ಬೆಂಗಳೂರು
ಆನಂದ್ ಸಿಂಗ್, ರಮೇಶ್ ಜಾರಕಿಹೊಳಿ ರಾಜೀನಾಮೆಯಿಂದ ಕಾಂಗ್ರೆಸ್‍ನಲ್ಲಿ ಒಂದು ಕಡೆ ನಡುಕ ಆರಂಭವಾಗಿದ್ದರೆ ಮತ್ತೊಂದು ಕಡೆ ಜೆಡಿಎಸ್‍ಗೆ ಅಧಿಕಾರ ಹೋದಿತೆಂಬ ಚಿಂತೆ ಶುರುವಾಗಿದೆ. ಬಿಜೆಪಿಯಲ್ಲಿ ಸರ್ಕಾರ ರಚಿಸುವ ಹೊಸ ಹುಮ್ಮಸ್ಸು ಹುರುಪು ಪುಟಿದೇಳುತ್ತಿದೆ.
ಕ್ಷಣಕ್ಷಣಕ್ಕೂ ರಾಜಕೀಯ ಚಿತ್ರಣ ಬದಲಾಗುತ್ತಿದೆ. ರಾಜೀನಾಮೆ ನೀಡುವ ಮುಂದಿನ ಸರದಿ ಯಾರು ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಬಿರುಸುಗೊಂಡಿದೆ. ಮೈತ್ರಿ ನಾಯಕರು ಸರ್ಕಾರ ಉಳಿಸಿಕೊಳ್ಳಲು ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ. ಈ ನಡುವೆ ಬಿಜೆಪಿ ದೆಹಲಿ ನಾಯಕರು ಕಾರ್ಯಾಚರಣೆಯ ಎರಡನೇ ಹಂತದ ರೂಪುರೇಷೆಗಳನ್ನು ಸಿದ್ಧಗೊಳಿಸುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ರಾಜ್ಯದ ಜನರು ಮೈತ್ರಿ ಸರ್ಕಾರ ಇರುತ್ತದೆಯೋ, ಹೋಗುತ್ತದೆಯೋ ಎನ್ನುವ ಚರ್ಚೆಯಲ್ಲಿ ನಿರತರಾಗಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಇದ್ದಕ್ಕಿದ್ದಂತೆ ಇಂತಹದ್ದೊಂದು ದಿಢೀರ್ ಬದಲಾವಣೆಗೆ ಕಾರಣ ಏನು ಎಂಬ ಬಗ್ಗೆ ನಾನಾ ರೀತಿಯ ವ್ಯಾಖ್ಯಾನಗಳು ನಡೆಯುತ್ತಿವೆ. ದಿಢೀರ್ ಆಪರೇಷನ್ ಕಮಲ ಕಾರ್ಯಾಚರಣೆಯ ರುವಾರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಲ್ಲ. ದೂರದ ದೆಹಲಿ ನಾಯಕರ ಅಣತಿಯಂತೆ ಈ ಎಲ್ಲವೂ ನಡೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ಕಾಂಗ್ರೆಸ್‍ನ ಎರಡು ವಿಕೆಟ್ ಗಳನ್ನು ಕೆಡವಿದ್ದು ಬೇರೆ ಯಾರೂ ಅಲ್ಲ. ಬಿಜೆಪಿ ಚಾಣಾಕ್ಷ, ಕೇಂದ್ರ ಗೃಹಸಚಿವ ಅಮಿತ್ ಷಾ. ತಮ್ಮ ಆಪ್ತ ಬಂಟ ಕೇಂದ್ರ ಸಚಿವ ಪಿಯೂಷ್ ಗೋಯಲ್ ಮೂಲಕ ಈ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ್ದಾರೆ. ದೆಹಲಿ ನಾಯಕರ ಮುಂದಿನ ನಡೆ ಏನಿರಬಹುದು ಎಂಬ ಬಗ್ಗೆ ರಾಜ್ಯ ಬಿಜೆಪಿ ನಾಯಕರಿಗೂ ಸೂಕ್ತ ಮಾಹಿತಿಯಿಲ್ಲ. ಗೌಪ್ಯತೆ ಮೂಲಕ ಸದ್ದಿಲ್ಲದೇ ನಡೆಯುತ್ತಿರುವ ಈ ಬೆಳವಣಿಗೆಗಳ ಬಗ್ಗೆ ಯಾರಲ್ಲಿಯೂ ಖಚಿತತೆ ಇಲ್ಲ.
