ರೈತ ಮಾಯಣ್ಣನಿಂದ ಕೃಷಿ ವಿವಿ ವಿದ್ಯಾರ್ಥಿಗಳಿಗೂ ಪಾಠ..!

ಗುಬ್ಬಿ

     ಸಾವಯವ ಮತ್ತು ಸಹಜ ಕೃಷಿ ವಿಧಾನಗಳನ್ನು ಅಳವಡಿಸಿಕೊಂಡು ಕೃಷಿ ಮತ್ತು ತೋಟದ ಬೆಳೆಗಳನ್ನು ಬೆಳೆಯುವುದರ ಜೊತೆಗೆ, ರೈತರು ಮತ್ತು ಕೃಷಿ ವಿಶ್ವ ವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಾವಯವ ಕೃಷಿ ವಿಧಾನಗಳ ಬಗ್ಗೆ ಸೂಕ್ತ ಮಾಹಿತಿ ಮಾರ್ಗದರ್ಶನ ನೀಡುತ್ತಿರುವ ತಾಲ್ಲೂಕಿನ ಅಮ್ಮನಘಟ್ಟದ ಸಾವಯವ ಕೃಷಿಕ ಮಾಯಣ್ಣ ಎಲೆಮರೆಯ ಕಾಯಿಯಂತೆ ಕೃಷಿ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

      ಸಾವಯವ ಕೃಷಿ ವಿಧಾನದಿಂದ ಅಧಿಕ ಇಳುವರಿ ಮತ್ತು ಉತ್ತಮ ಗುಣಮಟ್ಟದ ಬೆಳೆಗಳನ್ನು ಬೆಳೆಯಬಹುದೆಂಬುದನ್ನು ತಮ್ಮ ತೋಟದಲ್ಲಿ ಮಾಡಿ ತೋರಿಸುವ ಮೂಲಕ ಮಾದರಿ ಕೃಷಿಕರಾಗಿದ್ದಾರೆ. ಇಡೀ ತೋಟಕ್ಕೆ ಯಾವುದೆ ರೀತಿಯ ರಾಸಾಯನಿಕ ಗೊಬ್ಬರಗಳನ್ನು ಬಳಸದೆ ಶೂನ್ಯ ಕೃಷಿ ವಿಧಾನದಿಂದ ತೆಂಗು, ಬಾಳೆ, ನಿಂಬೆ, ಕಾಫೀ, ಮೆಣಸು ಸೇರಿದಂತೆ ವಿವಿಧ ಜಾತಿಯ ಹಣ್ಣು ಮತ್ತು ತರಕಾರಿ ಗಿಡಗಳನ್ನು ಬೆಳೆದು ತೋರಿಸಿದ್ದಾರೆ. ಇವರ ತೋಟ ಒಂದು ರೀತಿಯ ಕೃಷಿ ಪಾಠ ಶಾಲೆಯಂತಾಗಿದೆ. ಪ್ರತಿ ನಿತ್ಯ ಒಂದಿಲ್ಲೊಂದು ಕೃಷಿ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ಸೇರಿದಂತೆ ರೈತರು ಭೇಟಿ ನೀಡಿ ಇವರ ಸಾವಯವ ಕೃಷಿ ವಿಧಾನಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

      ಕೃಷಿ ಅಭಿವೃದ್ದಿಯ ಜೊತೆಗೆ ಅರಣ್ಯ ಸಂರಕ್ಷಣೆ, ಅಂತರ್ಜಲ ಸಂರಕ್ಷಣೆ, ಸಂಪೂರ್ಣ ಪ್ಲ್ಲಾಸ್ಟಿಕ್ ನಿಷೇಧ, ನೀರಿನ ಮರುಬಳಕೆ ವಿಧಾನಗಳ ಬಗ್ಗೆ ಮಾಹಿತಿ ನೀಡಲು ವಿಶೇಷವಾಗಿ ಮಣ್ಣಿನ ಮನೆಯನ್ನೆ ನಿರ್ಮಿಸಿ ಅಲ್ಲಿ ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಮಡಕೆ, ಕುಡಿಕೆ, ರಾಗಿ ಕಲ್ಲು, ಸಾವಯ ಸಿರಿಧಾನ್ಯಗಳನ್ನು ಬಳಸುವ ವಿಧಾನಗಳ ಬಗ್ಗೆ ವಿವಿಧ ಪ್ರಾತ್ಯಕ್ಷಿಕೆಗಳು ಮತ್ತು ಚಾರ್ಟ್‍ಗಳನ್ನು ತೂಗು ಹಾಕಿದ್ದಾರೆ. ಮಣ್ಣಿನ ಮನೆಗೆ ಭೇಟಿ ನೀಡುವ ರೈತರು ಮತ್ತು ವಿದ್ಯಾರ್ಥಿಗಳಿಗೆ ವಿಶೇಷವಾಗಿ ಮಾಹಿತಿ ಮತ್ತು ಮಾರ್ಗದರ್ಶನಗಳನ್ನು ನೀಡುತ್ತಿದ್ದಾರೆ. ಅಲ್ಲದೆ ಭೇಟಿ ನೀಡುವ ವಿದ್ಯಾರ್ಥಿಗಳು ಮತ್ತು ರೈತರಿಗೆ ಸಿರಿಧಾನ್ಯಗಳಿಂದ ತಯಾರಿಸಿದ ಊಟ ತಿಂಡಿಗಳನ್ನು ಉಣಬಡಿಸುವ ಮೂಲಕ ಸಿರಿಧಾನ್ಯಗಳ ಊಟದ ರುಚಿ ತೋರಿಸುತ್ತಿದ್ದಾರೆ.

