ಶಿರಾ:
ಕುರಿ ರೊಪ್ಪದಲ್ಲಿ ಕುರಿಗಳ ಹಿಂಡಿನ ಮೇಲೆ ಹತ್ತಾರು ಬೀದಿ ನಾಯಿಗಳ ಗುಂಪೊಂದು ಏಕಾಏಕಿ ದಾಳಿ ನಡೆಸಿ ಕುರಿಗಳ ಕತ್ತುಗಳನ್ನು ಕಚ್ಚಿ ಹಲ್ಲೆ ನಡೆಸಿದ ಪರಿಣಾಮ ಸುಮಾರು 30 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಬಂದಕುಂಟೆ ಗೊಲ್ಲರಹಟ್ಟಿಯಲ್ಲಿ ಬುಧವಾರ ನಡೆದಿದೆ.
ಬಂದಕುಂಟೆ ಗೊಲ್ಲರಹಟ್ಟಿಯ ರಾಜಣ್ಣ ಮತ್ತು ತಿಮ್ಮಣ್ಣ ಎಂಬುವರಿಗೆ ಸೇರಿದ ಕುರಿಗಳು ತಮ್ಮ ಕುರಿ ರೊಪ್ಪದಲ್ಲಿದ್ದಾಗ ರೊಪ್ಪದೊಳಕ್ಕೆ ನುಗ್ಗಿದ ಬೀದಿ ನಾಯಿಗಳು ಕುರಿಗಳ ಮೇಲೆ ಆಕ್ರಮಣ ನಡೆಸಿವೆ. ಅನೇಕ ಕುರಿಗಳ ಹೊಟ್ಟೆ, ಕತ್ತುಗಳನ್ನು ಕಚ್ಚಿ ಪ್ರಭಲವಾಗಿ ಘಾಸಿಗೊಳಿಸಿವೆ ಎನ್ನಲಾಗಿದೆ. ಈ ಪರಿಣಾಮ 30 ಕುರಿಗಳು ಸಾವನ್ನಪ್ಪಿವೆ.
ಎಲ್ಲಿಂದ ಬಂದ ನಾಯಿಗಳು?
ಕುರಿಗಳ ಮೇಲೆ ಇತ್ತೀಚೆಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು ಗುಂಪು ಗುಂಪಾಗಿ ಬರುವ ಈ ನಾಯಿಗಳು ಎಲ್ಲಿಂದ ಬರುತ್ತಿವೆ ಎಂಬುದರ ಬಗ್ಗೆಯೂ ಸಾರ್ವಜನಿಕರಲ್ಲಿ ಹಾಗೂ ಕುರಿಗಾಹಿಗಳಲ್ಲಿ ಆತಂಕ ಮೂಡಿಸಿದೆ. ಕೆಲವು ಸಾರ್ವಜನಿಕರು ಹೇಳುವಂತೆ ಬೆಂಗಳೂರು ಸೇರಿದಂತೆ ಕೆಲವು ನಗರ ಪ್ರದೇಶಗಳ ಬೀದಿ ನಾಯಿಗಳನ್ನು ತಂದು ಗ್ರಾಮಾಂತರ ಪ್ರದೇಶಗಳಿಗೆ ಬಿಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದ್ದು ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕುರಿಗಳು ಸಾವನ್ನಪ್ಪಿದ ಸ್ಥಳಕ್ಕೆ ಶಾಸಕ ಬಿ.ಸತ್ಯನಾರಾಯಣ್, ಜಿಲ್ಲಾ ಬಿ.ಜೆ.ಪಿ. ಉಪಾಧ್ಯಕ್ಷ ಬಿ.ಕೆ.ಮಂಜುನಾಥ್ ಸೇರಿದಂತೆ ಅನೇಕ ಪ್ರಮುಖರು ಭೇಟಿ ನೀಡಿದರು.