ಮಧುಗಿರಿ:
ದೊಡ್ಡದಾಳವಟ್ಟ ಶ್ರೀಲಕ್ಷ್ಮೀನರಸಿಂಹಸ್ವಾಮಿ ಅತಿಶಕ್ತಿಯುಳ್ಳ ದೈವವಾಗಿದ್ದು ತಾಲ್ಲೂಕಿಗೆ ಉತ್ತಮ ಮಳೆ ಬೆಳೆ ಕರುಣಿಸಲೆಂದು ಪ್ರಾರ್ಥಿಸಿರುವುದಾಗಿ ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ತಾಲ್ಲೂಕಿನ ಐಡಿಹಳ್ಳಿ ಹೋಬಳಿಯ ದೊಡ್ಡದಾಳವಟ್ಟ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿಯ ಬ್ರಹ್ಮ ರಥೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ತಾಲ್ಲೂಕು ಸತತವಾಗಿ ಬರಗಾಲಕ್ಕೇ ತುತ್ತಾಗಿದೆ. ಅಂತರ್ಜಲ ಮಟ್ಟ ಕುಸಿದು ರೈತ ಸಂಕಷ್ಟದಲ್ಲಿದ್ದಾನೆ ಈ ಬಾರಿ ಮಳೆ ಸಂವೃದ್ಧಿಯಾಗಿ ಬೆಳೆಯಾಗುತ್ತದೆ ಎಂಬ ನಂಬಿಕೆ ಇದೆ.
ಐತಿಹಾಸಿಕ ಹಿನ್ನೆಲೆಯುಳ್ಳ ದೇವಾಲಯಕ್ಕೆ ಕರ್ನಾಟಕ ಸೇರಿದಂತೆ ಆಂಧ್ರ ಮತ್ತು ತಮಿಳುನಾಡಿನಿಂದ ಭಕ್ತರು ಆಗಮಿಸಿದ್ದು ಸುಮಾರು 20 ಸಾವಿರಕ್ಕೂ ಹೆಚ್ಚು ಭಕ್ತರು ದೇವರ ದರ್ಶನ ಪಡೆಯುತ್ತಿದ್ದಾರೆ. ಸರಕಾರದ ವಿರುದ್ಧ ಅನೇಕ ಆರೋಪಗಳು ಕೇಳಿ ಬರುತ್ತಿವೆ ಆದರೂ ಸರಕಾರ ಸುಭದ್ರವಾಗಿದೆ ವಿರೋಧ ಪಕ್ಷದವರು ಅವಿಶ್ವಾಸ ತರುವ ಮುನ್ನವೆ ನಮ್ಮ ಮುಖ್ಯ ಮಂತ್ರಿಗಳೆ ವಿಶ್ವಾಸ ಮತಗಳನ್ನು ಕೇಳಲು ಸಿದ್ದರಿದ್ದಾರೆ. ಸ್ವೀಕರ್ ನಿಗಧಿಪಡಿಸುವಂತಹ ದಿನಾಂಕದಂದು ವಿಶ್ವಾಸ ಮತ ಯಾಚಿಸಲಿದ್ದಾರೆ.
ಹೊಸದಾಗಿ ದೇವಾಲಯ ನಿರ್ಮಾಣ ಮಾಡಲು ಸರಕಾರದ ಅನುಮತಿ ಬೇಕಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ಈಗಾಗಲೇ ಮೂಲಭೂತ ಸೌಕರ್ಯಕ್ಕಾಗಿ ರೂ 50 ಲಕ್ಷ ಮಂಜೂರಾಗಿದೆ. ಮುಂದಿನ ದಿನಗಳಲ್ಲಿ ದೇವಾಲಯದ ಅಭಿವೃದ್ಧಿಗೆ ಇನ್ನೂ ಹೆಚ್ಚು ಒತ್ತು ನೀಡಲಾಗುವುದು ಎಂದರು.
ಜಾತ್ರಮಹೋತ್ಸವದಲ್ಲಿ ಆದೋನಿಯ ಶಂಕರಾನಂದ ಸರಸ್ವತಿ ಮಹಾ ಸಂಸ್ಥಾನ ಪೀಠಾಧ್ಯಕ್ಷ ಶ್ರೀ ವಿದ್ಯಾಭಿನವ ಸುಬ್ರಮಣ್ಯ ಭಾರತಿ ಸ್ವಾಮಿ, ಪುರಸಭಾ ಸದಸ್ಯ ಎಂ.ಆರ್.ಜಗನ್ನಾಥ್, ತಹಶೀಲ್ದಾರ್ ನಂದೀಶ್, ಗ್ರಾಮಲೆಕ್ಕಿಗರಾದ ಶಿವರಾಮ್, ಜಗದೀಶ್, ರವಿಕುಮಾರ್, ಶೈಲಿರವೀಶ್, ಪ್ರಧಾನ ಅರ್ಚಕರಾದ ಮಧುಸೂದನ್ ಭಟ್, ಸಿಪಿಐ ದಯಾನಂದ್ ಶೇಗುಣಸಿ, ಸಾವಿರಾರು ಭಕ್ತಾಧಿಗಳು ಇದ್ದರು.