ಚಿತ್ರದುರ್ಗ:
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡ ತಪ್ಪಿನಿಂದ ಜನವಿರೋಧಿ ನರೇಂದ್ರಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಿದ್ದಾರೆ. ಕಾರ್ಮಿಕ ವಿರೋಧಿ, ಕೋಮುವಾದಿ ಬಿಜೆಪಿ.ಯನ್ನು ಕಟ್ಟಿಹಾಕುವ ಶಕ್ತಿ ಇರುವುದು ಕಮ್ಯುನಿಸ್ಟ್ ಪಕ್ಷಕ್ಕೆ ಮಾತ್ರ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ನಾತಿ ಸುಂದರೇಶ್ ಹೇಳಿದರು.
ಎ.ಪಿ.ಎಂ.ಸಿ.ಆವರಣದಲ್ಲಿರುವ ದಲ್ಲಾಲರ ಭವನದಲ್ಲಿ ಶನಿವಾರ ನಡೆದ ಭಾರತ ಕಮ್ಯುನಿಸ್ಟ್ ಪಕ್ಷ ಜಿಲ್ಲಾ ಮಂಡಳಿ ಸರ್ವ ಸದಸ್ಯರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕಮ್ಯುನಿಸ್ಟ್ ಪಕ್ಷ, ರೈತ ಸಂಘ ಹಾಗೂ ಬಿಎಸ್ಪಿಯನ್ನು ದೂರವಿಟ್ಟು ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಮಾತ್ರ ಮೈತ್ರಿ ಮಾಡಿಕೊಂಡ ಪರಿಣಾಮ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಸ್ಥಾನಗಳಲ್ಲಿ ಬಿಜೆಪಿ.ಗೆಲುವಿಗೆ ದಾರಿ ಸುಲಭವಾಯಿತು. ಬಿಜೆಪಿ.ಯನ್ನು ಸೋಲಿಸಬೇಕಾಗಿದ್ದರೆ ಎಲ್ಲಾ ಪಕ್ಷಗಳೊಡನೆ ಮಾತುಕತೆ ನಡೆಸಿ ತೀರ್ಮಾನ ಕೈಗೊಂಡಿದ್ದಾರೆ ಬಿಜೆಪಿ.ಗೆ ಗೆಲುವು ಕಷ್ಟವಾಗುತ್ತಿತ್ತು.
ಇದರಿಂದ ದೇವೇಗೌಡರದು ಕುಟುಂಬ ರಾಜಕಾರಣ ಎನ್ನುವುದು ಇಡೀ ರಾಜ್ಯಕ್ಕೆ ಗೊತ್ತಾಗಿದ್ದರಿಂದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಅವರ ಮೊಮ್ಮಗ ನಿಖಿಲ್ ಪಾರ್ಲಿಮೆಂಟ್ ಚುನಾವಣೆಯಲ್ಲಿ ಸೋಲು ಅನುಭವಿಸಬೇಕಾಯಿತು ಎಂದು ಮೈತ್ರಿ ಸರ್ಕಾರಗಳ ವೈಫಲ್ಯವನ್ನು ಟೀಕಿಸಿದರು.
ಕಮ್ಯುನಿಸ್ಟ್ ಪಕ್ಷ ಚಿಕ್ಕದಿರಬಹುದು. ಸಿದ್ದಾಂತ ದೊಡ್ಡದು. ಕುಟುಂಬ ವ್ಯಾಮೋಹ ಹಾಗೂ ಪುತ್ರ ವ್ಯಾಮೋಹದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಅನುಭವಿಸಬೇಕಾಯಿತು. ಚುನಾವಣೆಗೂ ಮುನ್ನ ಸಿಪಿಐ.ಎರಡು ಪಕ್ಷಗಳಿಗೆ ಸಲಹೆ ಕೊಟ್ಟಿತು. ಆದರೆ ನಾಯಕರುಗಳು ನಮ್ಮ ಸಲಹೆಯನ್ನು ತಿರಸ್ಕರಿಸಿದ್ದರಿಂದ ಬಿಜೆಪಿ.ಗೆ ವರದಾನವಾಯಿತು.
ಮುಸ್ಲಿಂರನ್ನು ದ್ವೇಷಿಸುವುದು, ಸರ್ಜಿಕಲ್ ಸ್ಟ್ರೈಕ್ ಹೀಗೆ ಅನೇಕ ತಂತ್ರಗಾರಿಕೆಯನ್ನು ದೇಶದ ಜನರ ಮುಂದಿಟ್ಟು, ಬೇರೆ ಪಕ್ಷಗಳ ವೈಫಲ್ಯವನ್ನು ಜನತೆಗೆ ತಿಳಿಸಿ ಬಿಜೆಪಿ. ದೇಶದಲ್ಲಿ ಅಧಿಕಾರ ಹಿಡಿಯಿತು. ಕಮ್ಯುನಿಸ್ಟ್ ಪಕ್ಷ ಕಾರ್ಡ್ ನಿಮ್ಮ ಬಳಿ ಇದ್ದರೆ ಹೆಮ್ಮೆ ಗೌರವವಿರುತ್ತದೆ. ಬಡವರು, ಕಾರ್ಮಿಕರ ಪರ ಹೋರಾಡಬೇಕೆಂದರೆ ಕೈಯಲ್ಲಿ ಕೆಂಪು ಜಂಡ ಹಿಡಿಯಬೇಕು. ಭ್ರಷ್ಟರು ನಮ್ಮ ಕಾರ್ಡ್ನ್ನು ಮುಟ್ಟಲು ಆಗುವುದಿಲ್ಲ.
ಕಾಂಗ್ರೆಸ್-ಜೆಡಿಎಸ್. ಭ್ರಮೆಯಿಂದ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳು ಸೋಲಬೇಕಾಯಿತು. ಇವೆಲ್ಲವನ್ನು ಭಾರತ ಕಮ್ಯುನಿಸ್ಟ್ ಪಕ್ಷ ಜಿಲ್ಲಾ ಮಂಡಳಿ ಸದಸ್ಯರುಗಳು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ತಿಳಿಸಿದರು.ಭಾರತ ಕಮ್ಯುನಿಸ್ಟ್ ಪಕ್ಷ ಸಹ ಕಾರ್ಯದರ್ಶಿ ಡಾ.ಜನಾರ್ಧನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಶಿವಣ್ಣ, ಕಾರ್ಯದರ್ಶಿ ಸಿ.ವೈ.ಶಿವರುದ್ರಪ್ಪ, ಸಹ ಕಾರ್ಯದರ್ಶಿ ಜಿ.ಸಿ.ಸುರೇಶ್ಬಾಬು, ತಾಲೂಕು ಕಾರ್ಯದರ್ಶಿ ಟಿ.ಆರ್.ಉಮಾಪತಿ, ಎ.ಪಿ.ಎಂ.ಸಿ.ಹಮಾಲರ ಸಂಘದ ಮುಖಂಡ ಬಿ.ಬಸವರಾಜ್, ದೊಡ್ಡಉಳ್ಳಾರ್ತಿ ಕರಿಯಣ್ಣ, ಪಾಲವ್ವನಹಳ್ಳಿ ಪ್ರಸನ್ನಕುಮಾರ್, ಹೊಳಲ್ಕೆರೆ ತಾಲೂಕು ಕಾರ್ಯದರ್ಶಿ ಮಹೇಶ್ವರಿ ವೇದಿಕೆಯಲ್ಲಿದ್ದರು.