ಮೈತ್ರಿ ಸರ್ಕಾರ ರಚನೆಯಾದ ದಿನದಿಂದಲೂ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ರಾಜ್ಯ ಬಿಜೆಪಿ ನಾಯಕರು ಮಾಡುತ್ತಲೇ ಬಂದಿದ್ದರು. ಮೇ 19 2018 ರಂದು ನಡೆದ ಅಧಿವೇಶನದಲ್ಲಿ ಮೂರು ದಿನಗಳ ಮಟ್ಟಿಗೆ ಮುಖ್ಯಮಂತ್ರಿ ಹುದ್ದೆಗೇರಿದ್ದ ಯಡಿಯೂರಪ್ಪ ಅವರ ಮುಂದೆ ವಿಶ್ವಾಸಮತ ಯಾಚಿಸುವ ಪರಿಸ್ಥಿತಿ ಬಂದೊದಗಿತ್ತು. ವಿಜಯಪುರ ಶಾಸಕ ಆನಂದ್ ಸಿಂಗ್, ಅವರನ್ನು ಈ ಸಂದರ್ಭದಲ್ಲಿ ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಯತ್ನಿಸಿತ್ತು. ಆದರೆ ಸದನ ನಡೆಯುವ ಸಂದರ್ಭದಲ್ಲಿ ಎರಡು ದಿನ ಕಾಣೆಯಾಗಿದ್ದ ಆನಂದ್ ಸಿಂಗ್ ಅವರನ್ನು ಸಚಿವ ಡಿ.ಕೆ.ಶಿವಕುಮಾರ್ ರಕ್ಷಿಸುವ ಕೆಲಸ ಮಾಡಿದ್ದರು. ಪಕ್ಷ ಬಿಟ್ಟು ಹೋಗದಂತೆ ಅವರನ್ನು ಹದ್ದುಗಣ್ಣು ಇಟ್ಟು ಕಾದಿದ್ದರು. ವಿಶ್ವಾಸಮತ ಯಾಚಿಸುವ ವೇಳೆ ಶಿವಕುಮಾರ್ ಜೊತೆಗೆ ಸದನಕ್ಕೆ ಆಗಮಿಸಿ ಸಿಂಗ್ ಅಚ್ಚರಿ ಮೂಡಿಸಿದ್ದರು. ಜೊತೆಗೆ ಆಪರೇಷನ್ ಕಮಲದ ಮೊದಲ ಕಾರ್ಯಾಚರಣೆ ಮುರಿದುಬಿದ್ದಿತ್ತು.
ಆರಂಭದಲ್ಲಿಯೇ ಯಡಿಯೂರಪ್ಪ ವಿಫಲವಾಗಿದ್ದು, ಬಿಜೆಪಿ ಹೈಕಮಾಂಡ್‍ಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಕಾಂಗ್ರೆಸ್ ಜೆಡಿಎಸ್ ಶಾಸಕರನ್ನು ಮತ್ತೆ ಸೆಳೆಯುವ ಪ್ರಯತ್ನವನ್ನು ಯಡಿಯೂರಪ್ಪ ಮುಂದುವರೆಸಿದ್ದರಾದರೂ ಅದು ತಾರ್ಕಿಕ ಅಂತ್ಯ ಕಂಡಿರಲಿಲ್ಲ.