       ಇದುವರೆಗೆ ಕೇವಲ ವಿದ್ಯಾರ್ಥಿಗಳು ಮತ್ತು ರೈತರಿಗೆ ಮಾರ್ಗದರ್ಶನ ಕೇಂದ್ರವಾಗಿದ್ದ ಇವರ ತೋಟ, ಇದೀಗ ಪ್ರಕೃತಿ ಚಿಕತ್ಸಕರು ಮತ್ತು ಯೋಗಾಭ್ಯಾಸದಲ್ಲಿ ತೊಡಗಿರುವವರಿಗೊಂದು ಉತ್ತಮ ವೇದಿಕೆಯಾಗುತ್ತಿದೆ. ಪ್ರಕೃತಿ ಚಿಕಿತ್ಸಕರಾದ ಜಿ.ವಿ.ವಿ.ಶಾಸ್ತ್ರಿಯವರ ನೇತೃತ್ವದಲ್ಲಿ ಬೆಂಗಳೂರು ಮತ್ತು ತುಮಕೂರಿನಿಂದ ಆಗಮಿಸಿದ ಸುಮಾರು ಒಂದು ನೂರಕ್ಕೂ ಹೆಚ್ಚು ಮಹಿಳೆಯರು ಮತ್ತು ಪುರುಷರು ಜಪಾನ್ ಮಿಯಾವಾಕಿ ಮಾದರಿಯಲ್ಲಿ ತಾವೆ ಸ್ವತಃ ಗುಣಿ ತೆಗೆದು ಗಿಡಗಳನ್ನು ನೆಟ್ಟು ಜೀವಾಮೃತ ಹಾಕಿ, ವಿನೂತನ ಮಾದರಿಯಲ್ಲಿ ಗಿಡಗಳನ್ನು ನೆಡುವ ಮೂಲಕ ಅರಣ್ಯಾಭಿವೃಧ್ದಿಗೆ ಮುಂದಾಗಿದ್ದಾರೆ. ಉತ್ತರಖಂಡ ರಾಜ್ಯದಿಂದ ಆಗಮಿಸಿದ ಕೃಷಿ ತಜ್ಞೆ ಶೀಬಾ, ಗಿಡ ನೆಡುವ ಮತ್ತು ಗಿಡಗಳ ಆರೈಕೆ ಬಗ್ಗೆ ಸಮಗ್ರವಾದ ಮಾಹಿತಿ ನೀಡಿದರು. ವಿನಾಶದಂಚಿಗೆ ತಲುಪಿರುವ ನಮ್ಮ ಅಮೂಲ್ಯವಾದ ಪರಿಸರವನ್ನು ಹೇಗೆ ಸಂರಕ್ಷಿಸಿಕೊಳ್ಳಬೇಕು ಮತ್ತು ಸಾವಯವ ಕೃಷಿ ವಿಧಾನದಿಂದ ಕೃಷಿ ಉತ್ಪನ್ನಗಳನ್ನು ಹೇಗೆ ಬೆಳೆಯಬಹುದೆಂಬುದರ ಬಗ್ಗೆ ಸಮಗ್ರವಾದ ಮಾಹಿತಿ ನೀಡಿದರು.

