ಬೆಂಗಳೂರು
ರೈಡ್ ಶೇರಿಂಗ್ ಬೈಕ್‍ಗಳನ್ನು ಬಳಸಿ ನಮಗೆ ವ್ಯಾಪಾರ ನಡೆಯದಂತೆ ಮಾಡುತ್ತಿದ್ದೀರಾ ಎಂದು ಆಕ್ರೋಶಗೊಂಡು ಸಾಫ್ಟ್‍ವೇರ್ ಇಂಜಿನಿಯರ್ ಮೇಲೆ ಹಲ್ಲೆ ನಡೆಸಿರುವ ಆಟೋ ಚಾಲಕನಿಗಾಗಿ ವೈಟ್ ಫೀಲ್ಡ್ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.
ವೈಟ್ ಫೀಲ್ಡ್ ನಲ್ಲಿನ ದಿವ್ಯಶ್ರೀ ಟೆಕ್ನೋ ಪಾರ್ಕ್ ಬಳಿ ಬುಧವಾರ 4.30ರ ವೇಳೆ ಸಾಫ್ಟ್‍ವೇರ್ ಇಂಜಿನಿಯರ್ ರಾಹುಲ್, ಯೂಲು ಬೈಕನ್ನು ನಿಲುಗಡೆಗೆ ಮೀಸಲಿಟ್ಟ ಯೂಲು ಝೋನ್‍ನಲ್ಲಿ ನಿಲ್ಲಿಸುತ್ತಿದ್ದಾಗ ಹಿಂದಿನಿಂದ ಬಂದ ಆಟೊ ಚಾಲಕನೊಬ್ಬ ಏಕಾಏಕಿ ಅವರ ಕುತ್ತಿಗೆ ಪಟ್ಟಿ ಹಿಡಿದು ಏಕೆ ಇಲ್ಲಿ ಬೈಕ್ ನಿಲ್ಲಿಸುತ್ತ್ತಿದ್ದೀಯ ಎಂದು ಜಗಳ ತೆಗೆದಿದ್ದಾನೆ.
ಹಿಂದಿಯಲ್ಲಿ ರಾಹುಲ್ ಪ್ರತಿಕ್ರಿಯಿಸಿದ್ದನ್ನು ಕಂಡು ಕೋಪಗೊಂಡ ಚಾಲಕ ರೈಡ್ ಶೇರಿಂಗ್ ಬೈಕ್ ಬಳಸಿ,ನಮ್ಮ ವ್ಯಾಪಾರ ಕಸಿದುಕೊಳ್ಳುತ್ತಿದ್ದೀರ ಎಂದು ಪ್ರಶ್ನಿಸಿದ್ದಾನೆ.ಇದು ಯೂಲು ಬೈಕ್ ಪಾರ್ಕ್ ಮಾಡುವ ಜಾಗ ಹೌದೋ ಅಲ್ಲವೊ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ರಾಹುಲ್ ಬೈಕ್ ಕಂಪನಿ ಪ್ರತಿನಿಧಿಗೆ ಕರೆ ಮಾಡಲು ಮುಂದಾದಾಗ, ಕೆನ್ನೆಗೆ ಹೊಡೆದು, ಮೊಬೈಲ್ ಕಿತ್ತೆಸೆದು ಕೆಳಗೆ ತಳ್ಳಿದ್ದಾನೆ.
ದಾರಿಯಲ್ಲಿ ಬರುತ್ತಿದ್ದ ಇಬ್ಬರು ಮಹಿಳೆಯರು ರಾಹುಲ್ ಸಹಾಯಕ್ಕೆ ಬಂದು ಪೊಲೀಸರಿಗೆ ಕರೆ ಮಾಡಲು ಮುಂದಾದಾಗ, ಅವರನ್ನು ಬೆದರಿಸಿ ದೂರ ಸರಿಯುವಂತೆ ಮಾಡಿದಾಗ ಟೆಕ್ ಪಾರ್ಕ್‍ನ ಭದ್ರತಾ ಸಿಬ್ಬಂದಿ ಬಂದು ರಾಹುಲ್ ಅವರನ್ನು ಒಳಗೆ ಕರೆದುಕೊಂಡು ಹೋಗಿದ್ದಾರೆ.
ಘಟನೆಯಿಂದ ಆತಂಕಗೊಂಡಿರುವ ರಾಹುಲ್ ನಗರವನ್ನು ಬಿಟ್ಟುಹೋಗುವುದಾಗಿ ಹೇಳಿಕೊಂಡಿದ್ದಾರೆ. ಈ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈಟ್ ಫೀಲ್ಡ್ ಪೊಲೀಸರು ಗಮನಿಸಿ ಪ್ರಕರಣವನ್ನು ಕೈಗೆತ್ತಿಕೊಂಡಿದ್ದಾರೆ.
ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಈ ರೀತಿಯ ಘಟನೆಗಳು ಮುಂದೆ ನಡೆಯದಂತೆ ತಡೆಯಬೇಕು. ಇದು ಬೆಂಗಳೂರು ನಗರಕ್ಕೆ ಕೆಟ್ಟ ಹೆಸರು ತರುತ್ತದೆ ಎಂದು ಯೂಲು ಬೈಕ್‍ನ ಸಹಸಂಸ್ಥಾಪಕ ಆರ್‍ಕೆ ಮಿಶ್ರಾ ಪ್ರತಿಕ್ರಿಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








