ಹೊನ್ನಾಳಿ:
ಮುಂದಿನ ಇಪ್ಪತ್ತು ದಿನಗಳೊಳಗೆ ಪಟ್ಟಣವನ್ನು ಹಂದಿ ಮುಕ್ತವಾಗಿಸಲು ನಿರ್ಧರಿಸಲಾಗಿದ್ದು, ಹಂದಿ ಮಾಲೀಕರು ಇದಕ್ಕೆ ಸಹಕರಿಸಬೇಕು ಎಂದು ತಹಸೀಲ್ದಾರ್ ಮತ್ತು ಪಪಂ ಆಡಳಿತಾಧಿಕಾರಿ ತುಷಾರ್ ಬಿ. ಹೊಸೂರ್ ಹೇಳಿದರು.ಪಪಂ ಸಭಾಂಗಣದಲ್ಲಿ ಗುರುವಾರ ಹಂದಿ ಮಾಲೀಕರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಪಟ್ಟಣದಲ್ಲಿ ಹಂದಿಗಳ ಸಂಖ್ಯೆ ವಿಪರೀತವಾಗಿ ಹೆಚ್ಚಾಗಿದ್ದು, ಸಾರ್ವಜನಿಕರು ತಮಗಾಗುತ್ತಿರುವ ಕಿರಿಕಿರಿಯ ಬಗ್ಗೆ ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಪಪಂ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ ಎಂದು ತಿಳಿಸಿದರು.ಹಂದಿಗಳ ಸಂಖ್ಯೆ ಹೆಚ್ಚಾಗುವುದರಿಂದ ಸಾರ್ವಜನಿಕ ಜೀವನಕ್ಕೆ ತುಂಬಾ ತೊಂದರೆಯಾಗುತ್ತಿದೆ. ಮಾರಣಾಂತಿಕ ಮೆದುಳು ಜ್ವರ, ಕಾಲರಾ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದೆ. ಪಟ್ಟಣದ ನಾಗರೀಕರ ಹಿತದೃಷ್ಟಿಯಿಂದ, ಸ್ವಚ್ಛತೆ ಕಾಪಾಡುವ ಹಿನ್ನೆಲೆಯಲ್ಲಿ ಹಂದಿ ಮಾಲೀಕರು ಇದೀಗ ನೀಡಿರುವ ಗಡುವಿನೊಳಗೆ ಹಂದಿಗಳನ್ನು ಸ್ಥಳಾಂತರಿಸಲು ಸಹಕರಿಸಬೇಕು ಎಂದು ಹೇಳಿದರು.
ಪಪಂ ಮುಖ್ಯಾಧಿಕಾರಿ ಎಸ್.ಆರ್. ವೀರಭದ್ರಯ್ಯ ಮಾತನಾಡಿ, ಈಗಾಗಲೇ ಹಂದಿ ಮಾಲೀಕರಿಗೆ ಹಂದಿಗಳನ್ನು ಸ್ಥಳಾಂತರಿಸಲು ಹಲವಾರು ಬಾರಿ ಸೂಚಿಸಲಾಗಿತ್ತು. ಆ ಸಮಯಕ್ಕೆ ಹಂದಿಗಳನ್ನು ಹೊರಗೆ ಸಾಗಿಸುತ್ತೇವೆ ಎಂದು ಒಪ್ಪಿಕೊಳ್ಳುತ್ತಿದ್ದ ಅವರು ಬಳಿಕ ಸುಮ್ಮನಾಗುತ್ತಿದ್ದರು. ಇದರಿಂದ ಪಟ್ಟಣದಲ್ಲಿ ಹಂದಿಗಳ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ, ಇದೀಗ, ಮೂರು ದಿನಗಳೊಳಗೆ ಮನೆಗಳ ಬಳಿ ಇರುವ ಹಂದಿಗಳನ್ನು ಸ್ಥಳಾಂತರಿಸಬೇಕು. ಮನೆಗಳ ಬಳಿ ಯಾರೂ ಹಂದಿಗಳನ್ನು ಸಾಕುವಂತಿಲ್ಲ. ಈ ನಿಯಮ ಮೀರಿದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಹಂದಿ ಮಾಲೀಕರು ಹಂತ ಹಂತವಾಗಿ ಮುಂದಿನ ಇಪ್ಪತ್ತು ದಿನಗಳೊಳಗೆ ಹಂದಿಗಳನ್ನು ಪಟ್ಟಣದಿಂದ ಹೊರಗೆ ಸಾಗಿಸಬೇಕು. ಈ ವಿಚಾರವಾಗಿ ಹಂದಿ ಮಾಲೀಕರೊಂದಿಗೆ ಸಭೆಯಲ್ಲಿ ಚರ್ಚಿಸಿದಾಗ ಅವರೆಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇಪ್ಪತ್ತು ದಿನಗಳ ಸಮಯಾವಕಾಶ ಕೇಳಿದ್ದು, ಲಿಖಿತ ಭರವಸೆ ನೀಡಿದ್ದಾರೆ. ಒಂದು ವೇಳೆ ಹಂದಿ ಮಾಲೀಕರು ತಮ್ಮ ಮಾತಿಗೆ ತಪ್ಪಿದಲ್ಲಿ ಹಂದಿಗಳನ್ನು ಸ್ಥಳಾಂತರಿಸಲು ಪಪಂ ವತಿಯಿಂದ ಕ್ರಮ ಜರುಗಿಸಲಾಗುವುದು ಎಂದು ವಿವರಿಸಿದರು.
ಪಟ್ಟಣದ ತುಂಗಭದ್ರಾ ಬಡಾವಣೆ, ದುರ್ಗಿಗುಡಿ ಬಡಾವಣೆ, ಮಂಡಕ್ಕಿ ಕೇರಿಗಳಲ್ಲಿ ಅಧಿಕ ಸಂಖ್ಯೆಯ ಹಂದಿಗಳು ಇವೆ. ಹಂದಿಗಳ ಹಾವಳಿ ಬಗ್ಗೆ ಹಾಗೂ ಅವುಗಳನ್ನು ಸ್ಥಳಾಂತರಿಸುವ ಬಗ್ಗೆ ಈ ಭಾಗಗಳ ಸಾರ್ವಜನಿಕರು ಪದೇ ಪದೇ ಪಪಂ ಕಾರ್ಯಾಲಯಕ್ಕೆ ಮನವಿ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಪಂ ಕಠಿಣ ಕ್ರಮಕ್ಕೆ ಮುಂದಾಗಿದೆ ಎಂದು ತಿಳಿಸಿದರು.ಪಪಂ ಆರೋಗ್ಯ ನಿರೀಕ್ಷಕ ನಾಗೇಶ್, ಚೇತನ್, ಹಿರಿಯ ಪೌರಕಾರ್ಮಿಕ ಅಂಕಣ್ಣ ಮತ್ತು ಪಪಂನ ಸಿಬ್ಬಂದಿ ಉಪಸ್ಥಿತರಿದ್ದರು.