ಚಿತ್ರದುರ್ಗ :
ಸಮಾಜದಲ್ಲಿ ಬದಲಾವಣೆ ಬಯಸಿದ್ದ ಬಸವಣ್ಣ ಅವರ ಶರಣಧರ್ಮ ಪಾಲನೆಯಿಂದ ರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಅಭಿಪ್ರಾಯ ಪಟ್ಟರು ಇಲ್ಲಿನ ಮುರುಘಾಮಠದಲ್ಲಿ ಶುಕ್ರವಾರ ಹಮ್ಮಿಕೊಳ್ಳ ಲಾಗಿದ್ದ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು 12ನೇ ಶತಮಾನ ಬಸವಣ್ಣನವರ ಆಶಯಗಳನ್ನು ಶ್ರೀಮಠ ಕಾರ್ಯಾನುಷ್ಠಾನ ಮಾಡುತ್ತ ನಾಡಿನಲ್ಲಿರುವ ಇತರ ಮಠಗಳಿಗೆ ಪ್ರೇರಣೆಯಾಗಿದೆ.
ಸಮಾಜದ ಆರ್ಥಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರಗಳ ಮೇಲೆ ಧರ್ಮದ ಪ್ರಭಾವ ಮುಖ್ಯವಾಗಿರುತ್ತದೆ. ಬಸವಣ್ಣನವರ ಈ ಶರಣಧರ್ಮವನ್ನು ಅನುಸರಿಸಿದಲ್ಲಿ ಸೂಕ್ತ, ಸಮೃದ್ಧ, ಆರೋಗ್ಯಪೂರ್ಣ ಸಮಾಜವನ್ನು ನಿರ್ಮಾಣ ಮಾಡಬಹುದು ಎಂದು ಹೇಳಿದರು
ಶ್ರೀಮಠವು ಅಂತರ್ಜಾತಿ ವಿವಾಹ, ಅಂತರ್‍ಧರ್ಮೀಯ ವಿವಾಹಗಳನ್ನು ಮಾಡುತ್ತ ಸಮಾನತೆಯನ್ನು ಸಾರುತ್ತಿದೆ. ಸಾವಿರಾರು ವಿವಾಹಗಳನ್ನು ಮಾಡುತ್ತಿರುವುದು ನಿಜವಾಗಿಯೂ ವಿಶ್ವದಾಖಲೆಯೇ ಸರಿ. ಇದು ವಿಶ್ವಕ್ಕೇ ಪ್ರೇರಣೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಡಾ.ಶಿವಮೂರ್ತಿ ಮುರುಘರಾಜೇಂದ್ರ ಶರಣರು ಮಾತನಾಡಿ, ಕಲ್ಯಾಣ ರಾಜ್ಯವೆಂದರೆ ಅದು ಕಾಯಕ ರಾಜ್ಯ. ಕಾಯಕದಿಂದಲೇ ಉದ್ಧಾರ, ಪ್ರಗತಿ, ಅಭಿವೃದ್ಧಿ. ಹಾಗಾಗಿ ಕಾಯಕದಿಂದ ನಮ್ಮ ಉದ್ಧಾರ ನಾವೇ ಮಾಡಿಕೊಳ್ಳಬೇಕು. ಆ ಮೂಲಕ ಕಲ್ಯಾಣ ರಾಜ್ಯ ನಿರ್ಮಿಸೋಣ ಎಂದು ಹೇಳಿದರು