        ಭಾನುವಾರವಾಗಿದ್ದರಿಂದ ನೂರಾರು ಜನ ಈ ವಿಶೇಷ ಕಾರ್ಯಕ್ರಮದಲ್ಲಿ ತಮ್ಮ ಮಕ್ಕಳೊಂದಿಗೆ ಭಾಗವಹಿಸುವ ಮೂಲಕ ತಾವೆ ತಮಗೆ ಬೇಕಾದ ಗಿಡಗಳನ್ನು ಆಯ್ಕೆ ಮಾಡಿಕೊಂಡು ಖುಷಿಯಿಂದ ಗುಣಿ ತೆಗೆದು ಗಿಡ ನೆಡುತ್ತಿದ್ದುದು ವಿಶೇಷವಾಗಿತ್ತು. ಸಿರಿಧಾನ್ಯಗಳಿಂದ ತಯಾರಿಸಿದ ತಿಂಡಿ ಮತ್ತು ಊಟದ ರುಚಿ ಮತ್ತಷ್ಟು ಖುಷಿ ನೀಡಿತ್ತು. ಬೆಳಗ್ಗೆ ರಾಗಿ ಮತ್ತು ಮೊಳಕೆ ಕಾಳಿನಿಂದ ತಯಾರಿಸಿದ ಇಡ್ಲಿ ಮತ್ತು ಹಸಿ ಮೂಲಂಗಿ ಚಟ್ನಿ ಮಧ್ಯಾಹ್ನ ಸಿರಿಧಾನ್ಯಗಳಿಂದ ತಯಾರಿಸಿದ ನವಣೆ ಪಾಯಸ, ಹೆಸರುಕಾಳು ಮೊಳಕೆ ಪಲ್ಯ, ಕೆಂಪಕ್ಕಿ ಅನ್ನ, ವಿವಿಧ ಸೊಪ್ಪುಗಳಿಂದ ತಯಾರಿಸಿದ ಸಾರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ ಹೊಸ ಅನುಭವ ನೀಡಿತು.

      ಇದರ ಜೊತೆಗೆ ಸ್ಥಳದಲ್ಲಿಯೆ ಮಣ್ಣಿನ ಉತ್ಪನ್ನಗಳನ್ನು ತಯಾರಿಸುವ ವಿಧಾನಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ಜೇಡಿ ಮಣ್ಣಿನಿಂದ ಮಡಕೆ ತಯಾರಿಸುವ ವಿಧಾನ, ಮಣ್ಣಿನ ದೀಪಗಳ ತಯಾರಿಕೆ, ವಿವಿಧ ಮಣ್ಣಿನ ಮಾದರಿಗಳನ್ನು ತಯಾರಿಸಿ ನೋಡುಗರಿಗೆ ನೀಡುತ್ತಿದ್ದರು. ಪ್ರತಿಯೊಬ್ಬರು ಒಂದೊಂದು ಮಣ್ಣಿನ ಕಲಾಕೃತಿಗಳನ್ನು ಕೈಯಲ್ಲಿ ಹಿಡಿದು ಖುಷಿ ಪಡುತ್ತಿದ್ದರು. ತುಮಕೂರಿನ ಪ್ರಕೃತಿ ಚಿಕಿತ್ಸಕರಾದ ಜಿವಿವಿ ಶಾಸ್ತ್ರಿಯವರು ಮಾತನಾಡಿ ಇಂತಹ ವಾತಾವರಣ ಮತ್ತು ಸಾವಯವ ಸಿರಿಧಾನ್ಯಗಳಿಂದ ತಯಾರಿಸಿದ ತಿಂಡಿ ಮತ್ತು ಊಟ ಮಹತ್ವಪೂರ್ಣವಾಗಿದ್ದು, ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಉತ್ತಮ ಆರೋಗ್ಯವಂತ ರಾಗುವಂತೆ ತಿಳಿಸಿದರು.

       ಸಾವಯವ ಕೃಷಿಕ ಮಾಯಣ್ಣ ಮಾತನಾಡಿ, ಕಳೆದ ಹಲವು ವರ್ಷಗಳಿಂದಲೂ ನಿರಂತರವಾಗಿ ಸಾವಯವ ಕೃಷಿ ವಿಧಾನಗಳಿಂದ ಉತ್ತಮ ಗುಣಮಟ್ಟದ ಬೆಳೆಗಳನ್ನು ಬೆಳೆಯುತ್ತಿದ್ದು, ಇಲ್ಲಿಗೆ ಬರುವ ವಿದ್ಯಾರ್ಥಿಗಳು ರೈತರಿಗೆ ಸಾವಯವ ಕೃಷಿ ಮತ್ತು ಸಿರಿಧಾನ್ಯಗಳ ಬಳಕೆ ಬಗ್ಗೆ ಮಣ್ಣಿನ ಮನೆಯಲ್ಲಿ ಮಾಹಿತಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ರೈತರು ಮತ್ತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗುವುದೆಂದು ತಿಳಿಸಿದರು. ಯೋಗ ಶಿಕ್ಷಕ ವಾಸುದೇವಾಚಾರ್ ತಮ್ಮ ಯೋಗಭ್ಯಾಸದ ತಂಡದೊಂದಿಗೆ ಭಾಗವಹಿಸಿ ಇಲ್ಲಿನ ಪರಿಸರ ಮತ್ತು ಸಾವಯವ ಕೃಷಿ ವಿಧಾನಗಳ ಬಗ್ಗೆ ಪರಿಚಯಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap