ಹೂಳೆತ್ತುವ ಕಾಮಗಾರಿಗಳಲ್ಲಿ ಅವ್ಯವಹಾರ : ಮಸಾಲಾ ಜಯರಾಮ್

ತುರುವೇಕೆರೆ:

    ಪಟ್ಟಣದ ಹೇಮಾವತಿ ನಾಲಾ ವಿಭಾಗದ ನಾಲೆಗಳ ಹೂಳೆತ್ತುವ ಕಾಮಗಾರಿಯ ಟೆಂಡರ್‍ನಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗೆದಾದರು ಶಾಮೀಲಾಗಿ ಅವ್ಯವಹಾರ ನೆಡೆಸಿದ್ಧಾರೆ ಎಂದು ಶಾಸಕ ಮಸಾಲಾ ಜಯರಾಮ್ ಆರೋಪಿಸಿದರು.

      ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಹೇಮಾವತಿ ನಾಲೆಯ 7 ನೇ ವಿಭಾಗದಲ್ಲಿ ಗಿಡಗಂಟೆಗಳ ತೆರವು, ಹೂಳೆತ್ತುವ ಕಾಮಗಾರಿ ಮತ್ತು ಕಾಲುವೆಯ ಗೋಡೆ ನಿರ್ಮಾಣಕ್ಕೆಂದು ಸರ್ಕಾರ 5.90 ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಟೆಂಡರ್ ಕರೆಯಲಾಗಿತ್ತು. ಹೇಮಾವತಿ ನಾಲಾ ಇಂಜಿನಿಯರ್ ಗಳ ಒಳ ವ್ಯವಹಾರದಿಂದಾಗಿ ಗುತ್ತಿಗೆದಾರರು ಸುಮಾರು ಶೇಕಡಾ 52 ರಷ್ಟು ಕಡಿಮೆ ಹಣವನ್ನು ನಮೂದನೆ ಮಾಡಿದ್ದಾರೆ.

      ಅಲ್ಲದೇ ಶೇಕಡಾ 12 ರಷ್ಟು ಜಿಎಸ್‍ಟಿ ಸಹ ಕಡಿತಗೊಳ್ಳಲಿದೆ. ಹಾಗಾಗಿ ಕೇವಲ ಶೇಕಡಾ 34 ರಷ್ಟು ಹಣದಲ್ಲಿ ಉದ್ದೇಶಿತ ಕಾಮಗಾರಿ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದ್ದು ನಾಲಾ ವಿಭಾಗ 7 ರಲ್ಲಿ ನಡೆದಿರುವ ಹಲವಾರು ಕಾಮಗಾರಿಗಳು ಕಳಪೆಯಿಂದ ಕೂಡಿದೆ. ಇದರಿಂದಾಗಿ ಸರ್ಕಾರಕ್ಕೆ ಹಾಗೂ ಸಾರ್ವಜನಿಕರಿಗೆ ಲಕ್ಷಾಂತರ ರೂಪಾಯಿ ನಷ್ಠವಾಗಿದೆ ಎಂದು ದೂರಿದರು.

       ಗುತ್ತಿಗೆ ಪಡೆದಿರುವವರು ನೆಪ ಮಾತ್ರಕ್ಕೆ ಮಾತ್ರ ಕಾಮಗಾರಿ ಮಾಡಿದ್ದಾರೆ. ಸಂಸದ ಜಿ.ಎಸ್.ಬಸವರಾಜುರವರೊಂದಿಗೆ ಹೇಮಾವತಿ ನಾಲಾ ವ್ಯಾಪ್ತಿಯಲ್ಲಿ ಸಂಚಾರ ಮಾಡಿದ ವೇಳೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಕುತಂತ್ರ ಬಯಲಾಯಿತು. ತಮ್ಮ ವ್ಯಾಪ್ತಿಗೆ ಬರುವ ವಿಭಾಗ 7 ರ 70 ನೇ ಕಿಲೋ ಮೀಟರ್ ನಿಂದ 125 ರ ವರೆಗೆ ಕಾಮಗಾರಿ ವೀಕ್ಷಣೆ ಮಾಡಿದ ವೇಳೆ ಕಾಲುವೆ ಬಳಿ ಇದ್ದ ಹಲವು ಮರಗಳನ್ನು ಕಡಿದಿರುವ ಗುತ್ತಿಗೆದಾರರು ಬೆಲೆ ಬಾಳುವ ಭಾಗಗಳನ್ನು ಮಾತ್ರ ತೆಗೆದುಕೊಂಡು ಹೋಗಿದ್ದು ಉಳಿದ ರೆಂಬೆ ಕೊಂಬೆಗಳನ್ನು ಕಾಲುವೆಯಲ್ಲೇ ಬಿಟ್ಟು ಹೋಗಿದ್ದಾರೆ.