ಪೌರಾಣಿಕ ಪದ್ಧತಿಯಲ್ಲಿ ಗಿರಿಜಾ ಕಲ್ಯಾಣ, ಪಾರ್ವತಿ ಕಲ್ಯಾಣಗಳ ಹಾಗೆ 900 ವರ್ಷಗಳ ಹಿಂದೆ ಕಲ್ಯಾಣ ರಾಜ್ಯವೊಂದಿತ್ತು. ಅಲ್ಲಿ ಕಾಯಕಕ್ಕೆ ಆದ್ಯತೆ. ಕಾಯಕದಿಂದ ಮಾತ್ರ ನಮ್ಮೆಲ್ಲರ ಪ್ರಗತಿ, ಏಳ್ಗೆ, ಉದ್ಧಾರ. ಹಾಗಾಗಿ ತಾವೆಲ್ಲರೂ ಕಾಯಕ ಮಾಡುತ್ತ ಪ್ರಜ್ಞಾಪೂರ್ವಕವಾಗಿ ಬುದ್ಧಿಪೂರ್ವಕವಾಗಿ ಸಮಾಜದಲ್ಲಿ ನಡೆದುಕೊಳ್ಳಬೇಕು. ಈ ಮೂಲಕ ಪ್ರಸ್ತುತ ಸಮಾಜದ ಸಮಸ್ಯೆಗಳನ್ನು ನಿಯಂತ್ರಿಸಬಹುದು ಎಂದು ನುಡಿದರು ದುಡಿಮೆಯೇ ಜೀವನ ಎಂದು ನಂಬಿದರೆ ನಿಮ್ಮ ಜೀವನ ನೂರಕ್ಕೆ ನೂರರಷ್ಟು ಕಲ್ಯಾಣ ಸಾಧಿಸುತ್ತದೆ, ಜೀವನ ಸಾರ್ಥಕವಾಗುತ್ತದೆ. ಕಾಲ ಇರುವುದು ಸುಮ್ಮನೆ ವ್ಯಯ ಮಾಡಲು ಅಲ್ಲ ಸಾಧನೆಗೆ, ಕಾಯಕಕ್ಕೆ ಬಳಸಿಕೊಳ್ಳಬೇಕು. ಇದು ಆಷಾಢಮಾಸ. ಅದರಲ್ಲು 32 ಜೋಡಿಗಳು ವಿವಾಹವಾಗುತ್ತಿರುವುದು ಬಸವಾದಿ ಪ್ರಮಥರ ವಿಚಾರ ಸಿದ್ಧಾಂತದ ಪ್ರಭಾವ ಎಂದು ಶರಣರು ಹೇಳಿದರು.
ಹಾಗೆಯೇ ನಾವಿಂದು ಕಾಲ ವಿಭಜನೆ ಮಾಡುವುದು ಅವೈಜ್ಞಾನಿಕ. ಎಲ್ಲವೂ ಶುಭಕಾಲ. ಯಮಗಂಡಕಾಲ, ರಾಹುಕಾಲ ಇನ್ನಿತರ ಕಾಲಗಳು ಅನರ್ಥಕಾರಿ ಆಚರಣೆಗಳು. ಹಾಗಾಗಿ ಸದಾ ಕಾಲವು ಸತ್ಕಾರ್ಯ ಮಾಡೋಣ. ಸುಖೀಜೀವನ ನಡೆಸೋಣ ಎಂದು ಶರಣರು ಹೇಳಿದರು.
ಗೌರವ ಉಪಸ್ಥಿತಿ ವಹಿಸಿದ್ದ ನರಗುಂದದ ಪಂಚಗ್ರಹಗುಡ್ಡದ ಹಿರೇಮಠದ ಶ್ರೀ ಮ.ಘ.ಚ. ಸಿದ್ಧಲಿಂಗ ಶಿವಾಚಾರ್ಯರು ಮಾತನಾಡಿ, ಶ್ರೀಮುರುಘಾಮಠವು ತನ್ನ ಅನನ್ಯ ಕಾರ್ಯಗಳಿಂದಾಗಿ ಜಗತ್ತೇ ತನ್ನ ಕಡೆ ನೋಡುವಂತೆ ಮಾಡುತ್ತಿದೆ. ಅವೈಜ್ಞಾನಿಕ ಆಲೋಚನೆಗಳಿಗೆ ಅವಕಾಶ ಕೊಡದೆ ಇಂತಹ ಆಷಾಢ ಮಾಸದಲ್ಲೂ ನಿಜಕ್ಕೂ ಅದರ್ಶವಾದ ಕಾರ್ಯಕ್ರಮ. ಮದುವೆ ಮಾಡುವಾಗ ಸಾಮಾನ್ಯ ಜನ ಮನೆ ಅಡವಿಟ್ಟು, ಹೊಲ ಮಾರಿ ಬಿಡುತ್ತಾರೆ.
