ಇಲಾಖೆಗಳ ಸಮನ್ವಯತೆ ಕೊರತೆಯಿಂದ ಅಕ್ಕತಂಗಿ ಕೆರೆ ಅಧ್ವಾನ

ತುಮಕೂರು

    ಹತ್ತಾರು ವರ್ಷಗಳಿಂದ ಸಮಸ್ಯೆಯಾಗಿ ಕಾಡುತ್ತಿರುವ ನಗರದ ಅಕ್ಕ ತಂಗಿ ಕೆರೆ ಅಂಗಳದ ಯುಜಿಡಿ ಅವಾಂತರಕ್ಕೆ ಸದ್ಯಕ್ಕೆ ಮುಕ್ತಿ ದೊರೆಯುವಂತಿಲ್ಲ. ಸಂಬಂಧಿಸಿದ ಇಲಾಖೆ ಅಧಿಕಾರಿಗಳಲ್ಲಿನ ಸಮನ್ವಯ ಕೊರತೆ ಹಾಗೂ ಸಮಸ್ಯೆ ಬಗೆ ಹರಿಸಬೇಕೆಂಬ ಕಾಳಜಿ ಇಲ್ಲದಿರುವುದು ಇದಕ್ಕೆ ಕಾರಣ.

    ನಗರ ಮಧ್ಯದ ಈ ಕೆರೆ ಅಂಗಳವನ್ನು ಅಭಿವೃದ್ಧಿಪಡಿಸಲು ಕಂದಾಯ ಇಲಾಖೆಯು 15 ವರ್ಷಗಳ ಹಿಂದೆ ಅರಣ್ಯ ಇಲಾಖೆಗೆ ಹಸ್ತಾಂತರಿಸಿತು. ಆದರೆ, ಹಸ್ತಾಂತರದ ವೇಳೆ ನಿಡಬೇಕಾಗಿದ್ದ ಪೂರ್ಣ ದಾಖಲಾತಿಗಳನ್ನು ಕಂದಾಯ ಇಲಾಖೆ ನೀಡದಿರುವುದು ಕೂಡ ಇಂದಿನ ಸಮಸ್ಯೆಗೆ ಕಾರಣವಾಗಿದೆ.

     ಸುಮಾರು 90 ಎಕರೆ ಪ್ರದೇಶದ ಕೆರೆ ಅಂಗಳದಲ್ಲಿ ದಾಖಲಾತಿಗಳು ಸಮರ್ಪಕವಾಗಿರುವ ಸರ್ವೆ ನಂಬರ್‍ಗಳ ಜಮೀನಿನಲ್ಲಿ ಅರಣ್ಯ ಇಲಾಖೆ ಸಾರ್ವಜನಿಕ ಉದ್ಯಾನವನ ಅಭಿವೃದ್ಧಿ ಮಾಡುತ್ತಿದೆ. ಆದರೆ, ಕೆರೆಯ ಪಶ್ಚಿಮ ಭಾಗದ ವಿದ್ಯಾನಗರ ಪಕ್ಕದ ಜಮೀನಿನ ಗಡಿ ನಿಗಧಿಯ ನಕ್ಷೆ ಮತ್ತಿತರ ದಾಖಲಾತಿಗಳನ್ನು ಕಂದಾಯ ಇಲಾಖೆ ಅರಣ್ಯ ಇಲಾಖೆಗೆ ಈವರೆಗೂ ನೀಡಿಲ್ಲ.

      ಈ ಜಮೀನನ್ನು ಎರಡೂ ಇಲಾಖೆಗಳು ಜಂಟಿ ಸರ್ವೆ ಮಾಡಿ ಗಡಿ ಗುರುತಿಸಬೇಕಾಗಿದೆ. ಸರ್ವೆ ಮಾಡುವಂತೆ ಕೋರಿ ಅರಣ್ಯ ಇಲಾಖೆ ಹಲವು ವರ್ಷಗಳಿಂದ ಕಂದಾಯ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದು ಕೋರಿದ್ದರೂ ಅವರಿಂದ ಸ್ಪಂದನೆ ಇಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

      ಆಮೀನಿನ ಗಡಿ ಗುರುತಿಸದೆ, ನಕಾಶೆ ಮತ್ತಿತರ ಪೂರಕ ದಾಖಲಾತಿಗಳನ್ನು ಪಡೆಯದೆ ಈ ಜಾಗದಲ್ಲಿ ಅಭಿವೃದ್ಧಿ ಕಾಮಗಾರಿ ಆರಂಭಿಸಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿಗಳೇ ಕ್ರಮ ತೆಗೆದುಕೊಳ್ಳಬೇಕು ಎಂದು ಅರಣ್ಯಾಧಿಕಾರಿಗಳ ಹೇಳುತ್ತಾರೆ.

       ಆದರೆ, ಕೆರೆಯ ಈ ಭಾಗದ ಅಂಗಳ ಖಾಸಗಿಯವರಿಂದ ಒತ್ತೂವರಿಯಾಗಿದೆ. ಸರ್ವೆ ಮಾಡಿ ದಾಖಲಾತಿ ಪರಿಶೀಲಿಸಿದರೆ ಒತ್ತೂವರಿಯಾಗಿರುವುದು, ಅದಕ್ಕೆ ಅವಕಾಶ ಮಾಡಿಕೊಟ್ಟ ಅಧಿಕಾರಿಗಳಾರು ಎಂಬ ವಿಚಾರ ಬಯಲಾಗುತ್ತದೆ. ಆಗ ಒತ್ತೂವರಿ ಜಾಗ ತೆರವು ಮಾಡಬೇಕಾದ ಪರಿಸ್ಥಿತಿ ಬರುತ್ತದೆ. ಹೀಗಾಗಿ ಅಲ್ಲಿ ಒತ್ತೂವರಿ ಮಾಡಿರುವವರು ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಸರ್ವೆ ಮತ್ತಿತರ ಮುಂದಿನ ಕೆಲಸ ಆಗದಂತೆ ತಡೆಹಿಡಿದಿದ್ದಾರೆ ಎಂದು ಸ್ಥಳೀಯರು ಆಪಾದನೆ ಮಾಡುತ್ತಾರೆ.

         ಆಯಾ ಇಲಾಖೆಗಳ ಅಧಿಕಾರಿಗಳಿಗೆ ವಿಷಯ ತಿಳಿದಿದ್ದರೂ ವಿವಾದವನ್ನು ಯಾಕೆ ಮೈಮೇಲೆ ಎಳೆದುಕೊಳ್ಳಬೇಕು ಎಂದು ಯಾವ ಪ್ರಯತ್ನವನ್ನೂ ಮಾಡದೆ ಬಂದವರೆಲ್ಲಾ ವರ್ಗಾವಣೆಯಾಗಿ ಹೋಗಿದ್ದಾರೆ. ಹೀಗಾಗಿ ಅಕ್ಕ ತಂಗಿ ಕೆರೆ ಅಂಗಳದ ಈ ಜಾಗ ದಿಕ್ಕುದೆಸೆ ಇಲ್ಲದೆ ಅಧ್ವಾನಗೊಂಡು ಯಾವುದೇ ಅಭಿವೃದ್ಧಿ ಮಾಡಲಾಗಿಲ್ಲ.

        ಈ ಕಾರಣಕ್ಕೆ ನಗರ ಪಾಲಿಕೆಯವರೂ ಇಲ್ಲಿ ಒಳಚರಂಡಿಯ ಹೆಚ್ಚುವರಿ ಕಾಮಗಾರಿ ಆರಂಭಿಸಲಾಗುತ್ತಿಲ್ಲ. ಇಲ್ಲಿರುವ ಎರಡು ಮ್ಯಾನ್ ಹೋಲ್‍ಗಳು ಕಟ್ಟಿಕೊಂಡು ಕೊಳಚೆ ತುಂಬಿ ದುರ್ವಾಸನೆ ಬೀರುತ್ತಿವೆ, ಯುಜಿಡಿಗೆ ಪರ್ಯಾಯ ಪೈಪ್ ಲೈನ್ ಅಳವಡಿಸಬೇಕಾಗಿದ್ದು, ಆ ಕೆಲಸವನ್ನೂ ಇಲ್ಲಿ ಸಾಧ್ಯವಾಗುತ್ತಿಲ್ಲ.

       ಕೆರೆ ಅಂಗಳದ ಎಲ್ಲಾ ದಾಖಲಾತಿಗಳನ್ನು ನೀಡಿದ ನಂತರ ಪರಿಶೀಲಿಸಿ, ಅಲ್ಲಿ ಒತ್ತೂವರಿ ಆಗಿದ್ದರೆ ಅರಣ್ಯ ಇಲಾಖೆ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸುತ್ತದೆ. ಅಲ್ಲಿ ಕಸ ಹಾಕುವುದನ್ನು ತಡೆಯಲು ಫೆನ್ಸಿಂಗ್ ಮಾಡಿ, ಸಾರ್ವಜನಿಕ ಉದ್ಯಾನವನವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಮಹೇಶ್ ಮಾಲಗತ್ತಿ ಹೇಳಿದರು.

        ಅಕ್ಕ ತಂಗಿ ಕೆರೆ ಅಂಗಳದ ಯುಜಿಡಿ ಸಮಸ್ಯೆ ಬಗ್ಗೆ ತಿಳಿದಿದೆ, ಏನೇ ಮಾಡಲು ಕಂದಾಯ ಇಲಾಖೆ ಜಮೀನಿನ ದಾಖಲಾತಿ ನೀಡಬೇಕು. ಇಲ್ಲಿ ಯುಜಿಡಿ ದುರಸ್ಥಿ ಕಾಮಗಾರಿ ಕೈಗೊಳ್ಳುವ ಕುರಿತು ನಗರ ಪಾಲಿಕೆಯಿಂದ ಅರಣ್ಯ ಇಲಾಖೆಗೆ ಈವರೆಗೂ ಯಾವುದೇ ಪ್ರಸ್ತಾವನೆ ಬಂದಿಲ್ಲ. ಬಂದ ನಂತರ ಆ ಬಗ್ಗೆ ಪರಿಶೀಲಿಸಬಹುದು. ಯುಜಿಡಿ ಸಾರ್ವಜನಿಕ ಉದ್ದೇಶದ ಯೋಜನೆಯಾಗಿರುವ ಕಾರಣ ಅನುಮತಿ ನೀಡಲು ಅವಕಾಶವಿದೆ ಎಂದು ಆರ್ ಎಫ್ ಓ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link