      ತಾಲೂಕಿನ ಹೆಗ್ಗರೆ ಬಳಿ ಚಾನಲ್‍ನಲ್ಲಿ ಹೂಳು ತೆಗೆಯಲಾಗಿದೆ ಎಂದು ಬೇರೆ ಕಡೆಯಿಂದ ಚಾನಲ್‍ಗೆ ಮಣ್ಣು ಸುರಿದು ಹೂಳು ತೆಗೆಯದೇ ಹೆಚ್ಚು ಮಣ್ಣನ್ನು ತುಂಬಿ ಸಮತಟ್ಟು ಮಾಡಲಾಗಿದೆ ಎಂದು ಆರೋಪಿಸಿದರು.

ಕೋಟ್ಯಾಂತರ ವಂಚನೆ :

     ತಾಲೂಕಿನ ಲೋಕಮ್ಮನಹಳ್ಳಿ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಲಾಗಿರುವ ಹೇಮಾವತಿ ನಾಲೆಯಲ್ಲಿ ಪ್ರಾರಂಭದ ದಿನದಿಂದಲೂ ಅಲ್ಲಿ ನೀರೇ ಹರಿದಿಲ್ಲ. ಆದಾಗ್ಯೂ ಸಹ ಪ್ರತಿ ವರ್ಷ ಅದರ ನಿರ್ವಹಣೆಗೆಂದು ಸುಮಾರು ಮೂವತ್ತರಿಂದ ನಲವತ್ತು ಲಕ್ಷ ರೂಗಳನ್ನು ವಿನಿಯೋಗಿಸಲಾಗಿದೆ ಎಂದು ಸುಳ್ಳು ದಾಖಲೆ ಸೃಷ್ಠಿಸಲಾಗಿದೆ. ಒಂದು ಹನಿ ನೂರು ಹರಿಯದಿದ್ದರೂ ಸಹ ಪ್ರತಿ ವರ್ಷ ಲಕ್ಷಾಂತರ ರೂಪಾಯಿಯನ್ನು ನೀರಿನಂತೆ ಖರ್ಚು ಮಾಡಲಾಗಿದೆ ಎಂದು ಆರೋಪಿಸಿದರು.

ಕ್ರಮಕ್ಕೆ ಆಗ್ರಹ:

       ಹೇಮಾವತಿ ನಾಲಾ ದುರಸ್ಥಿಯಲ್ಲಿ ಅಕ್ರಮವೆಸಗಿರುವ ಸಂಬಂಧಿಸಿದ ಇಂಜಿನಿಯರ್ ಗಳು ಮತ್ತು ಗುತ್ತಿಗೆದಾರರ ವಿರುದ್ಧ ಸೂಕ್ರ ಕ್ರಮ ಕೈಗೊಂಡು ಕೂಡಲೇ ಅವರನ್ನು ಅಮಾನತ್ತಿನಲ್ಲಿಡಬೇಕು. ಅಲ್ಲದೇ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಹಿರಿಯ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ. ತಾಲೂಕಿನಲ್ಲಿ ಹೇಮಾವತಿ ಇಲಾಖೆಯಲ್ಲಿ ಆಗಿರುವ ಕರ್ಮಕಾಂಡದ ವಿರುದ್ಧ ತಾವು ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ತಿಳಿಸಿ ಇಲಾಖೆಯಲ್ಲಿ ಆಗಿರುವ ಭ್ರಷ್ಠಾಚಾರವನ್ನು ಬಯಲಿಗೆಳೆಯುವುದಾಗಿ ತಿಳಿಸಿದರು.

       ಪತ್ರಿಕಗೋಷ್ಠಿಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ದುಂಡ ರೇಣುಕಯ್ಯ, ಎಪಿಎಂಸಿ ಸದಸ್ಯರಾದ ಕಾಂತರಾಜು, ವಿ.ಟಿ.ವೆಂಕಟರಾಮಯ್ಯ , ಪ್ರಸಾದ್, ಸಿದ್ದೇಶ್, ಯೋಗಾನಂದ್, ವಕೀಲನಾಗೇಶ್, ದೊಡ್ಡೇರಿರಾಜಣ್ಣ, ನಾಗಲಾಪುರಮಂಜಣ್ಣ, ಜಗದೀಶ್, ಬಸವರಾಜು, ಮೊದಲಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link