ಚಿತ್ರದುರ್ಗ
ಕುಟುಂತ್ತ ಸಾಗುತ್ತಿರುವ ಭದ್ರಾಮೇಲ್ದಂಡೆ ಯೋಜನೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಬರಪೀಡಿತ ಚಿತ್ರದುರ್ಗಕ್ಕೆ ಕುಡಿಯುವ ನೀರು ಹರಿಸುವಂತೆ ಒತ್ತಾಯಿಸಿ ಬುಧವಾರ ಭದ್ರಾಮೇಲ್ದಂಡೆ ವಲಯ ಯೋಜನಾ ಕಚೇರಿಗೆ ಮುತ್ತಿಗೆ ಹಾಕಿದ ವಕೀಲರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ವಕೀಲರ ಸಂಘದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಭದ್ರಾಮೇಲ್ದಂಡೆ ವಲಯ ಯೋಜನಾ ಕಚೇರಿಗೆ ತೆರಳಿದ ನೂರಾರು ವಕೀಲರು ಘೋಷಣೆಗಳನ್ನು ಕೂಗಿದರು ಯಾವ ಅಧಿಕಾರಿಯೂ ಹೊರಗೆ ಬರದ ಕಾರಣ ಕುಪಿತಗೊಂಡು ವಕೀಲರು ಪೋಲೀಸರನ್ನು ತಳ್ಳಿಕೊಂಡು ಕಚೇರಿಯೊಳಗೆ ನುಗ್ಗಿ ಅಲ್ಲಿನ ಸಿಬ್ಬಂದಿಗಳನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಾಗ ಭದ್ರಾಮೇಲ್ದಂಡೆ ವಲಯ ಯೋಜನಾ ಕಚೇರಿಯ ಇಡೀ ಸಿಬ್ಬಂದಿಯೇ ಕೆಲವು ನಿಮಿಷಗಳ ಕಾಲ ಗರಬಡಿದವರಂತೆ ನಿಂತುಬಿಟ್ಟರು.
ಕುಡಿಯುವ ನೀರಿಗೆ ಇಷ್ಟೊಂದು ಭೀಕರತೆಯಿದ್ದರೂ ನಿಗಧಿತ ಅವಧಿಯೊಳಗೆ ಭದ್ರಾಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಳಿಸಿದೆ ಚುನಾಯಿತ ಪ್ರತಿನಿಧಿಗಳು ಜನರ ಮೂಗಿಗೆ ತುಪ್ಪು ಸವರುವ ಕೆಲಸ ಮಾಡುತ್ತಾ ನೀರು ಇಂದು ಬರುತ್ತೆ ನಾಳೆ ಬರುತ್ತೆ ಎಂದೇಳಿಕೊಂಡು ವಂಚಿಸುತ್ತಿದ್ದಾರೆ. ನೀವುಗಳು ಮಾತ್ರ ಯಾವ ಸಮಸ್ಯೆಗೂ ಕಿವಿಗೊಡದೆ ಕಚೇರಿಯಲ್ಲಿ ಕುಳಿತಿರುವುದು ಯಾವ ಪುರಷಾರ್ಥಕ್ಕಾಗಿ ಎಂದು ರೊಚ್ಚಿಗೆದ್ದ ವಕೀಲರು ಭದ್ರಾಮೇಲ್ದಂಡೆ ವಲಯ ಯೋಜನಾ ಕಚೇರಿಯಲ್ಲಿ ದಾಂಧಲೆ ನಡೆಸಿದಾಗ ತಾಂತ್ರಿಕ ಸಹಾಯಕ ಬೂದಿಹಾಳ್ ಬುಳ್ಳಾಪುರ ವಕೀಲರುಗಳ ಮನವೊಲಿಸಿ ಎಲ್ಲರನ್ನು ಹೊರಗೆ ಕರೆತಂದು ಮುಖ್ಯ ಇಂಜಿನಿಯರ್ ಕರ್ತವ್ಯ ನಿಮಿತ್ತ ಹೊರಗೆ ಹೋಗಿದ್ದಾರೆ ಗಲಾಟೆ ಮಾಡಬೇಡಿ ಎಂದು ವಕೀಲರುಗಳಲ್ಲಿ ಬೇಡಿಕೊಂಡರು.