ಬಳಿಕ ಬಜೆಟ್ ಅಧಿವೇಶನ ಸಂದರ್ಭದಲ್ಲಿ ಮತ್ತೊಮ್ಮೆ ಆಪರೇಷನ್ ಕಮಲಕ್ಕೆ ಯಡಿಯೂರಪ್ಪ ಕೈಹಾಕಿ ಸೋತಿದ್ದರು. ಬಜೆಟ್ ಮಂಡನೆಗೂ ಮೊದಲು ಗೃಹಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಪರೇಷನ್ ಕಮಲದ ಆಡಿಯೋ ಬಿಡುಗಡೆ ಮಾಡುವ ಮೂಲಕ ಕಮಲ ಪಾಳಯಕ್ಕೆ ಶಾಕ್ ನೀಡಿದ್ದರು. ಗುರಮಿಠಕಲ್ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ಪುತ್ರ ಶರಣಗೌಡ ಅವರ ಜೊತೆ ಯಡಿಯೂರಪ್ಪ ಕುದುರೆ ವ್ಯಾಪಾರಕ್ಕೆ ಇಳಿದಿದ್ದು ಬಹಿರಂಗಗೊಂಡಿತ್ತು. ಇದು ಬಿಜೆಪಿ ಪಾಳಯಕ್ಕೆ ಮುಜುಗರವನ್ನುಂಟು ಮಾಡಿತ್ತು.
ಎರಡು ಬಾರಿ ಆಪರೇಷನ್ ಕಮಲ ಮಾಡುವ ಕುರಿತು ಬಿಜೆಪಿ ಹೈಕಮಾಂಡ್ ನೀಡಿದ ಸೂಚನೆ ತಂತ್ರವನ್ನು ಯಡಿಯೂರಪ್ಪ ಸರಿಯಾಗಿ ಪಾಲಿಸದೇ ವಿಫಲರಾಗಿದ್ದರು. ಕಾಂಗ್ರೆಸ್‍ನ ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ಕಳೆದೊಂದು ವರ್ಷದಿಂದಲೂ ಬಿಜೆಪಿ ತನ್ನತ್ತ ಸೆಳೆದುಕೊಳ್ಳಲು ಪ್ರಯತ್ನಿಸಿದ್ದು ಫಲ ನೀಡಿರಲಿಲ್ಲ.
ಜೊತೆಗೆ ಯಡಿಯೂರಪ್ಪ ವಿರುದ್ಧದ ಬಣವೊಂದು ರಾಜ್ಯ ಬಿಜೆಪಿಯಲ್ಲಿ ಸದ್ದಿಲ್ಲದೇ ಕೆಲಸ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಕಾರ್ಯಾಚರಣೆಯ ನೇತೃತ್ವವನ್ನು ದೆಹಲಿಯ ವರಿಷ್ಠರು ರಾಜ್ಯ ನಾಯಕರ ಕೈಗೆ ಒಪ್ಪಿಸಲು ಬಯಸಲಿಲ್ಲ. ಅದರಲ್ಲಿಯೂ ಅನಂತ್ ಕುಮಾರ್ ಅವರಿಲ್ಲದ ಈ ಸಂದರ್ಭದಲ್ಲಿ ದೆಹಲಿ ನಾಯಕರು ರೂಪಿಸಿದ ರಾಜಕೀಯ ವ್ಯೂಹವನ್ನು ಸಾಕಾರಗೊಳಿಸುವ ಜವಾಬ್ದಾರಿಯನ್ನು ಆರ್.ಎಸ್.ಎಸ್‍ನ ಸಂಘಟನಾ ಕಾರ್ಯದರ್ಶಿ ಸಂತೋಷ್‍ಗೆ ನೀಡಿದ್ದರು.
ಬಿಜೆಪಿಯಲ್ಲಿ ಸಂತೋಷ್ ಜಿ ಹಿಡಿತ ಸಾಧಿಸುತ್ತಿದ್ದರೆ ಯಡಿಯೂರಪ್ಪ ವಿಧಾನಸಭೆ ಪ್ರತಿಪಕ್ಷ ನಾಯಕ ಮತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮಾತ್ರ ಮೀಸಲಾಗುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ರಾಜ್ಯಾಧ್ಯಕ್ಷ ಅವಧಿ ಮುಗಿಯಲಿದ್ದು, ಆರ್.ಎಸ್.ಎಸ್. ಆಣತಿಯಂತೆ ಬೇರೊಬ್ಬರು ಈ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ಎರಡು ಬಾರಿ ಆಪರೇಷನ್ ಕಮಲ ವಿಫಲವಾದ ಹಿನ್ನೆಲೆಯಲ್ಲಿ ಅಮಿತ್ ಷಾ, ಇದೀಗ ರಾಜಕೀಯ ರಂಗ ಪ್ರವೇಶಿಸಿದ್ದಾರೆ. ಎಲ್ಲವನ್ನೂ ಅಳೆದುತೂಗಿ ಲೆಕ್ಕಾಚಾರ ಹಾಕಿದ ಅಮಿತ್ ಷಾ ಸದ್ಯಕ್ಕೆ ಕಾಂಗ್ರೆಸ್ ಪಕ್ಷದ ಇಬ್ಬರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸುವಲ್ಲಿ ಸಫಲರಾಗಿದ್ದಾರೆ.ಈ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿರುವ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಆನಂದ್ ಸಿಂಗ್, ರಮೇಶ್ ಜಾರಕಿಹೊಳಿ ರಾಜೀನಾಮೆ ಹಿಂದಿರುವ ವ್ಯಕ್ತಿ ಅಮಿತ್ ಷಾ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ.