ಆದರೆ ಇಂತಹ ವಿವಾಹ ಮಹೋತ್ಸವಗಳಿಂದ ಅಂತಹ ಅವಘಡಗಳಿಗೆ ಅವಕಾಶವಾಗದೆ ನೆಮ್ಮದಿಯ ಬದುಕು ಸಾಗಿಸಬಹುದು. 29 ವರ್ಷಗಳಿಂದ ಪ್ರತಿತಿಂಗಳು ತಪ್ಪದೆ ಸಾವಿರಾರು ವಿವಾಹಗಳನ್ನು ನಡೆಸಿಕೊಂಡು ಬರುತ್ತಿರುವುದರಿಂದ ಶ್ರೀ ಶಿವಮೂರ್ತಿ ಮುರುಘಾ ಶರಣರನ್ನು ಸರಳ ಸಾಮೂಹಿಕ ಮಹೋತ್ಸವದ ಪಿತಾಮಹ ಎಂದರೂ ಉತ್ಪ್ರೇಕ್ಷೆ ಅಲ್ಲ ಎಂದರು.
ಹಾಗೆಯೇ ಪ್ರಕೃತಿಯನ್ನು ಉಳಿಸಿ, ಬೆಳೆಸಿ. ಪ್ರಕೃತಿ ನಿಯಮಗಳನ್ನು ತಪ್ಪದೇ ಪಾಲಿಸಿ. ಗಿಡ ಮರಗಳನ್ನು ಹೆಚ್ಚುಹೆಚ್ಚು ಆರೈಕೆ ಮಾಡಿ ನಮ್ಮ ನೆಮ್ಮದಿಯ ಜೀವನಕ್ಕೆ ವರವಾಗುತ್ತದೆ. ಸಂಸಾರದಲ್ಲಿ ಕಷ್ಟಗಳು ಸರ್ವೇಸಾಮಾನ್ಯ ಅದಕ್ಕಾಗಿ ಬದುಕಿನಲ್ಲಿ ಕಷ್ಟಗಳೇ ಬೇಡ ಎನ್ನಬೇಡಿ. ಕಷ್ಟಗಳನ್ನು ಎದುರಿಸುವ ಶಕ್ತಿಯನ್ನು ಜಾಣ್ಮೆಯನ್ನು ಬೆಳೆಸಿಕೊಳ್ಳಿ ಎಂದು ಅವರು ನುಡಿದರು.
ಇದೇ ಸಂದರ್ಭದಲ್ಲಿ ಶ್ರೀಮಠಕ್ಕೆ ಅನಾಥ ಮಗುವಾಗಿ ಬಂದಿದ್ದ ಕುಮಾರಿ ನಿಜಗುಣಿ ಇವರು ರಮೇಶ್ ಅವರನ್ನು ವಿವಾಹವಾದರು. ಹಾಗೆಯೇ ಗುಜ್ಜಾರ್ ಸಮುದಾಯದ ವರ ಮುಸ್ಲಿಂ ವಧುವನ್ನು ಕೈ ಹಿಡಿದಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.ಚಿತ್ರದುರ್ಗದ ಅಪರ ಜಿಲ್ಲಾಧಿಕಾರಿಗಳಾದ ಸಂಗಪ್ಪ, ಚಿತ್ರದುರ್ಗ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕ ಆನಂದ್, ಕಪ್ಪತ್ತಗುಡ್ಡದ ಶ್ರೀ ಚನ್ನವೀರ ಸ್ವಾಮಿಗಳು, ದಾಸೋಹ ಸೇವಾರ್ಥಿಗಳಾದ ಶ್ರೀಮತಿ ಟಿ.ಪಿ.ಈರಮ್ಮ ಅವರ ಪುತ್ರ ವಿರೇಶ್ ವೇದಿಕೆಯಲ್ಲಿದ್ದರು.
ಇದೇ ಸಂದರ್ಭದಲ್ಲಿ ಶಿರಸಿ ರುದ್ರದೇವರ ಮಠದ ಮಲ್ಲಿಕಾರ್ಜುನ ಸ್ವಾಮಿಗಳು, ನಾಗಗೊಂಡನಹಳ್ಳಿಯ ಬಸವಕಿರಣ ಸ್ವಾಮಿಗಳು, ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮಿಗಳು, ಮಾತೆ ಮುಕ್ತಾಯಕ್ಕ, ವಿಧಾನಪರಿಷತ್ ಸದಸ್ಯೆ ಶ್ರೀಮತಿ ಜಯಮ್ಮ ಬಾಲರಾಜ್, ಕೆಇಬಿ ಷಣ್ಮುಖಪ್ಪ, ಪೈಲ್ವಾನ್ ತಿಪ್ಪೇಸ್ವಾಮಿ, ಫಾತ್ಯರಾಜನ್, ಜಗದೀಶ್, ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ ಹಾಗೂ ಎನ್. ತಿಪ್ಪಣ್ಣ ಇತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