ಹಿರಿಯೂರಿನ ವಾಣಿವಿಲಾಸ ಸಾಗರದ ನೀರು ಡೆಡ್ ಸ್ಟೋರೇಜ್‍ಗೆ ತಲುಪಿರುವುದರಿಂದ ನೀರು ಲಿಫ್ಟ್ ಮಾಡಲು ಬಿಡುವುದಿಲ್ಲವೆಂದು ಅಲ್ಲಿನ ಜನ ಪ್ರತಿಭಟನೆ ನಡೆಸುತ್ತಿದ್ದಾರೆ. ಇತ್ತ ಶಾಂತಿಸಾಗರದ ನೀರು ಚಿತ್ರದುರ್ಗಕ್ಕೆ ಸರಿಯಾಗಿ ಸರಬರಾಜಾಗುತ್ತಿಲ್ಲ. ಪ್ರತಿ ವರ್ಷದಂತೆ ಈ ವರ್ಷವೂ ಮಳೆಯಿಲ್ಲದ ಕಾರಣ ಚಿತ್ರದುರ್ಗ ಜಿಲ್ಲೆ ಬರಗಾಲಕ್ಕೆ ತುತ್ತಾಗಿ ಜನ-ಜಾನುವಾರುಗಳು ಕುಡಿಯಲು ಹನಿ ನೀರಿಗೂ ಪರದಾಡುವಂತಾಗಿದೆ.
ಮಳೆ-ಬೆಳೆಯಿಲ್ಲದೆ ರೈತರು ನಷ್ಟ ಅನುಭವಿಸುವಂತಾಗಿದೆ. ಭದ್ರಾಮೇಲ್ಡಂಡೆ ಯೋಜನೆಯನ್ನು ಶೀಘ್ರವೇ ಪೂರ್ಣಗೊಳಿಸಿ ಒಂದು ತಿಂಗಳೊಳಗೆ ಚಿತ್ರದುರ್ಗಕ್ಕೆ ನೀರು ಹರಿಸದಿದ್ದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದೆಂದು ವಕೀಲರುಗಳು ಎಚ್ಚರಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಹಾಗೂ ಭದ್ರಾಮೇಲ್ದಂಡೆ ವಲಯ ಯೋಜನಾ ಕಚೇರಿ ಚೀಫ್ ಇಂಜಿನಿಯರ್‍ಗೆ ತಾಂತ್ರಿಕ ಸಹಾಯಕರ ಮೂಲಕ ಮನವಿ ನೀಡಿದರು.
ಚಿತ್ರದುರ್ಗ ವಕೀಲರ ಸಂಘದ ಅಧ್ಯಕ್ಷ ಎಸ್.ವಿಜಯಕುಮಾರ್, ಉಪಾಧ್ಯಕ್ಷ ಟಿ.ನಾಗೇಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಎಂ.ಅನಿಲ್‍ಕುಮಾರ್, ಖಜಾಂಚಿ ಪ್ರಸನ್ನಕುಮಾರ್, ಹಿರಿಯ ನ್ಯಾಯವಾದಿಗಳಾದ ಎನ್.ಜಿ.ಕೃಷ್ಣಮೂರ್ತಿ, ಡಿ.ಚಿದಾನಂದಪ್ಪ, ಯುವ ನ್ಯಾಯವಾದಿ ಅಶೋಕ್‍ಬೆಳಗಟ್ಟ, ಪಿ.ಕೆ.ಗಿರೀಶ್, ವಿರುಪಾಕ್ಷಪ್ಪ, ಬಿ.ಗಿರೀಶ್, ಕೆ.ಚಂದ್ರಶೇಖರಪ್ಪ, ಬಿ.ಪ್ರಕಾಶ್, ಟಿ.ಎಸ್.ಚಂದ್ರಶೇಖರ್, ಬಿ.ಮಂಜುಳ, ಎನ್.ಎಸ್.ಶ್ವೇತ, ದಿಲ್‍ಷಾದ್ ಉನ್ನಿಸಾ ಸೇರಿದಂತೆ ನೂರಾರು ವಕೀಲರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