ಆಪರೇಷನ್ ಕಮಲದ ಹಿಂದೆ ಅಮಿತ್ ಷಾ ಇರಬೇಕು. ಶಾಸಕರನ್ನು ರಾಜೀನಾಮೆ ಕೊಡಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಭಾಗಿಯಾಗಿದ್ದಾರೆ. ಆನಂದ್ ಸಿಂಗ್, ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿರುವುದು ನಿಜ. ಮುಂದೆ ಅವರೇನು ಮಾಡುತ್ತಾರೆ ಎನ್ನುವುದು ಗೊತ್ತಿಲ್ಲ. ಆದರೆ ಅವರು ಬಿಜೆಪಿಗೆ ಹೋಗುವುದಿಲ್ಲ ಎನ್ನುವ ಮೂಲಕ ಸಿದ್ದರಾಮಯ್ಯ, ಮೈತ್ರಿ ಸರ್ಕಾರಕ್ಕೆ ಅಪಾಯವಿಲ್ಲ ಎಂದು ಮೇಲ್ನೋಟಕ್ಕೆ ಹೇಳಿದ್ದಾರೆ. ಆದರೆ ವಾಸ್ತವ ಪರಿಸ್ಥಿತಿ ಬೇರೆಯೇ ಇದೆ.
ರಾಜೀನಾಮೆ ಸಲ್ಲಿಕೆಗೂ ಮುನ್ನ ಆನಂದ್ ಸಿಂಗ್, ದೆಹಲಿಯಲ್ಲಿ ಷಾ ಅವರನ್ನು ಭೇಟಿಯಾಗಿ, ತಮ್ಮ ಪುತ್ರನಿಗೆ ಟಿಕೆಟ್ ಖಿಚಿತ ಪಡಿಸಿಕೊಂಡ ನಂತರ ರಾಜೀನಾಮೆಗೆ ಮುಂದಾದರು. ಆನಂದ್ ಸಿಂಗ್ ರಾಜೀನಾಮೆಯ ಸುಳಿವು ಸಿಗುತ್ತಿದ್ದಂತೆ ರಮೇಶ್ ಜಾರಕಿಹೊಳಿ ಸಹ ಇದೇ ದಾರಿಯಲ್ಲಿ ಹೆಜ್ಜೆ ಹಾಕಿದರು.
ಒಟ್ಟಾರೆ ಕಳೆದೊಂದು ವರ್ಷದಿಂದ ಮೈತ್ರಿ ಸರ್ಕಾರವನ್ನು ಪತನಗೊಳಿಸಲು ರಾಜ್ಯ ನಾಯಕರಿಂದ ಸಾಧ್ಯವಾಗದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ದೆಹಲಿಯಿಂದಲೇ ಕಾರ್ಯಾಚರಣೆ ನಡೆಸುತ್ತಿದೆ. ದಕ್ಷಿಣ ಭಾರತದಲ್ಲಿ ಕರ್ನಾಟಕ ದೊಡ್ಡ ರಾಜ್ಯವಾಗಿದ್ದು, ಇದನ್ನು ವಶಪಡಿಸಿಕೊಂಡು ಕಾಂಗ್ರೆಸ್‍ಗೆ ಮತ್ತೊಂದು ಮರ್ಮಾಘಾತ ನೀಡಲು ಬಿಜೆಪಿ ನಾಯಕರು ಸಂಚು ರೂಪಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
