ಶಿರಾ:
ತುಮಕೂರು ಸಾರಿಗೆ ಪ್ರಾಧೇಶಿಕ ಕಛೇರಿ ವ್ಯಾಪ್ತಿಗೆ ಇದ್ದ ಶಿರಾ ತಾಲ್ಲೂಕನ್ನು ಏಕಾಏಕಿ ರಾಜ್ಯ ಸಾರಿಗೆ ಇಲಾಖೆಯು ಮಧುಗಿರಿ ಪ್ರಾದೇಶಿಕ ಸಾರಿಗೆಗೆ ಸೇರ್ಪಡೆ ಮಾಡಿರುವುದರ ವಿರುದ್ಧ ಕನ್ನಡ ಪರ ಸಂಘಟನೆಗಳು, ಶಿರಾ ಜಿಲ್ಲಾ ಹೋರಾಟ ಸಮಿತಿ, ವಾಹನ ಚಾಲಕರು, ಆಟೋ ಚಾಲಕರ ಸಂಘ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ದಲಿತ ಮುಖಂಡ ಹಾಗೂ ಶಿರಾ ಜಿಲ್ಲಾ ಹೋರಾಟ ಸಮಿತಿಯ ಜೆ.ಎನ್.ರಾಜಸಿಂಹ ಹೇಳಿದರು.
ಶಿರಾ ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜಸಿಂಹ ಅವರು ಶಿರಾ ತಾಲ್ಲೂಕಿನ ವಾಹನ ಚಾಲಕರು, ಆಟೋ ಚಾಲಕರನ್ನು ಒಂದು ರೀತಿಯ ಪುಟ್ಬಾಲ್ ಚೆಂಡಿನಂತೆ ಜನಪ್ರತಿನಿಧಿಗಳು ಮಾಡಿಕೊಂಡಿದ್ದು ಜನಪ್ರತಿನಿಧಿಗಳ ತಾಳಕ್ಕೆ ತಕ್ಕಂತೆ ಸರ್ಕಾರವು ಕುಣಿಯುವಂತಾಗಿದೆ.
ಈ ಹಿಂದೆ ಮಧಿಗಿರಿ ವ್ಯಾಪ್ತಿಯಲ್ಲಿದ್ದ ಸಾರಿಗೆ ಪ್ರಾದೀಶಕ ಕಛೇರಿಯನ್ನು ಜಿಲ್ಲಾ ಕೇಂದ್ರಕ್ಕೆ ವರ್ಗಾವಣೆ ಮಾಡಿದ್ದು ಸ್ವಾಗತಾರ್ಹವಾದರೂ ಇದೀಗ ಜು:9 ರಂದು ಏಕಾಏಕಿ ಸರ್ಕಾರ ಪುನಃ ಮಧುಗಿರಿಗೆ ವರ್ಗಾವಣೆ ಮಾಡಿರುವುದು ಸರಿಯಲ್ಲ ಎಂದರು.ಶಿರಾ ತಾಲ್ಲೂಕು ಕೇಂದ್ರ ಹೆದ್ದಾರಿಗೆ ಹೊಂದಿಕೊಮಡಿದ್ದು ವಾಹನ ವಾಲಕರು ಜಿಲ್ಲಾ ಕೇಂದ್ರಕ್ಕೆ ವಾಹನ ಪರವಾನಗಿ ಸೇರಿದಂತೆ ಹಲವು ಕಾರ್ಯಗಳಿಗೆ ಹೋಗಿ ಬರಲು ತುಮಕೂರು ಸೂಕ್ತವಾಗಿದೆ. ಆದರೆ ದಿಢೀರನೆ ಮಧುಗಿರಿಗೆ ವರ್ಗಾಯಿಸಿದ್ದನ್ನು ನಾವೂ ತೀವ್ರವಾಗಿ ಖಂಡಿಸುತ್ತೇವೆ ಎಂದರು.
ಆಟೋ ಚಾಲಕರ ಸಂಘದ ಅಧ್ಯಕ್ಷ ಸಿದ್ದೇಶ್ವರ ಮಾತನಾಡಿ ಈ ಹಿಂದೆ ಮಧುಗಿರಿಯಲ್ಲಿದ್ದ ಪ್ರಾದೇಶಿಕ ಸಾರಿಗೆ ಕಛೇರಿಯನ್ನು ಜಿಲ್ಲಾ ಕೇಂದ್ರಕ್ಕೆ ವರ್ಗಾವಣೆ ಮಾಡಲು ಹೋರಾಟವನ್ನೇ ರೂಪಿಸಲಾಗಿತ್ತು ಪರಿಣಾಮ ಸರ್ಕಾರ ಜಿಲ್ಲಾ ಕೇಂದ್ರಕ್ಕೆ ಶಿರಾ ಭಾಗವನ್ನು ಸೇರಿಸಿತ್ತು. ಇದೀಗ ಕಾಣದ ಕೈಗಳ ಒತ್ತಡದಿಂದ ಸಾರಿಗೆ ಪ್ರಾದೇಶಿಕ ಕಛೇರಿಗೆ ಸೇರಿಸಿರುದನ್ನು ಖಂಡಿಸುತ್ತೇವೆ ಎಂದರು.
ಕರವೇ ಅಧ್ಯಕ್ಷ ಕಿಶೋರ್ ಮಾತನಾಡಿ ಮಧುಗಿರಿಯ ಸಾರಿಗೆ ಪ್ರಾದೇಶಿಕ ಕಛೇರಿಗೆ ಶಿರಾ ಭಾಗದ ವಾಹನ ಚಾಲಕರು ಅದೊಂದೆ ಕೆಲಸಕ್ಕೆ ಮಾತ್ರಾ ಹೋಗಿ ಬರಬೇಕಿದ್ದು ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕಿದಂತಾಗಿದೆ. ಜಿಲ್ಲಾ ಕೇಂದ್ರದಲ್ಲಿಯೇ ಶಿರಾ ವ್ಯಾಪ್ತಿಯನ್ನು ಉಳಿಸಿದರೆ ಇತರೆ ಕಾರ್ಯಗಳಿಗೆ ತೆರಳುವ ಚಾಲಕರಿಗೆ ಅನುಕೂಲವೂ ಆಗುತ್ತದೆ. ಕೂಡಲೇ ಸರ್ಕಾರ ಜಿಲ್ಲಾ ಕೇಂದ್ರಕ್ಕೆ ವರ್ಗಾವಣೆ ಮಾಡದಿದ್ದಲ್ಲಿ ಉಗ್ರ ಹೋರಾಟ ರೂಪಿಸುವುದಾಗಿ ಎಚ್ಚರಿಸಿದರು.
ಆರ್.ವಿ.ಪುಟ್ಟಕಾಮಣ್ಣ, ರಘುರಾಮ್, ಟೈರ್ ರಂಗನಾಥ್, ಟ್ಯಾಕ್ಸಿ ಮಾಲೀಕರ ಸಂಘದ ಅಧ್ಯಕ್ಷ ನಾಗರಾಜು, ಕರವೇ ಪ್ರ. ಕಾರ್ಯದರ್ಶಿ ಬಾಬು, ಲಕ್ಷ್ಮೀಪತಿ, ಅಕ್ಷಯ ಬಾಬು, ಆಟೋ ಚಾಲಕರ ಸಂಘ ಹಾಗೂ ಟ್ಯಾಕ್ಸಿ ಮಾಲೀಕರ ಹಾಗೂ ಚಾಲಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು.