ವೈ.ಎನ್.ಹೊಸಕೋಟೆ
ಸರ್ಕಾರ ರಿಯಾಯಿತಿ ದರದಲ್ಲಿ ವಿತರಿಸುತ್ತಿರುವ ಬಿತ್ತನೆ ಶೇಂಗಾ ಕಾಳಸಂತೆಯಲ್ಲಿ ಹಣ ಮಾಡುವ ದಂಧೆಯಾಗಿ ಮಾರ್ಪಟ್ಟು ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಕೆಲವು ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶೇಂಗಾ ಬಿತ್ತನೆ ಕಾಲ ಮುಗಿಯುತ್ತಿದ್ದು, ರೈತರು ಬಿತ್ತನೆ ಶೇಂಗಾ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಕಚೇರಿಗಳಿಗೆ ತಿರುಗಿ ದಾಖಲೆಗಳನ್ನು ಸಂಗ್ರಹಿಸಿ ಸರತಿ ಸಾಲಿನಲ್ಲಿ ನಿಂತು ಬಿತ್ತನೆ ಶೇಂಗಾ ಪಡೆಯುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಹಣ ಮಾಡುವ ದಂಧೆ ಕೋರರು ಅನ್ಯ ಮಾರ್ಗಗಳ ಮೂಲಕ ಬಿತ್ತನೆ ಶೇಂಗಾ ಪಡೆದು ಆಂಧ್ರಪ್ರದೇಶಕ್ಕೆ ಮತ್ತು ಶೇಂಗಾ ವ್ಯಾಪಾರಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಮೂಲಕ ಹಣ ಮಾಡುತ್ತಿದ್ದಾರೆ.
ಇದರಿಂದ ಒಂದು ಕಡೆ ರೈತರಿಗೆ ಮತ್ತೊಂದು ಕಡೆ ಸರ್ಕಾರಕ್ಕೆ ನಷ್ಟವಾಗುತ್ತಿದೆ. ಆಂಧ್ರ ಮತ್ತು ಕರ್ನಾಟಕದ ನಡುವೆ ಯಾವುದೇ ಚೆಕ್ ಪೋಸ್ಟ್ ಇಲ್ಲದ ಕಾರಣ ದಂಧೆಕೋರರಿಗೆ ಮತ್ತಷ್ಟು ಸುಲಭ ಸಾಧ್ಯವಾಗುತ್ತಿದೆ. ರಾತ್ರೋ ರಾತ್ರಿ ಖಾಸಗಿ ಗೋದಾಮುಗಳಿಗೆ ಶೇಂಗಾ ಹೋಗುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿವೆ.
ಇಷ್ಟೆಲ್ಲಾ ನಡೆಯುತ್ತಿದ್ದರೂ ಯಾವೊಬ್ಬ ಅಧಿಕಾರಿಯೂ ಇಂತಹ ಚಟುವಟಿಕೆಗಳನ್ನು ತಡೆಯುತ್ತಿಲ್ಲ. ಇದು ಅಧಿಕಾರಿಗಳ ಬೇಜವಾಬ್ದಾರಿ ಯೋ ಅಥವಾ ಜಾಣ ಕುರುಡುತನವೋ ಅರ್ಥವಾಗುತ್ತಿಲ್ಲ. ಇದೇ ರೀತಿ ಬಿತ್ತನೆ ಶೇಂಗಾ ಖಾಸಗಿಯವರ ಪಾಲಾದರೆ ರೈತರು ವಿಧಿ ಇಲ್ಲದೆ ಧರಣಿ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
