಯ ಒಳ ಹೊಕ್ಕು ನೋಡಿದರೆ ಕರುಳು ಚುರ್ ಅನ್ನುತ್ತದೆ. ಸದರಿ ಶಾಲೆಯ ಅಭಿವೃದ್ಧಿಗೆ ಕ್ರಿಯಾಶೀಲತೆ ವಹಿಸುವ ದೃಷ್ಠಿಯಿಂದ ಭೇಟಿ ನೀಡಿದ್ದೇನೆ ಎಂದು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಇದೇ ಶಾಲೆಯಲ್ಲಿ ಓದು ಬರಹ ಕಲಿತ ಅದೆಷ್ಟೋ ಮಂದಿ ವಿದ್ಯಾರ್ಥಿಗಳು ರಾಜ್ಯ ಹಾಗೂ ಅಂತರ ರಾಜ್ಯಚಷ್ಟೇ ಅಲ್ಲದೆ ಹೊರ ರಾಷ್ಟ್ರಗಳಲ್ಲೂ ವಿವಿಧ ಹುದ್ದೆಯಲ್ಲಿದ್ದು ಈ ಶಾಲೆಯಲ್ಲಿ ಓದಿ ಉನ್ನತ ಹುದ್ದೆಯಲ್ಲಿರುವವರು ಕೂಡಾ ಶಾಲಾ ಅಭಿವೃದ್ಧಿಗೆ ಮುಂದೆ ಬಂದಿದ್ದು ಶಾಲೆಯನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಾಮಯ್ಯ, ಶಾಲಾ ಮುಖ್ಯ ಶಿಕ್ಷಕ ಹನುಮಂತರಾಯಪ್ಪ, ನಗರಸಭೆಯ ಮಾಜಿ ಸದಸ್ಯರಾದ ಶ್ರೀಮತಿ ಶಾರದಾ ಶಿವಕುಮಾರ್, ಡಿ.ಮಂಜುನಾಥ್, ಮುದಿಮಡು ರಂಗಸ್ವಾಮಯ್ಯ, ಹೆಚ್.ಎಸ್.ಮೂಡಲಗಿರಿಯಪ್ಪ, ಸುರೇಶ್(ಪಾಯ), ಸುರೇಶ್(ಚಿಕ್ಕ), ನಿ.ಮುಖ್ಯ ಶಿಕ್ಷಕ ಹೆಚ್.ಜಿ.ರಾಮಕೃಷ್ಣಪ್ಪ, ಬಿ.ಆರ್.ನಾಗಭೂಷಣ್, ನಟರಾಜ್, ವನಿತಾ ರಂಗನಾಥ್, ಹಂದಿಕುಂಟೆ ಚಂದ್ರಶೇಖರ್, ಪುಟ್ಟಸಿದ್ಧಪ್ಪ ಯಾದವ್, ಕೆಂಚೇಗೌಡ ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
